ರಾಜೀವ್ ಗಾಂಧಿ ಹತ್ಯೆ ತನಿಖೆ ರಹಸ್ಯ ಬಹಿರಂಗ

ಕಾಂಗ್ರೆಸ್ ಅಧಿನಾಯಕ ರಾಜೀವ್ ಗಾಂಧಿ ಅವರ ಹತ್ಯೆ ತನಿಖೆ ಕೈಗೊಂಡಿದ್ದ ಅಧಿಕಾರಿ ಕೆ ರಘೋತ್ತಮ್ ಅವರು ಹೊರ ಹಾಕಿರುವ ರಹಸ್ಯದಲ್ಲಿ ಮಾಜಿ ಗುಪ್ತಚರ ಇಲಾಖೆ(IB) ಮುಖ್ಯಸ್ಥ ಎಂಕೆ ನಾರಾಯಣನ್ ಅವರನ್ನು ಆರೋಪಿಯನ್ನಾಗಿಸಲಾಗಿದೆ.
ನಾರಾಯಣ್ ಅವರು ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲರಾಗಿದ್ದಾರೆ. ನಾರಾಯಣ್ ಅವರು ಐಬಿ ಮುಖ್ಯಸ್ಥರಾಗಿದ್ದಾಗ ರಾಜೀವ್ ಗಾಂಧಿ ಹತ್ಯೆ ಪ್ರಮುಖ ಕೇಸ್ ಆಗಿತ್ತು. ರಾಜೀವ್ ಗಾಂಧಿ ಹತ್ಯೆ 'ಮಾನವ ಬಾಂಬ್' ಧನು ಮೂಲಕ ಆಯಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬದೂರಿನಲಿ ಮೇ 21, 1991ರಲ್ಲಿ ಹತ್ಯೆಗೀಡಾದರು.
ಅದರೆ, ಹತ್ಯೆ ನಡೆದ ದಿನಕ್ಕೂ ಮೊದಲು 'ಮಾನವ ಬಾಂಬ್' ಧನು ಘಟನಾ ಸ್ಥಳಕ್ಕೆ ಬಂದು ಹೋದ ಬಗ್ಗೆ ವಿಡಿಯೋ ಸಾಕ್ಷಿ ಇತ್ತು. ಆದರೆ, ನಾರಾಯಣ್ ಅವರು ಈ ವಿಡಿಯೋ ಸಾಕ್ಷಿಯನ್ನು ಮರೆಮಾಚಿಬಿಟ್ಟಿದ್ದಾರೆ ಎಂದು ರಘೋತ್ತಮ್ ಆರೋಪಿಸಿದ್ದಾರೆ.
ರಘೋತ್ತಮ್ ಅವರು ತಮ್ಮ ಪುಸ್ತಕ "Conspiracy to kill Rajiv Gandhi - From CBI files" ದಲ್ಲಿ ರಾಜೀವ್ ಗಾಂಧಿ ಹಿಂದಿನ ಸಂಚು ಹಾಗೂ ಸಿಬಿಐ ಕೈಗೊಂಡ ತನಿಖಾ ಕ್ರಮಗಳನ್ನು ವಿವರವಾಗಿ ಬರೆದಿದ್ದಾರೆ.
ರಾಜೀವ್ ಗಾಂಧಿ ಅವರು ಘಟನಾ ಸ್ಥಳಕ್ಕೆ ಆಗಮಿಸುವ ಮೊದಲೇ ಹತ್ಯಾ ತಂಡ ಅಲ್ಲಿತ್ತು. ಸುಮಾರು 2-3 ಗಂಟೆಗಳಿಂದ ಹತ್ಯೆ ಟಾರ್ಗೆಟ್ ಗಾಗಿ ಕಾಯುತ್ತಾ ಶತಪಥ ಹಾಕುತ್ತಿದ್ದರು. ಈ ಬಗ್ಗೆ ವಿಡಿಯೋ ಮಾಹಿತಿ ಸಿಬಿಐ ತನಿಖಾ ತಂಡಕ್ಕೆ ಸಿಕ್ಕಿತ್ತು. ಆದರೆ, ಎಂದೂ ಹೊರ ಬರಲೇ ಇಲ್ಲ ಎಂದು ರಘೋತ್ತಮ್ ಬರೆದಿದ್ದಾರೆ.
