ಶೆಟ್ರು ಕೊನೆಗೂ ಜೆಡಿಸ್ ಕುಮಾರಸ್ವಾಮಿಯ ಕೈಹಿಡಿದರು!

ಮಾಜಿ ಸಚಿವ ನಾಗರಾಜ ಶೆಟ್ಟಿ ಅನಾಯಾಸವಾಗಿ JDS ತೆಕ್ಕೆಗೆ ಬಂದಿದ್ದರೆ ಪುತ್ತೂರಿನ ಶಕ್ಕು ಅಕ್ಕ ಸದ್ಯಕ್ಕೆ ಒಲ್ಲೆ ಅಂದಿದ್ದಾರೆ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು 'ನೀನು ವರಮಹಾಲಕ್ಷ್ಮಿ ಇದ್ಹಾಗೆ. ಬಂದುಬಿಡು JDSಗೆ' ಎಂದು ಕಳೆದ ವರಮಹಾಲಕ್ಷ್ಮಿ ದಿನದಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಮನೆ ಬಾಗಿಲಿಗೆ ಹೋಗಿ ಖುದ್ದಾಗಿ ಹೂವೀಳ್ಯ ನೀಡಿದ್ದರೂ ಶಕ್ಕು ಅಕ್ಕ ಮಿಸುಕಾಡಿಲ್ಲ.
'ನೋಡೋಣ ಎಲೆಕ್ಷನ್ ಡೇಟ್ ಪ್ರಕಟವಾಗಲಿ. ಅಂದಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಅನಿತಕ್ಕಾ' ಎಂದು ನಯವಾಗಿಯೇ ಹೇಳಿಕಳಿಸಿದ್ದಾರೆ.
ಈ ಮಧ್ಯೆ, ಮಾಜಿ ಸಿಎಂ ಯಡಿಯೂರಪ್ಪನವರ ಖಾಸಾ ವ್ಯಕ್ತಿಯಾಗಿದ್ದ ಮಾಜಿ ಸಚಿವ ನಾಗರಾಜ ಶೆಟ್ಟಿ ಅವರನ್ನು ಅಪ್ಪಿಕೊಳ್ಳುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿರುವುದು ಕರಾವಳಿ ಬಿಜೆಪಿ ಮಂದಿಗೆ ಸೋಜಿಗ ತಂದಿದೆ. ಆದರೆ ಇಂದಿನ ರಾಜಕಾರಣದಲ್ಲಿ ವ್ಯಕ್ತಿ ನಿಷ್ಠೆ/ ಪಕ್ಷ ನಿಷ್ಠೆ ಎಂಬುದು ಚಟ್ಟ ಸೇರಿರುವಾಗ ನಾಗರಾಜ ಶೆಟ್ಟಿಯ ನಡೆ ಅಂತಹ ಆಘಾತವನ್ನೇನೂ ತಂದಿಲ್ಲ ಎಂದು ಕರಾವಳಿ ಬಿಜೆಪಿ ತೃಪ್ತಿಪಟ್ಟುಕೊಂಡಿದೆ. ಆದರೆ ಇಲ್ಲಿನ ಮತದಾರ ಮುಂದಿನ ಚುನಾವಣೆಯಲ್ಲಿ ಯಾವ ನಡೆ ಚಲಾಯಿಸುತ್ತಾನೋ ಎಂಬುದಷ್ಟೇ ಈಗ ಕುತೂಹಲಕಾರಿಯಾಗಿರುವುದು.
ಮಾಜಿ ಸಚಿವ ಅಮರನಾಥ ಶೆಟ್ಟಿ, ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಪಕ್ಷದ ಮುಖಂಡರಾದ ಜಫರುಲ್ಲಾ ಖಾನ್, ಅಫ್ಸರ್ ಆಗಾ, ಶಕೀಲ್ ನವಾಜ್, ಭೋಜೇಗೌಡ, ಸೌಂದರ್ಯ ರಮೇಶ್, ಪ್ರಸಾದ್ ಬಾಬು, ಯು.ಆರ್.ಸಭಾಪತಿ, ದೇವಿಪ್ರಸಾದ್ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಎಂ.ಜಿ. ಹೆಗಡೆ, ಗುಲಾಂ ಅಹ್ಮದ್ ಉಡುಪಿ, ಜಯಲಕ್ಷ್ಮೀ ಹೆಗಡೆ, ವಿಟ್ಲ ಮುಹಮ್ಮದ್ ಕುಂಞಿ, ಅಝೀಝ್ ಮಲಾರ್, ಅಝೀಝ್ ಕುದ್ರೋಳಿ, ಮಜೀದ್ ಸೂರಲ್ಪಾಡಿ, ಡಿ.ಎಂ.ಅಸ್ಲಂ, ಮುಹಮ್ಮದ್ ರಫಿ, ಉದ್ಯಮಿ ಸದಾನಂದ ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಯಡ್ಡಿ ಜತೆ 20-20 ಆಡಲು ಪ್ರೇರಿಪಿಸಿದ್ದು ಯಾರು?
