ಗಜಪಡೆಯ ನಾಯಕ ಜಂಬೂ ಸವಾರಿ ವೀರ ಬಲರಾಮ
ಮೈಸೂರು, ಅ. 22: ದಸರಾ ಜಂಬೂಸವಾರಿಯಲ್ಲಿ ಸತತವಾಗಿ 13 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಗೆ ಕಳೆತಂದಿದ್ದ ಗಜ ರಾಜ ಬಲರಾಮ (54)ನಿಗೆ ಸೋಮವಾರ (ಅ.23) ಅರಮನೆ ಆವರಣದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಅನೇಕ ವರ್ಷಗಳಿಂದ ದಸರೆಯ ಸಂಭ್ರಮಕ್ಕೆ ತೊಡಗಿಸಿಗೊಂಡ ಆನೆ ಬಲರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಕಬ್ಬು ಹಾಗೂ ಹಣ್ಣು-ಹಂಪಲು ನೀಡಿ ಉಪಚರಿಸಿದರೆ, ಆತನನ್ನು ಪಾಲಿಸಿ ಪೋಷಿಸುತ್ತಿದ್ದ ಮಾವುತ ತಿಮ್ಮ, ಹಾಗೂ ಕಾವಾಡಿಗ ಗಣೇಶ್‌ಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಸನ್ಮಾನಿಸಿದರು.
ಬಲರಾಮನಿಗೆ ಅನಾರೋಗ್ಯ: ಚಿಕ್ಕಂದಿನಿಂದಲೂ ಬಲಗಣ್ಣು ತೊಂದರೆ ಅನುಭವಿಸುತ್ತಿರುವ ಬಲರಾಮ, ಈ ಬಾರಿ ತಾಲೀಮು ಸಂದರ್ಭದಲ್ಲೂ ನಿರಾಸಕ್ತನಾಗಿದ್ದ. ಅರಮನೆಯಿಂದ ಬನ್ನಿಮಂಟಪ ತಲುಪಲು ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ ಎನ್ನಲಾಗಿದೆ. ಬಲರಾಮ ಸೇರಿ ಎಲ್ಲಾ ಆನೆಗಳಿಗೆ ಜೀವ ವಿಮೆ ಮಾಡಿಸಲಾಗಿದೆ. ಬಲರಾಮನಿಗೆ 4 ಲಕ್ಷ ರು ಜೀವ ವಿಮೆ ಮಾಡಿಸಲಾಗಿದೆ ಜಿಲ್ಲಾಧಿಕಾರಿ ವಸ್ತ್ರದ್ ಹೇಳಿದ್ದಾರೆ.
ಮುಂದಿನ ವರ್ಷ ಬಲರಾಮ ತನ್ನ ಆರೋಗ್ಯದಲ್ಲಿ ಸುಧಾರಣೆಗೊಂಡು ಅಂಬಾರಿ ಹೊರುತ್ತಾನೆ. ಆ ನಂಬಿಕೆ ನನಗಿದೆ. ಈ ಬಾರಿ ಬಲರಾಮ ಅಂಬಾರಿ ಹೊರುತ್ತಿಲ್ಲ ಎಂದು ಕಲ್ಪನೆ ಮಾಡಿಕೊಳ್ಳುವುದೇ ಕಷ್ಟವಾಗುತ್ತಿದೆ ಎಂದು ಮಾವುತ ತಿಮ್ಮ ಹೇಳುವಾಗ ಆತನ ಕಣ್ಣಾಲಿಗಳು ತುಂಬಿ ಬಂದಿತ್ತು.
ಮೈಸೂರಿನ ಅರಮನೆ ಆವರಣದಲ್ಲಿ ಬೀಡು ಬಿಡುವ ಈ ಗಜಪಡೆಗಳಿಗೆ ದಿನನಿತ್ಯ ವಿವಿಧ ಬಗೆಯ ಭೂರಿ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ವಿಶೇಷ ಸತ್ಕಾರಗಳು ನಡೆಸಲಾಗುತ್ತೆ.
ಉದ್ದು, ಗೋಧಿ, ಕುಸುಬಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದ ಸೈಡ್ ಐಟಂಗಳೊಂದಿಗೆ ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತಿದೆ. ದಿನಕ್ಕೆರಡು ಬಾರಿ ಪೈಪಿನಲ್ಲಿ ನೀರು ಹಾಯಿಸಿ ಸ್ನಾನ ಮಾಡಿಸಲಾಗುತ್ತೆ
ಜಂಬೂ ಸವಾರಿ ರೂವಾರಿಗಳು : ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಅರ್ಜುನನ ನೇತೃತ್ವದಲ್ಲಿ ಗಜೇಂದ್ರ, ಅಭಿಮನ್ಯು, ಸರಳ, ಮೇರಿ, ಗಂಗೆ, ಕಾಂತಿ, ಕೋಕಿಲಾ, ಕಾವೇರಿ, ಗೋಪಿ, ಹರ್ಷ, ವಿಕ್ರಮ, ಸೇರಿ ಹನ್ನೆರಡು ಆನೆಗಳು ಪಾಲ್ಗೊಂಡಿವೆ. ಪ್ರಮುಖ ಆನೆಗಳ ಪರಿಚಯ ಇಲ್ಲಿದೆ.

