ಅವ್ರಿಗೆ ಯಡಿಯೂರಪ್ಪ ಉಚ್ಚಾಟಿಸುವ ಧೈರ್ಯವಿಲ್ಲ ಏಕೆ?
ಬಿಜೆಪಿಯ ಬಹು ವಿವಾದಿತ, ಜನಪ್ರಿಯ, ಹಗರಣಪೂರಿತ ನಾಯಕ ಬಿಎಸ್ ಯಡಿಯೂರಪ್ಪ ಅವರು ಪಕ್ಷ ಬಿಡುತ್ತೀನಿ ಎಂದರೂ ಬಿಜೆಪಿ ಹೈಕಮಾಂಡ್ ಸುಮ್ಮನಿದೆ ಏಕೆ? ಪಕ್ಷ ವಿರೋಧಿ ಚಟುವಟಿಕೆ, ಹೈ ಕಮಾಂಡ್ ಹಾಗೂ ರಾಜ್ಯದ ನಾಯಕರ ವಿರುದ್ಧ ಯಡಿಯೂರಪ್ಪ ಕಿಡಿ ಕಾರಿದರೂ ಹೈಕಮಾಂಡ್ ಕಮ್ಮಕ್ ಕಿಮಕ್ ಅಂದಿಲ್ಲ ಏಕೆ? ಪ್ರಜಾತಂತ್ರದಲ್ಲಿ ಹೈಕಮಾಂಡ್ ಎನ್ನುವ ಮೇಲು ಕೀಳು ವ್ಯವಸ್ಥೆಗೆ ಯಡಿಯೂರಪ್ಪ 'ದಿ ಎಂಡ್' ಬೋರ್ಡ್ ತಗುಲಿಸುವರೇ? ಎಂಬ ಎಲ್ಲಾ ಪ್ರಶ್ನೆಗಳು ಥಟ್ಟನೆ ಕಾಡುತ್ತದೆ.
ಈ ಸಂದರ್ಭಕ್ಕೆ ಯೋಚಿಸಿದರೆ ಬಿಜೆಪಿಗೆ ಯಡಿಯೂರಪ್ಪ ಅವರ ಅವಶ್ಯಕತೆ ಏಕಿದೆ? ಜಗದೀಶ್ ಶೆಟ್ಟರ್ ಸರ್ಕಾರ ಉಳಿಸಿಕೊಳ್ಳುವುದು ಹೈ ಕಮಾಂಡ್ ಗುರಿಯೇ? ಅಥವಾ ಮುಂದಿನ ಚುನಾವಣೆಯ ವೋಟ್ ಬ್ಯಾಂಕ್ ?

ಚುನಾವಣೆಯಾದರೆ: ಅಳಿದುಳಿದಿರುವ ಮರ್ಯಾದೆ ಮುಖ ಹೊತ್ತು ನಿಲ್ಲುವ ಬಿಜೆಪಿ ನಾಯಕರಿಗೆ ಸಿಗುವ ಮತಗಳನ್ನು ವೃದ್ಧಿಸಲು ಯಡಿಯೂರಪ್ಪ ಅನಿವಾರ್ಯ. ಇದು ಬಳ್ಳಾರಿ ಹಾಗೂ ಉಡುಪಿ ಚಿಕ್ಕಮಗಳೂರು ಚುನಾವಣೆಯಲ್ಲಿ ಸಾಬೀತಾಗಿದೆ.
150 ಅಸೆಂಬ್ಲಿ ಸೀಟು, 22 ಲೋಕಸಭೆ ಸೀಟು ಗೆಲ್ಲುವುದು ನನ್ನ ಗುರಿ ಎಂದು ಪದೇ ಪದೇ ಹೇಳುವ ಯಡಿಯೂರಪ್ಪ ಈಗ ಬಿಜೆಪಿ ಬದಲಿಗೆ ಕೆಜೆಪಿಗೆ ವೋಟು ಕೊಡಿ ಎಂದರೆ ಬಿಜೆಪಿ ನಿರ್ನಾಮಕ್ಕೆ ನಾಂದಿ ಹಾಡಿದ್ದಂತೆ ಆಗುತ್ತದೆ.
