'ನೀರು ಬಿಟ್ರೆ ರೈತರು ಎಂಥವರೆಂದು ತೋರಿಸ್ತೀವಿ'

ಮಂಡ್ಯದ ಮಾಜಿ ಸಂಸದ, ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ ಮಾದೇಗೌಡರ ನೇತೃತ್ವದಲ್ಲಿ ಬೀದಿಗಿಳಿದಿದ್ದಾರೆ. ಕರ್ನಾಟಕ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸಿ ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದಲ್ಲಿ ಕೃಷ್ಣರಾಜ ಸಾಗರದ ತೂಬಿನ ಮುಂದುಗಡೆಯೇ ಕುಳಿತು ಪ್ರತಿಭಟನೆ ನಡೆಸುವುದಾಗಿ ಮಾದೇಗೌಡರು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ಕರ್ನಾಟಕ ಭಾರೀ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಟ್ಟರೆ ಮಂಡ್ಯದ ರೈತರು ಎಂಥವರೆಂದು ತೋರಿಸಬೇಕಾಗುತ್ತದೆ. ಈ ಆದೇಶ ಕುರಿತಂತೆ ರಾಜ್ಯ ಸರಕಾರ ಎಂಥ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಆಧರಿಸಿ ರಾಜ್ಯಾದ್ಯಂತ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಮಾದೇಗೌಡರು ತಿಳಿಸಿದ್ದಾರೆ.
ಆದರೆ, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳು ಈಗಾಗಲೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರಿನಲ್ಲಿ ಕೂಡ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರ ನಿವಾಸ 'ಕೃಷ್ಣಾ' ಎದಿರು ಜಮಾಯಿಸಿ ರಾಜ್ಯ ಸರಕಾರ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ರೈತರು ತಲೆಯ ಮೇಲೆ ಚಪ್ಪಡಿಕಲ್ಲು ಹೊತ್ತುಕೊಂಡು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಸುಪ್ರೀಂ ಕೋರ್ಟ್ ವಿಷಾದ : ಪ್ರಧಾನಿ ಮನಮೋಹನ ಸಿಂಗ್ ನೇತೃತ್ವದ ಕಾವೇರಿ ನೀರಿ ಪ್ರಾಧಿಕಾರದ ಆದೇಶವನ್ನು ಪಾಲಿಸದ ಕರ್ನಾಟಕವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. "ಮನಮೋಹನ ಸಿಂಗ್ ಅವರು ದೇಶದ ಅತ್ಯುನ್ನತ ಸ್ಥಾನದಲ್ಲಿರುವವರು. ಅವರ ಆದೇಶವನ್ನೇ ನೀವು ಧಿಕ್ಕರಿಸುತ್ತಿದ್ದೀರಿ. ಇದು ನಿಜಕ್ಕೂ ಖೇದನೀಯ" ಎಂದು ಸುಪ್ರೀಂ ಕೋರ್ಟ್ ಕರ್ನಾಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಾವೇರಿ ಪ್ರಾಧಿಕಾರದ ಆದೇಶ ಧಿಕ್ಕರಿಸಿದ್ದರಿಂದ ತಮಿಳುನಾಡು ಸುಪ್ರೀಂ ಕೋರ್ಟ್ ಕದವನ್ನು ತಟ್ಟಿತ್ತು.
ಶನಿವಾರ ಸರ್ವಪಕ್ಷ ಸಭೆ : ಬೇಕಿದ್ರೆ ರಾಜೀನಾಮೆ ನೀಡುತ್ತೇನೆ, ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಶನಿವಾರ ರಾಜ್ಯದಲ್ಲಿ ಉಭಯ ಸದನಗಳ ಸಭೆ ಕರೆದಿದ್ದು, ಶಾಸಕರು, ಪರಿಷತ್ ಸದಸ್ಯರು, ಸಂಸದರು ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ದೆಹಲಿಯಲ್ಲಿ ಹೇಳಿದ್ದಾರೆ.
ದೆಹಲಿಯಲ್ಲಿರುವ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಕೂಡ, ತಮಿಳುನಾಡಿಗೆ ನೀರು ಬಿಡಬೇಕೋ ಬಿಡಬಾರದು ಎನ್ನುವ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಯಾಕೆಂದರೆ ಕೆಆರ್ಎಸ್‌ನಲ್ಲಿ ನೀರು ಇಲ್ಲವೇ ಇಲ್ಲ. ನಮ್ಮ ರಾಜ್ಯದ ರೈತರು ಒಂದು ಬೆಳೆ ಬೆಳೆಯುವುದು ಹೇಗೆ ಎಂದು ಚಿಂತಿತರಾಗಿದ್ದರೆ, ತಮಿಳುನಾಡು ನೀರು ಶೇಖರಿಸಿಟ್ಟುಕೊಂಡು ಎರಡನೇ ಬೆಳೆಯ ಬಗ್ಗೆ ಚಿಂತನೆ ನಡೆಸುತ್ತಿದೆ. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಖಡಾಖಂಡಿತವಾಗಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ : ಮೈಸೂರಿನಲ್ಲಿ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕಾವೇರಿ ನದಿಪಾತ್ರದಲ್ಲಿ ನೀರು ಇಲ್ಲವೇ ಇಲ್ಲ. ನೀರು ಬಿಡುವುದು ಅಸಾಧ್ಯ. ಆದರೆ, ಬಿಜೆಪಿ ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ನಮ್ಮ ಪರಿಸ್ಥತಿಯನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.












Click it and Unblock the Notifications