ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿಯ ಭೀಕರ ಹತ್ಯೆ

ವಿಶಾಲಾ (ಹೆಸರು ಬದಲಿಸಲಾಗಿದೆ) ಇಲ್ಲಿಂದ 8 ಕಿ.ಮೀ. ದೂರದಲ್ಲಿರುವ ಉಜಿರೆಯ ಎಸ್‌ಡಿಎಮ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ವಿಶಾಲಾ ಗುತ್ತಿಗೆದಾರರೊಬ್ಬರ ಮಗಳಾಗಿದ್ದು, ಐವರು ಮಕ್ಕಳಲ್ಲಿ ಈಕೆ ಎರಡನೆಯವಳಾಗಿದ್ದಳು. ಮಂಗಳವಾರ ರಾತ್ರಿಯಾದರೂ ಮನೆಗೆ ಬಾರದ್ದರಿಂದ ಆಕೆಯ ಪಾಲಕರು ಮತ್ತು ಸಂಬಂಧಿಗಳು ಇಡೀ ರಾತ್ರಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಮೃತದೇಹ ಬುಧವಾರ ಬೆಳಗ್ಗೆ ಹತ್ತಿರದ ಅರಣ್ಯದಲ್ಲಿ ದೊರೆತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಂಗಳವಾರ ಸಂಜೆ ತನ್ನ ಮನೆಯಿಂದ 1 ಕಿ.ಮೀ. ದೂರವಿರುವ ಪಂಗಳ ಎಂಬಲ್ಲಿ ಶಾಂತಿವನ ಆಸ್ಪತ್ರೆ ಬಳಿ ಬಸ್ಸಿನಿಂದ ಇಳಿದಳು. ಅಲ್ಲಿಂದ ಆಕೆ ಮನೆ ತಲುಪಿಲ್ಲ. ಬಸ್ ನಿಲ್ದಾಣದಿಂದ ಆಕೆಯ ಮನೆಯವರೆಗಿನ ಪ್ರದೇಶ ಸಂಪೂರ್ಣ ನಿರ್ಜನ ಪ್ರದೇಶವಾಗಿದೆ. ವಿಶಾಲಾ ಮಂಗಳವಾರ ಮನೆಗೆ ಬರದಿದ್ದರಿಂದ ಆತಂಕಕ್ಕೀಡಾದ ಪಾಲಕರು ಬುಧವಾರ ಪೊಲೀಸರಿಗೆ ದೂರು ನೀಡಿದ್ದರು.
ವಿಶಾಲಾಳ ಮನೆಯ ಬಳಿಯ ಕಾಡಿನಲ್ಲಿ ಗ್ರಾಮಸ್ಥರಿಗೆ ದೇಹ ದೊರೆತಿದೆ. ಕೂಡಲೆ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ತೊಟ್ಟಿದ್ದ ಸಮವಸ್ತ್ರ ಕೂಡ ಅಲ್ಲಲ್ಲಿ ಹರಿದಿದೆ. ವಿಶಾಲಾಳನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಬ್ಯಾಗ್ ಹತ್ತಿರದಲ್ಲಿ ಸಿಕ್ಕಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.


Click it and Unblock the Notifications