ಯಡಿಯೂರಪ್ಪ ಘೋಷಿಸಿರುವ 'ಕರ್ನಾಟಕ ಜನತಾ ಪಕ್ಷ' ಸೇರಲು ವಿಧಾನಸಭೆಯ 70 ಸದಸ್ಯರು, ವಿಧಾನಪರಿಷತ್‌ನ 20 ಸದಸ್ಯರು ಹಾಗೂ 12 ಸಂಸದರು ಸಿದ್ಧರಿದ್ದಾರೆ ಎಂಬ ಸುದ್ದಿಯಿದೆ. ಇದರಿಂದ ಬಿಜೆಪಿ ಹೈ ಕಮಾಂಡ್ ಹೆದರಿದೆ.
ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರಲು ಒಲವು ತೋರಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ 2 ಜೊತೆ ಎಸ್ ಪಿ ಉತ್ತಮ ಬಾಂಧವ್ಯ ಹೊಂದಿದೆ. ಹೀಗಾಗಿ ಯಡಿಯೂರಪ್ಪ ಅವರ ಬೆನ್ನ ಹಿಂದೆ ಕಾಂಗ್ರೆಸ್ ನಿಲ್ಲಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಸುದ್ದಿ ಅರ್ಧ ಸತ್ಯವಂತೂ ಹೌದು.
ಮುಂಬರುವ ಚುನಾವಣೆಯಲ್ಲಿ ಕೆಜೆಪಿ ಮೂಲಕ ಯಡಿಯೂರಪ್ಪ ಉತ್ತಮ ಫಲಿತಾಂಶ ಗಳಿಸಿದರೆ ಹಾಗೂ ಎಸ್ ಪಿ ಜೊತೆ ಮೈತ್ರಿ ಉಳಿಸಿಕೊಂಡರೆ ಎನ್ ಡಿಎ ಅಧಿಕಾರಕ್ಕೆ ಬರಲು ಅನುಕೂಲ. ಯಡಿಯೂರಪ್ಪ ಮೊಂಡತನಕ್ಕೆ ಹೈಕಮಾಂಡ್ ಉದಾಸೀನದ ಮದ್ದು ಸದಾ ಸಿದ್ಧವಾಗಿರುತ್ತದೆ.
ಕರ್ನಾಟಕದಲ್ಲಿ ವೀರಶೈವ ಸಮಾಜದ ಮುಖಂಡ ಎನಿಸಿರುವ ಯಡಿಯೂರಪ್ಪ ಸಮಾಜವಾದಿ ಪಕ್ಷ ಸೇರುವ ಮೂಲಕ ಅಲ್ಪಸಂಖ್ಯಾತರು, ದಲಿತರು, ಯಾದವರ ಮತಗಳನ್ನು ಭದ್ರಪಡಿಸಿಕೊಳ್ಳಲು ಯೋಚಿಸಿದ್ದಾರೆ. ಈ ರೀತಿ ಯೋಜನಾಬದ್ಧವಾಗಿ ಕಾರ್ಯತಂತ್ರ ರೂಪಿಸುವ ನಾಯಕರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ. ಹೀಗಾಗಿ ಚುನಾವಣೆ ತನಕವಾದರೂ ಯಡಿಯೂರಪ್ಪ ಅನಿವಾರ್ಯ.
ಸರ್ಕಾರದ ಚಿಂತೆ ಇಲ್ಲ: ಶೆಟ್ಟರ್ ಸರ್ಕಾರ ಉಳಿಸುವ ಯಾವ ಇಚ್ಛೆಯೂ ಹೈಕಮಾಂಡ್ ಗೆ ಇಲ್ಲ. ಕೇಂದ್ರದ ಅಧಿಕಾರಕ್ಕಾಗಿ ಹತ್ತು ಹಲವು ಯೋಜನೆ ಹಾಕಿಕೊಂಡಿರುವ ಕೇಂದ್ರ ನಾಯಕರು, ಕರ್ನಾಟಕದ ಬಗ್ಗೆ ಕಾದು ನೋಡುವ ತಂತ್ರವನ್ನೇ ಅನುಸರಿಸುತ್ತಾ ಬಂದಿದ್ದಾರೆ.
ಯಡಿಯೂರಪ್ಪ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸಲಿದೆ ಎಂದು ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದು ನಿಜವಾಗುವ ಹೊತ್ತಿಗೆ ಯಡಿಯೂರಪ್ಪ ಹೊಸ ಪಕ್ಷದ ಬ್ಯಾನರ್ ಹಿಡಿದು ಯಾತ್ರೆ ಕೈಗೊಳ್ಳುವುದು ಖಂಡಿತ.
