ಬೆಳಗಾವಿ ಹಬ್ಬದ ಸಂದರ್ಭದಲ್ಲಿ ಯಡಿಯೂರಪ್ಪ ಅಪಸ್ವರ

ಅದೇನೆಂದರೆ, ಅದೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಅದೇ ಡೈಲಾಗನ್ನು ಮತ್ತೆ ಪುನರುಚ್ಚರಿಸಿದ್ದಾರೆ. ಅದೇನೆಂದರೆ, ತಾವೇ ಬೆಳೆಸಿದ ಭಾರತೀಯ ಜನತಾ ಪಕ್ಷ ಬಿಡುವ ಕುರಿತು ಅಥವಾ ಹೊಸ ಪಕ್ಷ ಕಟ್ಟುವ ಕುರಿತು ಇನ್ನೆರಡು ದಿನಗಳಲ್ಲಿ ವಿಶೇಷವಾಗಿ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಸವಿವರವಾಗಿ ಹೇಳುತ್ತೇನೆ ಎಂದು ಹೇಳಿ, ಬೆಳಗಾವಿಯಲ್ಲಿ ಹಬ್ಬದ ಕಳೆ ಮಸುಕಾಗುವಂತೆ ಮಾಡಿದ್ದಾರೆ.
ಪಕ್ಷ ಬಿಡುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, 'ನೋ ಕಾಮೆಂಟ್ಸ್' ಅಂತ ಹೇಳಿ ಜಾರಿಕೊಳ್ಳಬಹುದಿತ್ತು. ಆದರೆ ಯಡಿಯೂರಪ್ಪನವರು ಹಾಗೆ ಮಾಡಿಲ್ಲ, "ಈ ಸಂದರ್ಭದಲ್ಲಿ ಅದೆಲ್ಲ ಬೇಡ ಅನ್ನಿಸತ್ತೆ, ಇನ್ನೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ" ಎಂದು ಏನನ್ನೂ ಹೇಳದೆಯೂ ಎಲ್ಲವನ್ನೂ ಹೇಳಿದ್ದಾರೆ. ಅವರೇ ಶಂಕುಸ್ಥಾಪನೆ ಮಾಡಿದ್ದ ಸುವರ್ಣ ವಿಧಾನಸೌಧ ಉದ್ಘಾಟನೆಯ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತಾ?
ಕಳೆದ ತಿಂಗಳು ಕೂಡ ವಿಶೇಷ ಪತ್ರಿಕಾಗೋಷ್ಠಿ ಕರೆದಿದ್ದ ಯಡಿಯೂರಪ್ಪನವರು, ತಮ್ಮ ಅಂತಿಮ ನಿರ್ಧಾರವನ್ನು ಇನ್ನೇನು ಪ್ರಕಟಿಸುತ್ತಾರೆ ಎಂದುಕೊಳ್ಳುತ್ತಿದ್ದಾಗಲೇ, ಎಂದಿನಂತೆ ತಮ್ಮ ಬದ್ಧ ವೈರಿಗಳಾದ ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರ್ ಅವರನ್ನು ಮನಸೋಇಚ್ಛೆ ಬೈದು ತಮ್ಮ ಸಿಟ್ಟನ್ನು ಅವರ ಮೇಲೆ ಹರಿಯಬಿಟ್ಟಿದ್ದರು. ಆನೇಕಲ್ ಶಾಂತಿಧಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗಲೂ ಅವರು ಅಂತಿಮ ನಿರ್ಧಾರವನ್ನು ಡಿಸೆಂಬರ್‌ನಲ್ಲಿ ಪ್ರಕಟಿಸುವುದಾಗಿ ಹೇಳಿದ್ದರು. ಇದ್ದಕ್ಕಿದ್ದಂತೆ ಈ ಬದಲಾವಣೆ ಏಕೆ? ಬೆಳಗಾವಿಯಲ್ಲಿ ಅವರಿಗೆ ಸಿಗಬೇಕಾದ ಮರ್ಯಾದೆ ಸಿಕ್ಕಿಲ್ಲವಾ?
ದಿನ, ತಿಥಿ, ನಕ್ಷತ್ರ, ಮುಹೂರ್ತಗಳಲ್ಲೆಲ್ಲ ಅಪಾರ ನಂಬಿಕೆ ಇಟ್ಟಿರುವ ಯಡಿಯೂರಪ್ಪನವರು ತಮ್ಮ ಅಂತಿಮ ನಿರ್ಧಾರಕ್ಕೆ ಯಾವ ದಿನ, ತಿಥಿಯನ್ನು ಫಿಕ್ಸ್ ಮಾಡಿದ್ದಾರೆ? ಸದ್ಯಕ್ಕೆ ಪಿತೃಪಕ್ಷ ನಡೆಯುತ್ತಿದೆ. ಅ.15ರಂದು ಮಹಾಲಯ ಅಮವಾಸ್ಯೆ. ಮರುದಿನವೇ ನವರಾತ್ರಿ ಆರಂಭ. ಆ ಸುಸಂದರ್ಭದಲ್ಲಿ ವಿಶೇಷ ಪತ್ರಿಕಾಗೋಷ್ಠಿ ಕರೆಯುತ್ತಾರಾ? ಡಿಸೆಂಬರ್ 25ರಂದು ಬಾಂಬ್ ಸಿಡಿಸುತ್ತಾರೆಂದು ನಂಬಿದ್ದ ಜನರಿಗೆ ಮೋಸ ಮಾಡಿ ಅಕ್ಟೋಬರ್‌ನಲ್ಲಿಯೇ ಬಾಂಬ್ ಸಿಡಿಸಿಬಿಡುತ್ತಾರಾ? ಕಾದು ನೋಡಿ.












Click it and Unblock the Notifications