ರಘೋತ್ತಮ್ ಅವರ ಅರೋಪದಿಂದ ತಮಿಳುನಾಡು ಪೊಲೀಸರ ಮೇಲೆ ಅನುಮಾನದಿಂದ ನೋಡುವಂತಾಗಿದೆ. ತಮಿಳುನಾಡು ಪೊಲೀಸರ ವರದಿ ಪ್ರಕಾರ, ರಾಜೀವ್ ಗಾಂಧಿ ಅವರು ಘಟನಾ ಸ್ಥಳಕ್ಕೆ ಬಂದ ಮೇಲೆ ಧನು ಪ್ರವೇಶಿಸಿದ್ದಳು ಎಂದಿದ್ದರು. ಆದರೆ, ಐಬಿ ಬಳಿ ಧನು ಮೊದಲೇ ಉಪಸ್ಥಿತಳಿದ್ದ ಬಗ್ಗೆ ಮಾಹಿತಿ ಇತ್ತು.
ಜೊತೆ ಇನ್ನೊಂದು ಕೆಲಸವೂ ನಡೆಯಿತು. ಐಬಿ ಅಧಿಕಾರಿಗಳ ಬಳಿ ಇದ್ದ ಅಸಲಿ ವಿಡಿಯೋ ಕ್ಲಿಪ್ ಸ್ಥಳೀಯ ಪೊಲೀಸರ ಕೈಗೆ ಸೇರಲೇ ಇಲ್ಲ. ಸ್ಥಳೀಯ ಪೊಲೀಸರ ಕೈಯಿತ್ತಿದ್ದು ಬದಲಿ ವಿಡಿಯೋ ಆಗಿತ್ತು.
ಅಂದು ವಿಶೇಷ ತನಿಖಾ ತಂದ(SIT) ಮುಖ್ಯಸ್ಥರಾಗಿದ್ದ ಡಿಆರ್ ಕಾರ್ತಿಕೇಯನ್ ಅವರು ಪ್ರಾಥಮಿಕ ತನಿಖೆ ನಡೆಸಿದ ನಂತರ ನಾಪತ್ತೆಯಾದ ವಿಡಿಯೋ ಪತ್ತೆ ಹಚ್ಚಲು ನಾರಾಯಣನ್ ಅವರಿಗೆ ಸಂಪೂರ್ಣ ಜವಾಬ್ದಾರಿ ವಹಿಸಿಬಿಟ್ಟಿದ್ದರು.
ನಾರಾಯಣನ್ ಅವರು ಈ ವಿಡಿಯೋ ಮರೆಮಾಚುವುದರ ಮೂಲಕ ಯಾರನ್ನು ಮೆಚ್ಚಿಸಲು ಯತ್ನಿಸಿದ್ದಾರೋ ಗೊತ್ತಿಲ್ಲ. ಈ ಮಹತ್ವದ ವಿಡಿಯೋ ಇದ್ದಿದ್ದರೆ ಘಟನಾ ಸ್ಥಳದಲ್ಲಿ ಧನು ಜೊತೆ ಯಾರು ಯಾರು ಮಾತನಾಡಿದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿತ್ತು ಎಂದು ರಘೋತ್ತಮ್ ಹೇಳಿದ್ದಾರೆ.
ರಘೋತ್ತಮ್ ಅವರ ಹೇಳಿಕೆ ರಾಜೀವ್ ಗಾಂಧಿ ಅವರ ಹತ್ಯೆ ತನಿಖೆಯ ನಿಗೂಢತೆಯನ್ನು ಹೊರ ಹಾಕಿದೆ. ಈಗಾಗಲೆ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಅನೇಕ ಊಹಾಪೋಹ ಸುದ್ದಿಗಳು ಹಬ್ಬಿದೆ. ರಘೋತ್ತಮ್ ಹೇಳಿಕೆ ಬಗ್ಗೆ ಕಾಂಗ್ರೆಸ್ ವಕ್ತಾರರಾಗಲಿ, ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಜನತಾ ಪಾರ್ಟಿಯ ಸುಬ್ರಮಣಿಯನ್ ಸ್ವಾಮಿ ಅವರು ರಾಜೀವ್ ಗಾಂಧಿ ಹತ್ಯೆ ಹಿಂದೆ ಸೋನಿಯಾ ಗಾಂಧಿ ಅವರ ಕೈವಾಡ ಇದೆ ಎಂದು ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications