ಗೋವಾದಲ್ಲಿ ಗೂಂಡಾಗಳಿಂದ ಪತ್ರಕರ್ತರ ಹೈಜಾಕ್?

ಕೇಂದ್ರ ವಿಜ್ಞಾನ ಹಾಗೂ ಗಣಿ ಇಲಾಖೆ ಆಯೋಜಿಸಿದ್ದ ಗಣಿಗಾರಿಕೆ ಕುರಿತ ಅಧ್ಯಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಮಾರು 30 ಪತ್ರಕರ್ತರು ಆಗಮಿಸಿದ್ದರು. ಕರ್ನಾಟಕದ ಇಬ್ಬರು ಪತ್ರಕರ್ತರು ಸೇರಿದಂತೆ ಗೋವಾ, ದೆಹಲಿ, ಮಹಾರಾಷ್ಟ್ರದ ಪತ್ರಕರ್ತರು ಸೇರಿದ್ದರು.
ಗೋವಾ ಪತ್ರಕರ್ತರ ಸಂಘ ಗೊತ್ತು ಮಾಡಿದ್ದ ವಾಹನದಲ್ಲಿ ಪತ್ರಕರ್ತರು ಕುರುಪೆ ಗ್ರಾಮಕ್ಕೆ ಆಗಮಿಸಿದ್ದಾರೆ. ನಂತರ ಇಡೀ ವಾಹನವನ್ನು ಸ್ಥಳೀಯ ಗೂಂಡಾಗಳೇ ಕುರುಪೆ ಅರಣ್ಯ ಪ್ರದೇಶದೊಳಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಕರ್ನಾಟಕದಂತೆ ಬಿಜೆಪಿ ಆಡಳಿತವಿರುವ ಗೋವಾ ರಾಜ್ಯ ಕೂಡಾ ಅಕ್ರಮ ಗಣಿಗಾರಿಕೆ ತೊಂದರೆಗೆ ಸಿಲುಕಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಅಸಲಿಗೆ ನಡೆದಿದ್ದೇನು?: ಗಣಿಗಾರಿಕೆ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ವಿವಿಧ ರಾಜ್ಯಗಳ ಸುಮಾರು 30 ಜನರಿದ್ದ ಪತ್ರಕರ್ತರ ತಂಡ ಗೋವಾದ ಸಾಂಗ್ಲಿ ಜಿಲ್ಲೆ ಕುರ್ಪೆ ಗ್ರಾಮಕ್ಕೆ ತೆರಳಿದೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪತ್ರಕರ್ತರು ದಂಡು ಆಗಮಿಸುವ ಬಗ್ಗೆ ಪೂರ್ವ ಮಾಹಿತಿಯಿದ್ದ ಗಣಿ ಮಾಫಿಯಾ ಮಂದಿ ಪೂರ್ವ ಯೋಜನೆಯಂತೆ ಕಾರ್ಯಗತವಾಗಿದೆ.
ಕುರ್ಪೆ ಗ್ರಾಮಸ್ಥರು ಎಂದು ಹೇಳಿಕೊಂಡು ಪತ್ರಕರ್ತರಿದ್ದ ವಾಹನವನ್ನು ಅಪಹರಿಸಿ ಅರಣ್ಯದೆಡೆಗೆ ಕರೆದೊಯ್ದಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಪತ್ರಕರ್ತರಿಗೆ ಗಣಿ ಮಾಫಿಯಾ ದೊರೆಗಳಿಂದ ಬೋಧನೆ ನಡೆದಿದೆ.
'ನೀವು ಗಣಿಗಾರಿಕೆಯಿಂದ ಹಾನಿ ಹೆಚ್ಚಾಗುತ್ತಿದೆ. ಗಣಿಗಾರಿಕೆ ನಿಲ್ಲಿಸಬೇಕು ಎಂದು ವರದಿ ಮಾಡಿದರೆ ನಮಗೆ ಹೆಚ್ಚಿನ ತೊಂದರೆಯಾಗುತ್ತದೆ. ಗ್ರಾಮಸ್ಥರಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ವರದಿಯಲ್ಲಿ ಗಣಿಗಾರಿಕೆ ಮುಂದುವರೆಸುವಂತೆ ಶಿಫಾರಸು ನೀಡಿ' ಎಂದು ಗಣಿ ಮಾಫಿಯಾ ಗೂಂಡಾಗಳು ಬೆದರಿಕೆ ಒಡ್ಡಿದ್ದಾರೆ.
ಈ ಸಂದರ್ಭದಲ್ಲಿ ವರದಿ ತಿರುಚಲು ಸಾಧ್ಯವಿಲ್ಲ ಕೆಲವು ಪತ್ರಕರ್ತರು ಧೈರ್ಯವಾಗಿ ವಾದಿಸಿದ್ದಾರೆ. ಮಾತಿನ ಚಕಮಕಿ, ಚರ್ಚೆ ಸುಮಾರು ಎರಡು ಗಂಟೆಗಳ ಕಾಲ ನಡೆದಿದೆ. ಅದರೆ, ಚರ್ಚೆಯ ಫಲಿತಾಂಶ ಮಾತ್ರ ಸ್ಪಷ್ಟವಾಗಿ ಹೊರಬಿದ್ದಿಲ್ಲ. ಮಾಫಿಯಾ ಗ್ಯಾಂಗಿನ ಸುಮಾರು 150ಕ್ಕೂ ಅಧಿಕ ಮಂದಿ ಪತ್ರಕರ್ತರಿಗೆ ದಿಗ್ಬಂಧನ ಹಾಕಿ ಬೆದರಿಸಿ ಕೊನೆಗೆ ವಾಪಸ್ ಕರೆದುಕೊಂಡು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications