ಒಬ್ಬಂಟಿ ಮಹಿಳೆ ಬರ್ಬರ ಸಾವು, ಆತಂಕದಲ್ಲಿ ಬೆಂಗಳೂರು

ಒಂಟಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿನಲ್ಲಿ ನಡೆದಿದೆ.
ತಮಿಳುನಾಡಿನ ರಾಣಿಪೇಟ್ ಮೂಲದ ಸುಜಾತ (37) ಕೊಲೆಯಾಗಿರುವ ದುರ್ದೈವಿ. ಕಾಮಾಕ್ಷಿಪಾಳ್ಯದ ಕೆಎಚ್‌ಬಿ ಕಾಲೋನಿಯ ಶ್ರೀ ಕೃಷ್ಣ ಕಲ್ಯಾಣ ಮಂಟಪ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಹತ್ಯೆಯಾಗಿದ್ದಾಳೆ.
ದುಷ್ಕರ್ಮಿಗಳು ಸುಜಾತಾಳ ಕೈಗಳನ್ನು ಹಿಂದಕ್ಕೆ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಬಳಿಕ ನೈಲಾನ್ ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಮಂಗಳವಾರ ಮಟ ಮಟ ಮಧ್ಯಾಹ್ನ 12.30 ರ ಸುಮಾರು. ಮಹಿಳೆಯ ಕುತ್ತಿಗೆ ಬಿಗಿದು ಹತ್ಯೆ ನಡೆದಿದೆ. ಇದ್ದ ಬದ್ದ ಚಿನ್ನಾಭರಣ ದೋಚಿರುವ ಹಂತಕರು ಇನ್ನೇನು ಅಲ್ಲಿಂದ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಹೊರಗಿನಿಂದ ಕಾಲಿಂಗ್ ಬೆಲ್ ಶಬ್ದ. ಅದೇ ಕ್ಷಣಕ್ಕೆ ದೂರವಾಣಿ ರಿಂಗ್ ಆಗಿದೆ. ಒಂದು ಕಡೆ ಕಾಲಿಂಗ್ ಬೆಲ್, ಮತ್ತೊಂದೆಡೆ ದೂರವಾಣಿ ಕರೆ ಇದರ ನಡುವೆ ಕೊಲೆಗಡುಕರಿಗೆ ನಡುಕ ಉಂಟಾಗಿ ಬೆವರು ಇಳಿದಿದೆ.
ಮಂಗಳವಾರ ಬೆಳಗ್ಗೆ ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದಾರೆ. ಪತಿ ಕೂಡ ಕಂಪನಿಗೆ ಹೊರಟು ಹೋಗಿದ್ದರು. ಈ ವೇಳೆ ಮನೆಯಲ್ಲಿ ಸುಜಾತ ಒಂಟಿಯಾಗಿರುವುದನ್ನು ಅರಿತ ಪರಿಚಯಿಸ್ಥರು ಒಳ ಪ್ರವೇಶ ಮಾಡಿದ್ದಾರೆ. ನಂತರ ಆಕೆಯ ಯೋಗಕ್ಷೇಮ ವಿಚಾರಿಸಿ ಟೀ, ಬಿಸ್ಕೆಟ್ ಸೇವಿಸಿದ್ದು ಕೆಲಕಾಲ ಕಳೆದು ನಂತರ ಆಕೆಯನ್ನು ಹತ್ಯೆ ಮಾಡಿದ್ದಾರೆ.
ಹಂತಕರು ಒಳಗೇ ಇದ್ದ ವೇಳೆಯಲ್ಲೇ ಸುಜಾತ ಅವರ ಮನೆ ಕೆಲಸದಾಕೆ ಲಕ್ಷಮ್ಮ ಬಂದು ಬಾಗಿಲು ಬಡಿದು ಕೆಲಕಾಲ ಅಲ್ಲೆ ನಿಂತಿದ್ದಳು. ಅದೇ ವೇಳೆಗೆ ಪಕ್ಕದ ರಸ್ತೆಯಲ್ಲೇ ವಾಸವಿರುವ ಆಕೆಯ ತಂದೆ ಗಣೇಶ್ ಮತ್ತು ಸೋದರ ಸುಂದರ್ ಮನೆಗೆ ಬಂದಿದ್ದಾರೆ. ಈ ವೇಳೆ ಎಷ್ಟು ಬಾರಿ ಕಾಲಿಂಗ್ ಬೆಲ್ ಮಾಡಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ.
ಆಕೆಯ ದೂರವಾಣಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಸ್ನಾನ ಮಾಡುತ್ತಿರಬೇಕೆಂದು ಬ್ಯಾಂಕ್ ನಲ್ಲಿ ಕೆಲಸವಿದ್ದ ಕಾರಣ ಗಣೇಶ್ ಮತ್ತು ಸುಂದರ್ ಹೊರಟು ಹೋಗಿದ್ದಾರೆ. ಲಕ್ಷಮ್ಮ ಮಹಡಿಯ ಮೇಲೆ ತೆರಳಿದ್ದಾಳೆ.
ಅರ್ಧತಾಸಿನ ಬಳಿಕ ಬ್ಯಾಂಕ್‌ನಿಂದಲೇ ಸಹೋದರ ಸುಂದರ್ ಮತ್ತೆ ಸುಜಾತಳ ಮನೆಗೆ ಕರೆ ಮಾಡಿದ್ದಾರೆ. ನಾಲ್ಕೈದು ಬಾರಿ ಕರೆ ಮಾಡಿದ ಬಳಿಕ ಅನಾಮಿಕನೊಬ್ಬ ಸ್ವೀಕರಿಸಿ ಸುಜಾತಗೆ ಅಪಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಆತಂಕಗೊಂಡ ಗಣೇಶ್ ಮತ್ತು ಸುಂದರ್ ಕೂಡಲೇ ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಿದಾಗ ಸುಜಾತ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಸುಜಾತ ತಮಿಳುನಾಡು ಮೂಲದ ಸುಜಾತ 15 ವರ್ಷಗಳ ಹಿಂದೆ ಮುರುಗನ್ ಅವರನ್ನು ವರಿಸಿದ್ದಳು. ಈ ದಂಪತಿ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನ ಕೆಎಚ್‌ಬಿ ಕಾಲೋನಿಯಲ್ಲಿ ನೆಲೆಸಿದ್ದರು. ದಂಪತಿಗೆ ತರುಣ್ ಮತ್ತು ರೋಷನ್ ಎಂಬ ಪುತ್ರರಿದ್ದರು. ಮುರುಗನ್ ರಾಜಾಜಿನಗರದಲ್ಲಿ ಅಗರಬತ್ತಿ ಕವರ್ ತಯಾರಿಕಾ ಕಂಪನಿ ನಡೆಸುತ್ತಿದ್ದಾರೆ.
ವಿಷಯ ತಿಳಿದ ಕಾಮಾಕ್ಷಿಪಾಳ್ಯ ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ಡಿಸಿಪಿ ಸಿದ್ದರಾಮಪ್ಪ ಹೇಳಿದ್ದಾರೆ.


Click it and Unblock the Notifications
