ಬಕ್ರೀದ್ ಹಬ್ಬಕ್ಕೆ ಹಿಂದೂ ಸಂಘಟನೆಗಳ ತೊಂದರೆ

ಇಂಡಿ ಪೆಟ್ರೋಲ್ ಬಂಕ್ ವೃತ್ತದ ಬಳಿ ಪ್ರತಿಭಟನೆ ಕೂತಿದ್ದ ಕಾಂಗ್ರೆಸ್ ಮುಖಂಡರು, ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬಕ್ಕೆ ಎರಡು ದಿನ ಮುನ್ನವೇ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ನಗರದಲ್ಲಿ ಅಶಾಂತಿಯ ವಾತಾವರಣ ಮೂಡಿಸುತ್ತಿದ್ದಾರೆ.
ಬಿಜೆಪಿ ಈ ಘಟನೆಯ ಲಾಭ ತೆಗೆದುಕೊಂಡು ಕೋಮುಗಲಭೆಗೆ ಪ್ರಚೋದಿಸುತ್ತಿದೆ ಎಂದು ಮುಖಂಡರು ಆಪಾದಿಸಿದ್ದಾರೆ.
ಘಟನೆಯ ಹಿನ್ನಲೆ: ಬಕ್ರೀದ್ ನಿಮಿತ್ತ ಜಾನುವಾರುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದ ವಾಹನವನ್ನು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ತಡೆದು ಪೊಲೀಸರಿಗೆ ಗುರುವಾರ (ಅ 25) ತಡರಾತ್ರಿ ಒಪ್ಪಿಸಿದ್ದರು.
ಆದರೆ ಪೊಲೀಸರು ವಿಎಚ್ಪಿ ಕಾರ್ಯಕರ್ತರನ್ನು ಬಂಧಿಸಿ, ಥಳಿಸಿ ಇಡೀ ರಾತ್ರಿ ಪೋಲೀಸ್ ಠಾಣೆಯಲ್ಲೇ ಕೂಡು ಹಾಕಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪೋಲೀಸ್ ಠಾಣೆಯ ಎದುರಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೋಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಒಂದು ವಾರದ ಹಿಂದೆಯೇ ಜಾನುವಾರುಗಳ ಅಕ್ರಮ ಸಾಗಾಣಿಕೆ ನಡೆಯುತ್ತಿದೆ ಎಂದು ಪೊಲೀಸರಿಗೆ ಲಿಖಿತ ದೂರು ನೀಡಿದ್ದೆವು. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದರೆ ಎಂದು ಸಂಘಟನೆಗಳು ಆರೋಪಿಸಿವೆ.
ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುತ್ತಿರಬೇಕಾದರೆ ಇಂಡಿ ಪೆಟ್ರೋಲ್ ಬಂಕ್ ವೃತ್ತದಿಂದ ಇವರ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.












Click it and Unblock the Notifications