ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ: ಶೆಟ್ಟರ್

ಯಾವುದೇ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಮ್ಮ ಸರ್ಕಾರ ಯಾವ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಅವರು ಬುಧವಾರ ಹೇಳಿದ್ದಾರೆ.
ಮಕ್ಕಳ ದಿನಾಚರಣೆ ದಿನ ಈ ಸಿಹಿ ಸುದ್ದಿಯನ್ನು ನೀಡಿದ ಶೆಟ್ಟರ್ ಮಾತನಾಡುತ್ತಾ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದರು.
ಮಕ್ಕಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಯನ್ನು ಸರ್ಕಾರ ಶೀಘ್ರದಲ್ಲೇ ಹೊರ ತರಲಿದೆ. ಇನ್ನಷ್ಟು ಸರ್ಕಾರಿ ಕನ್ನಡ ಶಾಲೆಗಳನ್ನು ಆರಂಭಿಸುವ ಸಾಧ್ಯತೆ ಕೂಡಾ ಇದೆ ಎಂದು ಸಿಎಂ ಶೆಟ್ಟರ್ ಹೇಳಿದರು.
ಶಾಲೆಗಳಲ್ಲಿ 2-3 ವಿದ್ಯಾರ್ಥಿಗಳಿರಲಿ, ನಾಲ್ಕೈದು ಶಿಕ್ಷಕರಿರಲಿ ನಾವು ಶಾಲೆ ಮುಚ್ಚುವುದಿಲ್ಲ. ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸುತ್ತೇವೆ ಎಂದು ಶೆಟ್ಟರ್ ಹೇಳಿದರು.
ಕಡಿಮೆ ಮಕ್ಕಳ ಹಾಜರಾತಿವಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಅಥವಾ ಬೇರೆ ಶಾಲೆಗಳ ಜೊತೆ ವಿಲೀನಗೊಳಿಸುವ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಚಂದ್ರಶೇಖರ್ ಕಂಬಾರ ಅಲ್ಲದೆ ಚನ್ನವೀರ ಕಣವಿ ಮುಂತಾದವರು, ಸರಕಾರದ ಶಾಲೆ ಮುಚ್ಚುವ ನಿರ್ಧಾರವನ್ನು ಪ್ರಶ್ತ್ನಿಸಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ ಹೈಕೋರ್ಟ್ ಪ್ರಕಾರ, ಐದಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಸರಕಾರಿ ಶಾಲೆಗಳನ್ನು 1 ಕಿ.ಮೀ. ವ್ಯಾಪ್ತಿಯಲ್ಲಿರುವ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಬೇಕು. ಆ ಮತ್ತೊಂದು ಶಾಲೆ 3 ಕಿ.ಮೀ. ವ್ಯಾಪ್ತಿಯಲ್ಲಿ ಇರದಿದ್ದರೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡಬೇಕು.
ಹಾಗೆಯೆ, 6ನೇ ತರಗತಿಯಿಂದ 8ನೇ ತರಗತಿಯವರೆಗೆ ಸರಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರೆ ಅಂತಹ ಶಾಲೆಗಳನ್ನು ಕೂಡ 3 ಕಿ.ಮೀ. ವ್ಯಾಪ್ತಿಯೊಳಗಿನ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಬೇಕು.
6ನೇ ತರಗತಿಯಿಂದ ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಬೇಕೆಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕ ಹೈಕೋರ್ಟಿನಿಂದ ಸರ್ಕಾರ ಪರ ಆದೇಶ ಬಂದಿತ್ತು.
ಆದರೆ, ನಂತರ ಸರ್ಕಾರಕ್ಕೆ ಹಿನ್ನಡೆ ಉಂಟಾಗಿ ಶಾಲೆ ಮುಚ್ಚುವ ನಿರ್ಧಾರಕ್ಕೆ ತಡೆ ನೀಡಲಾಗಿತ್ತು.
ರಾಜ್ಯದಲ್ಲಿ ಶಿಕ್ಷಕರಿದ್ದೆಡೆ ಮಕ್ಕಳಿಲ್ಲ, ಭರ್ತಿ ಮಕ್ಕಳಿದ್ದೆಡೆ ಶಿಕ್ಷಕರೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಹಾಗೆಯೆ, ಶಿಕ್ಷಕರಿದ್ದು, ಮಕ್ಕಳೂ ಇದ್ದರೂ ಅವರಿಗೆ ಸರಿಯಾದ ಕಟ್ಟಡವೂ ಇಲ್ಲ ಎಂಬಂಥ ಗ್ರಾಮಗಳು ಅನೇಕವಿದೆ ಎಂಬುದನ್ನು ಮರೆಯುವಂತಿಲ್ಲ.












Click it and Unblock the Notifications