ಯಡಿಯೂರಪ್ಪ ಹಿಂದೆ ನಡೆಯಲು ಶಾಸಕರು ಸಿದ್ಧ

Yeddyurappa supporters ready to join KJP
ಬೆಂಗಳೂರು, ನ. 6 : "ನನಗೆ ಬಿಜೆಪಿ ಸರಕಾರದಲ್ಲಿರುವ 60 ಶಾಸಕರ, 10 ಸಂಸದರ ಮತ್ತು 15 ವಿಧಾನಪರಿಷತ್ ಸದಸ್ಯರ ಬೆಂಬಲವಿದೆ. ಡಿಸೆಂಬರ್ 10ಕ್ಕೆ ಹೊಸ ಪಕ್ಷ ಕೆಜೆಪಿ ಕಟ್ಟುವುದು ಶತಸಿದ್ಧ. ಈ ಶಾಸಕರ ಬೆಂಬಲದಿಂದ ನನಗೆ ಆನೆ ಬಲ ಬಂದಂತಾಗಿದೆ" ಎಂದು ಹೇಳುವ ಮುಖಾಂತರ ಬಿಜೆಪಿಯ ಕರ್ನಾಟಕ ಮತ್ತು ರಾಷ್ಟ್ರೀಯ ನಾಯಕರ ತಲೆಯ ಮೇಲೆ ಬಿ.ಎಸ್. ಯಡಿಯೂರಪ್ಪ ಬಲವಾಗಿ ಹೊಡೆದಿದ್ದಾರೆ.

ಆದರೆ, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ನಾವು. ಅವರು ಅವಧಿ ಪೂರ್ಣಗೊಳಿಸುತ್ತಾರೆ. ಬಿಜೆಪಿ ಸರಕಾರವನ್ನು ಯಾವುದೇ ಕಾರಣಕ್ಕೂ ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಸದ್ಯಕ್ಕೆ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ ಎಂದು ಡಾಲರ್ಸ್ ಕಾಲೋನಿಯಲ್ಲಿರುವ 'ಧವಳಗಿರಿ' ನಿವಾಸದಲ್ಲಿ ಔತಣಕೂಟದ ಬಳಿಕ ಹೇಳಿ ರಾಜ್ಯದ ಬಿಜೆಪಿ ನಾಯಕರನ್ನು ತೀವ್ರ ಗೊಂದಲದ ಮಡುವಿನಲ್ಲಿ ತಳ್ಳಿದ್ದಾರೆ.

ಒಂದು ಕಾಲು ವರ್ಷದ ಹಿಂದೆ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿದ್ದಾಗ 75ಕ್ಕೂ ಹೆಚ್ಚು ವಿಧಾನಸಭೆ ಸದಸ್ಯರು, ಸಂಸದರು, ವಿಧಾನಪರಿಷತ್ ಸದಸ್ಯರು ನನ್ನನ್ನು ಬೆಂಬಲಿಸಿ ರಾಜೀನಾಮೆ ಪತ್ರ ನೀಡಿ, ನಂತರ ನನ್ನ ಮಾತು ಕೇಳಿ ಹಿಂದೆ ಪಡೆದಿದ್ದರು. ಈಗ ಎಲ್ಲರೂ ನನ್ನನ್ನು ನಂಬಿ ಮತ್ತೆ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲರೂ ನನ್ನ ಹಿಂದೆ ಬರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘಂಟಾಘೋಷವಾಗಿ ಸಾರಿದ್ದಾರೆ.

ಯಡಿಯೂರಪ್ಪ ಕರೆದಿದ್ದ ಈ ಸಭೆಯಲ್ಲಿ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ರೇಣುಕಾಚಾರ್ಯ, ಬಸವರಾಜ್ ಬೊಮ್ಮಾಯಿ, ಸಿಎಂ ಉದಾಸಿ, ಪುಟ್ಟಸ್ವಾಮಿ, ಮುರುಗೇಶ್ ನಿರಾಣಿ, ಸಂಸದ ಜನಾರ್ದನ ಸ್ವಾಮಿ ಮುಂತಾದ 70ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಬಿಜೆಪಿಯನ್ನು ತೀವ್ರ ಮುಜುಗರಕ್ಕೆ ಈಡು ಮಾಡಿದ್ದಾರೆ. ಇದನ್ನು ಬಿಜೆಪಿ ನಾಯಕರು ಪಕ್ಷವಿರೋಧಿ ಚಟುವಟಿಕೆ ಅನ್ನಲು ಕೂಡ ಹಿಂಜರಿಯುತ್ತಿರುವುದು ಬಿಜೆಪಿಯ ಹೇಡಿತನಕ್ಕೆ ಹಿಡಿದ ಕನ್ನಡಿ.

ಈ ಸಭೆಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರು, ಯಡಿಯೂರಪ್ಪ ಅವರು ಈಗಲೂ ನಮ್ಮ ನಾಯಕರು. ಹಾವೇರಿಯಲ್ಲಿ ಡಿಸೆಂಬರ್ 10ರಂದು ನಡೆಯಲಿರುವ ಸಮಾವೇಶದಲ್ಲಿ ತಾವೆಲ್ಲರೂ ಯಡಿಯೂರಪ್ಪ ಅವರನ್ನು ಬೆಂಬಲಿಸಿ ಭಾಗವಹಿಸುತ್ತಿದ್ದೇವೆ ಎಂದು ನುಡಿದರು. ಯಡಿಯೂರಪ್ಪ ಅವರ ಪರ ಮಾತನಾಡಿದ ಧನಂಜಯ ಕುಮಾರ್ ಅವರನ್ನು ಕಿತ್ತುಹಾಕಿದ ಬಿಜೆಪಿ ನಾಯಕರು ಉದಾಸಿ ಮತ್ತು ಇತರರನ್ನು ಕಿತ್ತುಹಾಕುವ ಧೈರ್ಯ ತೋರುತ್ತಾರಾ?

ಯಡಿಯೂರಪ್ಪ ಯಸ್ ಅಂದ್ರೆ ಈಗಲೇ ಇವರೆಲ್ಲ ಬಿಜೆಪಿಗೆ ಗುಡ್ ಬೈ ಹೇಳಿ ತಮ್ಮ ನಾಯಕರ ಹಿಂದೆ ನಡೆಯಲು ಸಿದ್ಧರಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭ್ರಷ್ಟಾಚಾರ ಆರೋಪದಿಂದ ಕಾಪಾಡಲು ಹರಸಾಹಸ ಪಡುತ್ತಿರುವ ರಾಷ್ಟ್ರೀಯ ನಾಯಕರಿಗೆ ಸದ್ಯಕ್ಕೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಗಡಿಬಿಡಿ ಇಲ್ಲವೇ ಇಲ್ಲ. ರಾಜ್ಯದ ಬಿಜೆಪಿ ಬಿಕ್ಕಟ್ಟನ್ನು ಪರಿಹರಿಸಲು ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ನ.7ರಂದು ಬರುವವರಿದ್ದರು. ಆದರೆ, ಅದು ಸದ್ಯಕ್ಕೆ ಕ್ಯಾನ್ಸಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+