ಹಿಂದೂ ಜೊತೆಯಿದ್ದ ಮುಸ್ಲಿಂ ಯುವತಿಯ ಮೇಲೆ ಹಲ್ಲೆ

23 ವರ್ಷದ ದೀಬಾ ಅಲ್ಗನಿ ಎಂಬಾಕೆ ಥಳಿತಕ್ಕೊಳಗಾಗಿರುವ ಮತ್ತು ಹಣ ಕಳೆದುಕೊಂಡಿರುವ ಯುವತಿ. ದೀಬಾ ಅವರ ತಾಯಿ ಜುಬೇದಾ ಅವರು ಪಡುಬಿದ್ರಿ ಗ್ರಾಮ ಪಂಚಾಯತ್‌ನ ಸ್ವತಂತ್ರ ಸದಸ್ಯೆಯಾಗಿದ್ದು, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
"ಅಪರಿಚಿತ ಯುವಕರು ನಮ್ಮ ಕಾರನ್ನು ಅಡ್ಡಗಟ್ಟಿ, ನಮ್ಮಿಬ್ಬರನ್ನು ಹೊರಗೆಳೆದರು. ನಾನೇಕೆ ಹಿಂದೂ ಜೊತೆ ಪ್ರಯಾಣಿಸುತ್ತಿದ್ದೇನೆಂದು ಪ್ರಶ್ನಿಸಿದರು. ನನ್ನ ಉತ್ತರಕ್ಕೆ ಕೂಡ ಅವಕಾಶ ನೀಡದೆ, ನನ್ನ ಬಳಿಯಿದ್ದ ಮೊಬೈಲ್ ಮತ್ತು 3.07 ಲಕ್ಷ ರು. ಹಣ ಕಸಿದುಕೊಂಡು ಮನಬಂದಂತೆ ಥಳಿಸಿದರು. ಬಿಯರಿ ಭಾಷೆಯಲ್ಲಿ ಮಾತನಾಡುತ್ತಿದ್ದ ಅವರನ್ನು ನಾನು ಗುರುತಿಸಬಲ್ಲೆ" ಎಂದು ದೀಬಾ ಪೊಲೀಸರಿಗೆ ಹೇಳಿದ್ದಾರೆ.
ದೀಬಾ ತಾಯಿ ಹೇಳುವುದೇನೆಂದರೆ, "ನಾನು ವಾರದ ಹಿಂದೆ ಧರ್ಮ ಎಂಬುವವರಿಂದ ಮನೆ ಭೋಗ್ಯಕ್ಕೆ ಪಡೆದಿದ್ದೆ. ಆ ಹಣ ನೀಡಲೆಂದು ದೀಬಾ ಕಾರಿನಲ್ಲಿ ಡ್ರೈವರ್ ಜೊತೆ ತೆರಳುತ್ತಿದ್ದರು. ಆಗ ಕಿಡಿಗೇಡಿಗಳು ಮಗಳನ್ನು ಸುತ್ತುವರಿದು, ಮೊಬೈಲ್ ಕಿತ್ತುಕೊಂಡು, ನಾನು ನೀಡಿದ್ದ 3 ಲಕ್ಷ ರು. ಮತ್ತು ಮಗಳ ಬಳಿಯಿದ್ದ 7 ಸಾವಿರ ರು. ಕಿತ್ತುಕೊಂಡು ಪರಾರಿಯಾಗಿದ್ದಾರೆ."
ದೀಬಾ ಅಲ್ಲದೆ, ಆಕೆಯ ಜೊತೆ ಇದ್ದ ಧರ್ಮನಿಗೂ ಏಟುಗಳು ಬಿದ್ದಿವೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯನ್ನು ಥಳಿಸಿ ಹಣ ಕಿತ್ತು ಪರಾರಿಯಾದ ಯುವಕರ ತಂಡದ ಹುಡುಕಾಟದಲ್ಲಿ ತೊಡಗಿದ್ದಾರೆ. ಮಂಗಳೂರು ಹೋಂಸ್ಟೇ ಘಟನೆಗೆ ಸಂಬಂಧಿಸಿದಂತೆ, ಆ ಘಟನೆಯನ್ನು ಚಿತ್ರೀಕರಿಸಿದ್ದ ಪತ್ರಕರ್ತನನ್ನು ಬಂಧಿಸಿರುವ ಸಂದರ್ಭದಲ್ಲಿಯೇ ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆದಿದೆ.












Click it and Unblock the Notifications