ಜೆಡಿಎಸ್ಸಿಗೆ ಹೋಗೋವ್ರಿಗೆ ಬಳುವಳಿ ಏಕೆ: ಬಿಎಸ್‌ವೈ

ಜೆಡಿಎಸ್ಸಿಗೆ ಹೋಗೋವ್ರಿಗೆ ಬಳುವಳಿ ಏಕೆ ?: 'ಬಿಜೆಪಿ ಬಿಡುತ್ತಿರುವ ನನಗೆ ಅದರ ಗೊಡವೆ ಏಕೆ ಅಂತಲ್ಲ. ಇನ್ನೂ ಅನೇಕ ಆಕಾಂಕ್ಷಿಗಳು ಇರುವಾಗ ಇವರೊಬ್ಬರಿಗೇ ಏಕೆ ಮಣೆ. ಅಷ್ಟಕ್ಕೂ ಬಾಲಚಂದ್ರ ಜಾರಕಿಹೊಳಿ ಜೆಡಿ ಎಸ್ ಪಕ್ಷಕ್ಕೆ ಹೋಗುವುದು ನೂರಕ್ಕೆ ನೂರು ನಿಜ.
ಅಂಥಾದ್ದರಲ್ಲಿ ಅವಯ್ಯಗೆ ಏಕೆ ಹೆಚ್ಚು ಜವಾಬ್ದಾರಿ ಎಂಬುದಷ್ಟೇ ನನ್ನ ಪ್ರಶ್ನೆ' ಎಂದು ಯಡಿಯೂರಪ್ಪ ಗುಡುಗಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಜೊತೆ ಗುಪ್ತವಾಗಿ ಕೈಜೋಡಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗುವುದು ಕನಸಿನ ಮಾತು ಎಂದು ಹೇಳಿದರು.
ಡಾಲರ್ಸ್ ಕಾಲೊನಿಯಲ್ಲಿ ಇಂದು ಬೆಳಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಸಿಎಂ ಶೆಟ್ಟರ್ ವಿರುದ್ಧವೂ ಕೆಂಡಕಾರಿದ್ದಾರೆ. ಯಾರಿಗೆಲ್ಲ ಹೆಚ್ಚುವರಿ ಖಾತೆಗಳನ್ನು ಹಂಚ ಬೇಕು ಎಂಬುದರ ಬಗ್ಗೆ ಶೆಟ್ಟರ್ ಗೆ ನಾನು ಹೇಳಿದ್ದೆ.
ಆದರೆ ಅವರು ನನ್ನ ಸೂಚನೆಯನ್ನು ಪಾಲಿಸುತ್ತಿಲ್ಲ. ಸರಕಾರ ಉಳಿಯಬೇಕು ಅಂದರೆ ಶೆಟ್ಟರ್ ನನ್ನ ಸಲಹೆ ಕೇಳುವುದು ಸೂಕ್ತ. ಇಲ್ಲವಾದಲ್ಲಿ ಸದಾನಂದ ಗೌಡಗೆ ಏನಾಯಿತು ಎಂಬುದನ್ನು ಅವರು ಮರೆಯುವುದು ಬೇಡ' ಎಂದು ಯಡಿಯೂರಪ್ಪ ನೇರಾನೇರ ತಮ್ಮ ಮನದಾಳದ ಸಿಟ್ಟು ಸೆಡವನ್ನು ಹೊರಹಾಕಿದರು.
ಯಡಿಯೂರಪ್ಪ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಮತ್ತಷ್ಟು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಬಿಜೆಪಿ ಹೈಕಮಾಂಡ್, ಸಿಎಂ ಶೆಟ್ಟರ್ ನಿರ್ಧಾರಗಳ ಮೂಲಕ ಯಡಿಯೂರಪ್ಪಗೆ ಬಿಸಿಮುಟ್ಟಿಸುತ್ತಿದೆ.












Click it and Unblock the Notifications