ಬಲರಾಮ
ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ 54 ವರ್ಷ. ಸೌಮ್ಯ ಸ್ವಭಾವದ ಈತ 2.70 ಮೀಟರ್ ಎತ್ತರ, 3.77 ಮೀ. ಉದ್ದ, ಸುಮಾರು 4900 ಕೆ.ಜಿ. ತೂಕವಿದ್ದಾನೆ.
ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹದಿಮೂರು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ತಿತಿಮತಿ, ಹುಣಸೂರು ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡಲಾಗಿತ್ತು.

ಅರ್ಜುನ
ಕಳೆದ 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನನಿಗೆ ಈಗ 52 ವರ್ಷ. ಈತನ ಎತ್ತರ 2.80 ಮೀ, ಉದ್ದ 3.75 ಮೀ, 4750 ಕೆ.ಜಿ. ತೂಕವನ್ನು ಹೊಂದಿದ್ದಾನೆ.
1968ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್‌ನಿಂದ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತ ಅನುಭವವಿದೆ. ಪ್ರಸ್ತುತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಿಂದ ಈತ ಬಂದಿದ್ದು, ದಸರಾ ಮಹೋತ್ಸವದಲ್ಲಿ ಪತಾಕೆ ಆನೆಯ ಜವಾಬ್ದಾರಿ ವಹಿಸಿದ್ದಾನೆ. ಈ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ.

ವಿಕ್ರಮ
ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮನಿಗೆ 40 ವರ್ಷ. 2.60 ಮೀ ಎತ್ತರ, 3.43 ಮೀ ಉದ್ದ ಹಾಗೂ 3820 ಕೆ.ಜಿ. ತೂಕವಿದೆ.
ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿದೆ. ಇದು 12ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.
ಸರಳ
ಕಳೆದ ಎಂಟು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ 71 ವರ್ಷದ ಸರಳಳನ್ನು 1977ರಲ್ಲಿ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿರುವ ಸರಳ 2.46 ಮೀ. ಎತ್ತರ, 3.34 ಮೀ. ಹಾಗೂ 3250 ಕೆ.ಜಿ. ತೂಕವಿದೆ. ಅರ್ಜುನನಿಗೆ ಕುಮ್ಕಿ ಆನೆಯಾಗಿ ದಸರಾದಲ್ಲಿ ಭಾಗವಹಿಸುತ್ತಿದೆ.

ಕಾಂತಿ
ಜಪಡೆಗಳಿಗೆಲ್ಲಾ ಹಿರಿಯಜ್ಜಿಯಾಗಿರುವ ಕಾಂತಿಗೆ ಈಗ 73 ವರ್ಷ. 2.44 ಮೀ. ಎತ್ತರ 3.48 ಮೀ, 3290 ಕೆ.ಜಿ. ತೂಕವಿದೆ.
ಇದು ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದೆ. 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು. ಮೃದು ಮತ್ತು ಶಾಂತ ಸ್ವಭಾವದ ಕಾಂತಿ ಇದುವರೆಗೆ 18 ಬಾರಿ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದೆ.











Click it and Unblock the Notifications