ಎಲ್ಲದ್ದಕ್ಕೂ ಉತ್ತರ ಅ.20ರಂದು ಹುಬ್ಬಳ್ಳಿಯಲ್ಲಿ ನಡೆಯುವ ಭ್ರಷ್ಟಾಚಾರ ವಿರೋಧಿ ಸಮಾವೇಶದಲ್ಲಿ ಸಿಗಲಿದೆ. 224 ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಾಗೂ ದೇಶದಾದ್ಯಂತ ಭ್ರಷ್ಟಾಚಾರ ವಿರೋಧಿ ಚಳವಳಿ ಆರಂಭಿಸಿ ಚುನಾವಣೆಗೆ ಮುನ್ನ ಕಾವು ಹೆಚ್ಚಿಸಲು ಬಿಜೆಪಿ ಯೋಜಿಸಿದೆ.
ಹುಬ್ಬಳ್ಳಿಗೆ ಯಡಿಯೂರಪ್ಪ ಬರುವ ಸಾಧ್ಯತೆ ಕಮ್ಮಿ. ಹೊಸ ಪಕ್ಷಕ್ಕೆ ಜಿಲ್ಲಾ ಮಟ್ಟ, ತಾಲೂಕು ಮಟ್ಟದ ನಾಯಕರ ನೇಮಕಾತಿ ಪ್ರಕ್ರಿಯೆ ಸಂಬಂಧ ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಹೊರಡುವ ಸಾಧ್ಯತೆಯಿದೆ. ಹೀಗಾಗಿ ಮತ್ತೊಮ್ಮೆ ಯಡಿಯೂರಪ್ಪ ಅವರ ಮುಂದೆ ಹೈಕಮಾಂಡ್ ಗೆ ಸೋಲುಂಟಾಗುವುದು ನಿಚ್ಚಳವಾಗಿದೆ.
ಯಡಿಯೂರಪ್ಪ ವಿರುದ್ಧವಾಗಲಿ ಅವರ ಬೆಂಬಲಿಗರ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳದೆ ಹೈಕಮಾಂಡ್ ತನ್ನ ಸ್ವಾರ್ಥ ಮೆರೆಯುತ್ತಿದೆ. ಹಾಗೂ ಜಾಣ ಕುರುಡುತನ ತೋರುತ್ತಿದೆ. ಇಲ್ಲಿ ದೆಹಲಿ ನಾಯಕರ ಧೈರ್ಯದ ಪ್ರಶ್ನೆಗಿಂತ ಪಕ್ಷದ ಅಸ್ತಿತ್ವದ ಪ್ರಶ್ನೆ ಅಡಗಿದೆ.
ಕೊನೆಯದಾಗಿ, ಬಿಜೆಪಿ ಬಿಟ್ಟರೂ ಆರೆಸ್ಸೆಸ್ ಬಿಡುವುದಿಲ್ಲ ಎನ್ನುವ ಮೂಲಕ ಯಡಿಯೂರಪ್ಪ ಅತ್ಯುತ್ತಮ ರಾಜಕೀಯ ನಡೆ ಇಟ್ಟಿದ್ದು, ಹೈಕಮಾಂಡ್ ಯಾವುದೇ ಕ್ರಮ ಜರುಗಿಸಲು ಆಗದೆ ಇರುವುದಕ್ಕೆ ಮೂಲ ಕಾರಣ ಎನ್ನಲಾಗಿದೆ.
ಮೂಲ ಆರೆಸ್ಸೆಸ್ ನಿಂದ ಬೆಳೆದು ಬಂದ ಯಾವೊಬ್ಬ ಬಿಜೆಪಿ ನಾಯಕರನ್ನು ಮುಟ್ಟುವ ಮುನ್ನ ಆರೆಸ್ಸೆಸ್ ನಿಂದ ಸಲಹೆ ಪಡೆಯದೆ ಇರಲು ಸಾಧ್ಯವಿಲ್ಲವಾದ್ದರಿಂದ ಹೈಕಮಾಂಡ್ ಕೈಕಟ್ಟಿ ಕೂರಲೇಬೇಕಿದೆ.












Click it and Unblock the Notifications