ಅನಂತ್-ಶೆಟ್ಟರ್ ಭೇಟಿ, ಯಡಿಯೂರಪ್ಪ ಸಭೆ ಡಿ 9ಕ್ಕೇ

ಈ ದಿಢೀರ್ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಒಂದೆಡೆ ಪಕ್ಷದ ಹಿರಿಯ ನಾಯಕರು ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಕೊಳ್ಳುವ ಮಾತನ್ನಾಡುತ್ತಿದ್ದು, ಯಡಿಯೂರಪ್ಪ ವಿರುದ್ಧ ಯಾರೂ ಚಕಾರ ಎತ್ತಬಾರದು ಫರ್ಮಾನು ಹೊರಡಿಸಿರುವ ಸಂದರ್ಭದಲ್ಲೇ ಅನಂತ್ ಮತ್ತು ಶೆಟ್ಟರ್ ಭೇಟಿ ಗಮನಾರ್ಹವಾಗಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಲಾಢ್ಯ ಸಂಖ್ಯೆಯ ಬೆಂಬಲಿಗರೆದುರು ಡಿ. 10ಕ್ಕೆ ತಮ್ಮ ನೂತನ ಪಕ್ಷಕ್ಕೆ ಚಾಲನೆ ನೀಡುವುದಾಗಿ ಹೇಳಿದ್ದರು. ಇದು ಬಿಜೆಪಿಯ ನಿದ್ದೆಗೆಡಿಸಿದೆ. ಹಾಗಾಗಿ ಯಡಿಯೂರಪ್ಪ ವಿರೋಧಿ ಪಾಳಯ ಚುರುಕಾಗಿದೆ.
ಇದೀಗ ತಾನೆ ಬಂದ ಸುದ್ದಿ: ಯಡಿಯೂರಪ್ಪನವರು ತಮ್ಮ ಬಹುನಿರೀಕ್ಷಿತ ಡಿ. 10ರ ಹಾವೇರಿ ಸಮಾವೇಶವನ್ನು ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಡಿ.9 ಭಾನುವಾರವೇ ನಡೆಸಲು ಉದ್ದೇಶಿಸಿರುವುದಾಗಿ ಪ್ರಕಟಿಸಿದ್ದಾರೆ. ಇದೇ ವೇಳೆ ಬಿಜೆಪಿ ರಣತಂತ್ರದ ಬಗ್ಗೆ ಬೇಸರಗೊಂಡಿರುವ ಯಡಿಯೂರಪ್ಪ ಅವರು ಬಿಜೆಪಿ ಸರಕಾರದ ಅಳಿವು/ಉಳಿವು ಮುಖ್ಯಮಂತ್ರಿ ಶೆಟ್ಟರ್ ಅವರ ಕೈಯಲ್ಲಿದೆ ಎಂದು ಎಚ್ಚರಿಸಿದ್ದಾರೆ.
ಪಕ್ಷದ ಹಿತದೃಷ್ಟಿಯಿಂದ ಶೆಟ್ಟರ್-ಅನಂತ್ ಮಾತುಕತೆ ವೇಳೆ ಅನೇಕ ಸಂಭಾವ್ಯ ಕ್ರಮಗಳ ಬಗ್ಗೆ ಆಲೋಚಿಸಲಾಗಿದೆ. ಪ್ರಮುಖವಾಗಿ ಯಡಿಯೂರಪ್ಪ ಸಭೆಯಲ್ಲಿ ಬಲಾಢ್ಯ ಸಂಖ್ಯೆಯ ನಾಯಕರು ಭಾಗವಹಿಸುವುದನ್ನು ತಡೆಗಟ್ಟಲು ಬೆಳಗಾವಿ ಅಧಿವೇಶನದ ನೆಪವೊಡ್ಡಿ ಸೆ. 10ರಂದು ಕಡ್ಡಾಯ ಹಾಜರಾತಿ ಆದೇಶಿಸಿ ವಿಪ್ ಜಾರಿಗೊಳಿಸುವ ಬಗ್ಗೆಯೂ ಆಲೋಚಿಸಲಾಗಿದೆ.
ಸದಾನಂದ ಗೌಡ, ಸಿದ್ದು ಸವದಿ, ಸೊಗಡು ಶಿವಣ್ಣ, ವರ್ತೂರು ಪ್ರಕಾಶ್ ಅವರೂ ಶೆಟ್ಟರ್-ಅನಂತ್ ಭೇಟಿಯ ವೇಳೆ ಹಾಜರಿದ್ದರು.
ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದರಿಂದ ಬಚಾವಾಗಲು ಆಡಳಿತಾರೂಢ ಬಿಜೆಪಿಗೆ ಈ ಕ್ರಮ ಅನಿವಾರ್ಯವಾಗಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ. ಆದರೆ ಇದು ಯಡಿಯೂರಪ್ಪ ಅವರನ್ನು ಹಣಿಯಲು ಹೂಡಿರುವ ಪ್ರತಿತಂತ್ರ.
ಸಮಾವೇಶದಲ್ಲಿ ಶಾಸಕರ್ಯಾರೂ ಪಾಲ್ಗೊಳ್ಳದಂತೆ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಅಧೀರನ್ನಾಗಿಸುವ ಮುಂದಾಲೋಚನೆ ಇದರಲ್ಲಡಗಿದೆ ಎನ್ನಲಾಗಿದೆ. ಆದರೆ ಯಡಿಯೂರಪ್ಪನವರು ತಮ್ಮ ಬಹುನಿರೀಕ್ಷಿತ ಡಿ. 10ರ ಹಾವೇರಿ ಸಮಾವೇಶವನ್ನು ಡಿ.9 ಭಾನುವಾರವೇ ನಡೆಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಅನಂತ ಕುಮಾರ್ ಅವರು ಶೆಟ್ಟರ್ ಅವರಿಗೆ ಮತ್ತೊಂದು ಮಹತ್ತರ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆಯೂ ಪ್ರೇರೇಪಿಸಿದ್ದಾರೆ. ಯಡಿಯೂರಪ್ಪಗೆ ಪರ್ಯಾಯವಾಗಿ ಲಿಂಗಾಯತ ಸಮುದಾಯ ನಾಯಕರಾಗುವಂತೆ ಶೆಟ್ಟರ್ ಗೆ ಅನಂತ್ ಸೂಚಿಸಿದ್ದಾರೆ.
ಈ ಮಧ್ಯೆ, ಗುರುವಾರ ಹಿರಿಯ ನಾಯಕ ಅಡ್ವಾಣಿ ಅವರ ಹುಟ್ಟುಹಬ್ಬವಿದ್ದು, ಅವರಿಗೆ ಶುಭ ಕೋರಲು ಶೆಟ್ಟರ್ ದಂಪತಿ ಇಂದು ದೆಹಲಿಗೆ ತೆರಳಿದ್ದಾರೆ.











Click it and Unblock the Notifications