ಬಿಎಸ್‌ವೈ ಪಕ್ಷ ತೊರೆದರೆ ನಷ್ಟವಿಲ್ಲ : ಧರ್ಮೇಂದ್ರ ಪ್ರಧಾನ್

ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರ ನೇತೃತ್ವದಲ್ಲಿ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಸಭೆಯಲ್ಲಿ, ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಮತ್ತೆ ಮನವೊಲಿಸದಿರಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಯಡಿಯೂರಪ್ಪನವರು ಪಕ್ಷದಲ್ಲೇ ಇರಬೇಕೆಂದು ಸಾಕಷ್ಟು ಪ್ರಯತ್ನ ನಡೆಸಲಾಯಿತು. ಅವರಿಗೆ ಕೂಡ ಸಾಕಷ್ಟು ಅವಕಾಶ ನೀಡಲಾಯಿತು. ಆದರೆ, ಅವರ ಮನವೊಲಿಕೆಯ ಯತ್ನವೆಲ್ಲ ವಿಫಲವಾಯಿತು. ಅವರು ಭಾರತೀಯ ಜನತಾ ಪಕ್ಷ ತೊರೆದರೆ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ, ಅವರು ಪಕ್ಷ ಬಿಟ್ಟರೆ ಬಿಜೆಪಿಯ ತಪ್ಪೂ ಅಲ್ಲ ಎಂದು ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ಸಭೆಯ ನಂತರ ತಿಳಿಸಿದರು.
ಒಂದು ವೇಳೆ ಯಡಿಯೂರಪ್ಪ ಬಿಜೆಪಿ ತ್ಯಜಿಸಿದರೆ ಪಕ್ಷದಲ್ಲಿರುವ ಶಾಸಕರು ಮತ್ತು ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ಅವರು ಪಕ್ಷ ತೊರೆದರೆ ಯಾವುದೇ ನಷ್ಟವಿಲ್ಲ. ಮುಂದೆ ಪಕ್ಷವನ್ನು ಇನ್ನಷ್ಟು ಬಲಪಡಿಸಲು, ಚುನಾವಣೆ ಎದುರಿಸಲು ಮತ್ತು ಪಕ್ಷಕ್ಕೆ ಶಕ್ತಿ ತುಂಬಲು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರಿದ್ದಾರೆ. ಕಾರ್ಯಕರ್ತರೇ ನಮ್ಮ ನಿಜವಾದ ಶಕ್ತಿ ಎಂದು ಪ್ರಧಾನ್ ನುಡಿದರು.
ಇಂದಿನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಮುಂತಾದವರು ಭಾಗವಹಿಸಿದ್ದರು. ಒಂದು ವೇಳೆ ಯಡಿಯೂರಪ್ಪ ಪಕ್ಷ ಬಿಟ್ಟರೆ ಬಿಜೆಪಿಯಲ್ಲಿ ಉದ್ಭವಿಸಬಹುದಾದ ಬಿಕ್ಕಟ್ಟು ಎದುರಿಸಲು ಮತ್ತು ಯಡಿಯೂರಪ್ಪ ಹಿಂಬಾಲಕರು ಪಕ್ಷ ಬಿಡದಂತೆ ಕ್ರಮ ಕೈಗೊಳ್ಳುವ ಹಾಗೂ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಕಾರ್ಯತಂತ್ರ ರೂಪಿಸುವ ಕುರಿತು ಸಾಕಷ್ಟು ಚರ್ಚೆ ನಡೆಸಲಾಯಿತು.
ಯೋಜಿಸಿದಂತೆ ಶನಿವಾರ ಸಂಜೆ ಪ್ರಧಾನ್ ಅವರು ಯಡಿಯೂರಪ್ಪನವರನ್ನು ಮತ್ತೆ ಭೇಟಿ ಮಾಡಲಿದ್ದಾರಾ? ಇನ್ನೂ ತಿಳಿದುಬಂದಿಲ್ಲ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿಯವರು ಯಡಿಯೂರಪ್ಪನವರನ್ನು ಭೇಟಿಯಾಗಲು ವಿಫಲವಾಗಿ ಹಿಂತಿರುಗಿದ್ದರು. ಮತ್ತೊಮ್ಮೆ ಭೇಟಿಯಾದರೆ ಯಡಿಯೂರಪ್ಪ ಪಕ್ಷದಲ್ಲೇ ಉಳಿಯಲು ಒಪ್ಪುತ್ತಾರೆ ಎಂಬ ನಂಬಿಕೆಯೂ ಬಿಜೆಪಿ ನಾಯಕರಿಗೆ ಉಳಿದಿಲ್ಲ.












Click it and Unblock the Notifications