ಸುಪ್ರೀಂ ತೀರ್ಪು ವ್ಯತಿರಿಕ್ತವಾದರೆ ಉಗ್ರ ಹೋರಾಟ

ನ್ಯಾಯಮೂರ್ತಿ ಎನ್.ಕೆ. ಜೈನ್ ಹಾಗೂ ಮದನ್ ಬಿ.ಲಾಕೂರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ಕರ್ನಾಟಕ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಗೆ ಬರಲಿದೆ. ಕರ್ನಾಟಕದ ಪರ ಹಿರಿಯ ನ್ಯಾಯವಾದಿ ಎಸ್.ಎಸ್. ಜವಳಿ ವಾದ ಮಂಡಿಸಲಿದ್ದಾರೆ.
ಸುಮಾರು 15 ಲಕ್ಷ ಎಕರೆ ಭೂಮಿಯಲ್ಲಿನ ಸಾಂಬಾ ಭತ್ತದ ಬೆಳೆ ಉಳಿಸಲು ತಮಿಳುನಾಡಿಗೆ ಅಕ್ಟೋಬರ್ 1, 2012 ರಿಂದ ಜನವರಿ 31, 2013ರ ತನಕ ಸುಮಾರು 123 ಟಿಎಂಸಿ ಅಡಿ ಅಥವಾ ಪ್ರತಿದಿನ ಸರಾಸರಿ 1 ಟಿಎಂಸಿ ಪೂರೈಕೆ ಮಾಡಬೇಕಿದೆ. ತಮಿಳ್ಯುನಾಡು ಒಟ್ಟಾರೆ 38 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಿದೆ.
ಮಾದೇಗೌಡ ಎಚ್ಚರಿಕೆ: ರಾಜ್ಯಕ್ಕೆ ಸೂಕ್ತ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಸುಪ್ರೀಂಕೋರ್ಟಿನ ವಿಚಾರಣೆ ಹಿನ್ನೆಲೆಯಲ್ಲಿ ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಮಾದೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ.ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಕಾವೇರಿ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ರೈತ ಮುಖಂಡರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಮಾದೇಗೌಡರು ಹೇಳಿದ್ದಾರೆ.
'ನೀರು ಬಿಡಲ್ಲ ಎಂದು ನೀರು ಬಿಟ್ಟಿದ್ದಾರೆ. ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ. ಹೀಗಾಗಿ ಜನಾಂದೋಲನ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸಿಎಂ ಜಗದೀಶ್ ಶೆಟ್ಟರ್ ಅವರು ರೈತರ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದಾರೆ.
ಕಾವೇರಿ ಕೊಳ್ಳ ಪ್ರಾಂತ್ಯ ಶಾಸಕರು, ಸಂಸದರು ರಾಜೀನಾಮೆ ನೀಡಲಿ. ತಮಿಳುನಾಡಿಗೆ ನೀಡು ಬಿಡುವುದನ್ನು ನಿಲ್ಲಿಸುವವರೆಗೂ ನನ್ನ ಹೋರಾಟ ಮುಂದುವರೆಯಲಿದೆ. ಉಪವಾಸ ಸತ್ಯಾಗ್ರಹ ನಿಲ್ಲಿಸಲು ಸಾಧ್ಯವಿಲ್ಲ' ಎಂದು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ ಮಾದೇಗೌಡ ಅವರು ಮತ್ತೊಮ್ಮೆ ಆಗ್ರಹ ಪಡಿಸಿದ್ದಾರೆ.
ಸುರೇಶ್ ಕುಮಾರ್ ದೆಹಲಿಗೆ: ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ವಿವಾದ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ವಕೀಲ ನಾರಿಮನ್ ಅವರೊಂದಿಗೆ ಚರ್ಚಿಸಲು ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಲಿದ್ದಾರೆ.
ಸುಪ್ರೀಂ ತೀರ್ಪಿನ ನಂತರ ಸಂಸದರ ಸಭೆ ಕರೆದು ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಧಾರವಾಡದಲ್ಲಿ ಹೇಳಿದ್ದಾರೆ. ಧಾರವಾಡದಲ್ಲಿ ಆಯೋಜನೆಗೊಂಡಿರುವ ಅಂಧರ ಟಿ20 ಟೂರ್ನಿಗೆ ಚಾಲನೆ ನೀಡಿದ ಶೆಟ್ಟರ್ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಪ್ರತಿಭಟನೆ ಮುಂದುವರಿಕೆ: ಮೈಸೂರಿನಲ್ಲಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ, ಕಾವೇರಿ ನದಿ ಪ್ರಾಧಿಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಇಸಿದರು. ಇಲ್ಲಿನ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.
ಮದ್ದೂರು, ಮಳವಳ್ಳಿ, ಬೋರಾಪುರ, ಗೆಜ್ಜಲಗೆರೆ, ಚನ್ನಪಟ್ಟಣ, ಬೇಲೂರು ಮುಂತಾದೆಡೆ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆದು ಪ್ರತಿಭಟನೆ ನಡೆಸಿದ ವರದಿ ಬಂದಿದೆ.












Click it and Unblock the Notifications