1,100 ಕೋಟಿ ರು ವಂಚಿಸಿದ ಐನಾತಿ ದಂಪತಿ ಸೆರೆ

ಸುಮಾರು 500 ಕೋಟಿ ರು ಬಂಡವಾಳ ಹೂಡಿಕೆ ಮಾಡಿದ್ದ 2 ಲಕ್ಷಕ್ಕೂ ಅಧಿಕ ಹೂಡಿಕೆದಾರರಿಗೆ ಈ ದಂಪತಿ ವಂಚಿಸಿರುವ ಆರೋಪ ಹೊತ್ತಿದ್ದಾರೆ. ಉಲ್ಲಾಸ್ ಪ್ರಭಾಕರ್ ಖಾರೆ ಹಾಗೂ ಅವರ ಪತ್ನಿ ರಕ್ಷ ಅವರು ತಮ್ಮ ಸ್ಟಾಕ್ ಗುರು ಇಂಡಿಯಾ ಎಂಬ ಸಂಸ್ಥೆ ಮೂಲಕ ಗ್ರಾಹಕರನ್ನು ಸೆಳೆದು ಮೋಸ ಮಾಡಿದ ಆರೋಪ ಹೊಂದಿದ್ದಾರೆ.
ಸ್ಟಾರ್ ಗುರು ಇಂಡಿಯಾ ಸಂಸ್ಥೆಯಲ್ಲಿ ತೊಡಗಿಸುವ ಹಣಕ್ಕೆ ತಿಂಗಳಿಗೆ ಶೇ 20 ರಷ್ಟು ಬಡಿ ನೀಡುವ ಭರವಸೆ ನೀಡಿದ್ದರು. ಸೆಬಿ ನಿಯಮ, ಷೇರು ಮಾರುಕಟ್ಟೆ ಗಂಧ ಗಾಳಿ ಗೊತ್ತಿಲ್ಲದ ಗ್ರಾಹಕರು ಈ ಆಮಿಷಕ್ಕೆ ಬಲಿಯಾಗಿದ್ದಾರೆ.
ವಾರ್ಷಿಕ ಶೇ 120 ರಷ್ಟು ರಿಟರ್ನ್ ಅಲ್ಲದೆ ಏಳು ತಿಂಗಳಿನಲ್ಲೇ ಅಸಲು ವಾಪಸ್ ಪಡೆಯುವ ಅವಕಾಶ ಒದಗಿ ಬಂದ ತಕ್ಷಣ ಗ್ರಾಹಕರು ಹಿಂದು ಮುಂದು ನೋಡದೆ ಹಣ ತೊಡಗಿಸಿದ್ದಾರೆ.
ರಾಜಸ್ಥಾನ, ಉತ್ತರಾಖಂಡ್, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಸಿಕ್ಕಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ದಂಪತಿ ತಮ್ಮ ಜಾಲವನ್ನು ವಿಸ್ತರಿಸಿದ್ದರು.
ಸುಮಾರು 500 ಕೋಟಿ ರು ಒಟ್ಟುಗೂಡಿದ ಮೇಲೆ ಉಲ್ಲಾಸ್ ಹಾಗೂ ರಕ್ಷಾ ಗಂಟು ಮೂಟೆ ಕಟ್ಟಿಕೊಂಡು ಪರಾರಿಯಾಗಿದ್ದರು. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದರು.
ನಾಗಪುರ ಮೂಲದ ಈ ಜೋಡಿ ವಿರುದ್ಧ ಈ ಹಿಂದೆ 2004ರಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆದರೆ, ಯಾರ ಕೈಗೂ ಸಿಗದೆ ಆರಾಮವಾಗಿ ವ್ಯಾಪಾರ ಮುಂದುವರೆಸಿದ್ದರು.
ಕೊನೆಗೂ ದೆಹಲಿ ಪೊಲೀಸರು ಉಲ್ಲಾಸ್ ಹಾಗೂ ರಕ್ಷಾ ಅವರನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಿದಾರೆ. ಮಹಾರಾಷ್ಟ್ರ ಪ್ರವೇಶಿಸಿದ ಮೇಲೆ ಈ ದಂಪತಿ ಸಿದ್ದಾರ್ಥ್ ಮಾರಾಠೆ ಹಾಗೂ ಮಾಯಾ ಮರಾಠೆ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
ಗೋವಾದಲ್ಲಿರುವಾಗ ಲೋಕೇಶ್ವರ್ ಬೀರ್ ದೇವ್ ಎಂಬ ಹೆಸರನ್ನು ಸಹ ಉಲ್ಲಾಸ್ ಹೊಂದಿದ್ದ ಎಂದು ತಿಳಿದು ಬಂದಿದೆ.
ಬ್ಲೇಡ್ ಕಂಪನಿ ಆರಂಭಕ್ಕೂ ಮುನ್ನ ಈ ಜೋಡಿ ಶ್ರೀಮಂತ ಕುಳಗಳನ್ನು ಗುರುತಿಸಿ ಅವರ ಕ್ರೆಡಿಟ್ ಕಾರ್ಡ್ ಕದಿಯುವ ಕೆಲಸದಲ್ಲಿ ತೊಡಿಗಿತ್ತು.
ಇವರ ಬಳಿ ಅನೇಕ ನಕಲಿ ಪಾಸ್ ಪೋರ್ಟ್ , 20 ಬ್ಯಾಂಕ್ ಗಳಲ್ಲಿ 94ಕ್ಕೂ ಅಧಿಕ ಖಾತೆಗಳಿದೆ. ಅಕ್ರಮ ಗಳಿಕೆಯಿಂದ ಅನೇಕ ಕಡೆ ಜಮೀನು, ಮನೆ ಖರೀದಿಸಿರುವ ಸಾಧ್ಯತೆಯಿದೆ. ಇನ್ನೂ ಪರಿಶೀಲನೆ ಮಾಡಬೇಕಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ವಂಚನೆ ಮೊತ್ತ 1100 ಕೋಟಿ ರು?: ಈ ಜೋಡಿ ವಿರುದ್ಧ ದೆಹಲಿಯೊಂದರಲ್ಲೇ ಸುಮಾರು 14,303 ದೂರುಗಳು ದಾಖಲಾಗಿತ್ತು. ಸ್ಟಾಕ್ ಗುರು ಇಂಡಿಯಾದ ಲ್ಲಿ ಸುಮಾರು 10,000 ರು ನಿಂದ 60 ಲಕ್ಷ ರು ವರೆಗೂ ಹೂಡಿಕೆ ಮಾಡಲಾಗಿತ್ತು.
ಸ್ಟಾಕ್ ಗುರು ಇಂಡಿಯಾ ಕಂಪನಿ ಮೂಲಕ ನಡೆಸಲಾದ ವಂಚನೆಯ ಮೊತ್ತ 493 ಕೋಟಿ ರು ನಷ್ಟಿದೆ. ಇನ್ನು ದೂರುಗಳ ಪರಿಶೀಲನೆ ಜಾರಿಯಲ್ಲಿದ್ದು 1,100 ಕೋಟಿ ರು ನಷ್ಟು ವಂಚನೆ ನಡೆದಿರುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಬಂಧಿತ ಜೋಡಿ ಬಳಿ ಇದ್ದ 63 ಕೋಟಿ ರು ನಗದು ಹಣ, ದ್ವಾರಕಾದಲ್ಲಿ 8 ಫ್ಲ್ಯಾಟ್ ಹೊಂದಿರುವ ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












Click it and Unblock the Notifications