ನ್ಯಾಯಾಂಗ ನಿಂದನೆ ಅರ್ಜಿ : ತ.ನಾಡಿಗೆ ಶೆಟ್ಟರ್ ತಿರುಗೇಟು

Jagadish Shettar
ಬೆಂಗಳೂರು, ಅ. 9 : ತಮಿಳುನಾಡಿಗೆ ಕಾವೇರಿ ನೀರನ್ನು ನಿಲ್ಲಿಸುವ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿಯೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ನೀರು ನಿಲ್ಲಿಸಿರುವುದು ನ್ಯಾಯಾಂಗ ನಿಂದನೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿರುವ ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮಿಳುನಾಡಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸಂಜೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಆಗಮಿಸಿದ ಶೆಟ್ಟರ್ ಅವರು, ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಕಾನೂನು ಹೋರಾಟ ಎದುರಿಸಲು ಸಿದ್ಧವಿದೆ. ಕಾನೂನು ರೀತಿಯಲ್ಲಿ ಏನೇ ಆದರೂ ಕರ್ನಾಟಕ ರೈತರ ಪರವಾಗಿ ನಿಂತಿದೆ ಎಂಬುದರ ಸಮಾಧಾನವಿದೆ ಎಂದು ಅವರು ಹೇಳಿದರು.

ಕಾವೇರಿ ನೀರು ಪ್ರಾಧಿಕಾರ ನೀಡಿರುವ ತೀರ್ಪಿನ ಮರುಪರಿಶೀಲನೆ ಅರ್ಜಿಗೆ ಸಂಬಂಧಿಸಿದಂತೆ, ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಇತರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರಿಂದ ಅವರನ್ನು ಭೇಟಿಯಾಗಲಿಲ್ಲ ಎಂದು ಶೆಟ್ಟರ್ ನುಡಿದರು. ಸಿಂಗ್ ಅವರು ಪ್ರಾಧಿಕಾರ ನೀಡಿರುವ ತೀರ್ಪಿನ ಮರುಪರಿಶೀಲನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದರೂ, ಅಧ್ಯಯನಕ್ಕೆಂದು ಬಂದಿದ್ದ ಕೇಂದ್ರದ ತಂಡ ವರದಿ ನೀಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಕಬಿನಿ ಮತ್ತು ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀವ್ರ ಕುಸಿದಿರುವುದರಿಂದ ಮತ್ತು ರಾಜ್ಯ ಬರಗಾಲ ಎದುರಿಸುತ್ತಿರುವುದರಿಂದ ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟಿಗೆ ಕರ್ನಾಟಕ ತಿಳಿಸಿದೆ. ಸುಪ್ರೀಂ ಕೋರ್ಟ್ ಮಾತ್ರ ಈ ಸಮಸ್ಯೆಯನ್ನು ಕಾವೇರಿ ನೀರು ಪ್ರಾಧಿಕಾರದ ಜೊತೆ ಕುಳಿತುಕೊಂಡೇ ಬಗೆಹರಿಸಿಕೊಳ್ಳಿ ಎಂದು ಎರಡೂ ರಾಜ್ಯಗಳಿಗೆ ಸ್ಪಷ್ಟವಾಗಿ ಹೇಳಿದೆ. ಅದೃಷ್ಟವಶಾತ್ ಕಾವೇರಿ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಸೇನೆ ನಿಯೋಜಿಸಲು ಪಿಎಂಕೆ ಒತ್ತಾಯ : ತಮಿಳುನಾಡಿಗೆ ನೀರು ಬಿಡುವುದನ್ನು ಕರ್ನಾಟಕ ಸರಕಾರ ಅ.8ರಿಂದ ನಿಲ್ಲಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಮತ್ತು ತಮಿಳುನಾಡಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಪಟ್ಟಾಳಿ ಮಕ್ಕಳ ಕಚ್ಚಿ ಪಕ್ಷದ ನಾಯಕ ಎಸ್ ರಾಮದಾಸ್ ಅವರು, ಕೂಡಲೆ ಡ್ಯಾಂ ಪ್ರದೇಶದಲ್ಲಿ ಸೇನೆ ನಿಯೋಜಿಸಿ, ಬಲವಂತವಾಗಿಯಾದರೂ ತಮಿಳುನಾಡಿಗೆ ನೀರು ಬಿಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ವಕೀಲರೊಂದಿಗೆ ಮಾದೇಗೌಡ ಚರ್ಚೆ : ಕಾವೇರಿ ನೀರನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳಲು ಯಾವ ರೀತಿಯ ಕಾನೂನು ಹೋರಾಟ ನಡೆಸಬೇಕು ಎಂಬ ವಿಷಯ ಕುರಿತು ಬೆಂಗಳೂರಿನ ವಕೀಲರೊಡನೆ, ಕಾವೇರಿಗಾಗಿ ಅವಿರತ ಹೋರಾಟ ನಡೆಸುತ್ತಿರುವ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಂಸದ ಜಿ. ಮಾದೇಗೌಡ ಅವರು ಮಂಗಳವಾರ ಚರ್ಚೆ ನಡೆಸಿದರು. ರಾಜ್ಯ ಸರಕಾರ ಕೂಡ ಮುಂದಿನ ಕ್ರಮ ಏನು ಎಂಬ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+