ಯಡಿಯೂರಪ್ಪ ಜತೆ 20-20 ಆಡಲು ಕುಮಾರಣ್ಣನನ್ನು ಪ್ರೇರಿಪಿಸಿದ್ದು ಶೆಟ್ಟಿಯೇ? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಹೀಗೆ ಉತ್ತರಿಸಿದ್ದಾರೆ: 'ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಗಲು ನಾಗರಾಜ ಶೆಟ್ಟಿಯೇ ಕಾರಣ. ಪ್ರಥಮ ಬಾರಿಗೆ ಶಾಸಕನಾಗಿ ಸದನದ ಕೊನೆಯ ಸೀಟಿನಲ್ಲಿ ಆಸೀನರಾಗಿದ್ದ ಶೆಟ್ಟರು 'ನನ್ನ ಬಳಿ ಬಂದು ಸಮ್ಮಿಶ್ರ ಸರಕಾರದ ಬಗ್ಗೆ ಚರ್ಚೆ ನಡೆಸುವ ಮೂಲಕ ನನ್ನ ತಲೆ ಕೆಡಿಸಿದರು' ಎಂದು ಕುಮಾರಸ್ವಾಮಿ ತುಸು ಮುನಿಸಿನಿಂದಲೇ ಹೇಳಿದರು.
ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು 'ಭ್ರಷ್ಟಾಚಾರ ಸಹಿತ ನಾನಾ ಹಗರಣಗಳಲ್ಲಿ ಸಿಲುಕಿರುವ ರಾಜ್ಯ ಬಿಜೆಪಿ ಸರಕಾರ ಮುಂದಿನ ಚುನಾವಣೆಯಲ್ಲಿ ಧೂಳೀಪಟವಾಗಲಿದೆ' ಎಂದು ಭವಿಷ್ಯ ನುಡಿದ ಕುಮಾರಸ್ವಾಮಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರದ ಆರ್ಥಿಕ ನೀತಿಯಿಂದ ಜನರ ಬದುಕು ದುಸ್ತರವಾಗಿದೆ. ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಳ್ಳುವ ಈ ಸರಕಾರಕ್ಕೆ ಪಾಠ ಕಲಿಸಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ಗೆ ಇನ್ನೂ ಯಾರೆಲ್ಲಾ ಸೇರ್ಪಡೆ?:
ಇತ್ತೀಚೆಗಷ್ಟೇ ಕರಾವಳಿ ಅಭಿವೃದ್ಧಿ ನಿಗಮಕ್ಕೆ (CDA) ರಾಜೀನಾಮೆ ಸಲ್ಲಿಸಿದ್ದ ನಾಗರಾಜ ಶೆಟ್ಟಿ ಅವರ ಜತೆಜತೆಗೆ ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಅಣ್ಣಯ್ಯ ಶೇರಿಗಾರ್, ಉದ್ಯಮಿ ಮೊಯ್ದಿನ್, ರೇಖಾ ಶೆಟ್ಟಿ, ಡಾ.ಖಾದರ್ ಕಾಸರಗೋಡು, ಚಂದ್ರ ಕೋಲ್ಚಾರು, ರಂಜಿತ್ ಮಲ್ಲಿ ಸಹಿತ ನೂರಾರು ಮಂದಿ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಸೋಮವಾರ ನಡೆದ ದ.ಕ. ಜಿಲ್ಲಾ ಜಾತ್ಯತೀತ ಜನತಾದಳ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರೇ ಖುದ್ದು ಆತಿಥ್ಯವಹಿಸಿ ಇವರನ್ನೆಲ್ಲ ಪಕ್ಷಕ್ಕೆ ಬರಮಾಡಿಕೊಂಡರು.
ಪ್ರಸಕ್ತ ವರ್ಷ ರಾಜ್ಯದ 47 ಇಮಾಮರಿಗೆ ಹಜ್ ಯಾತ್ರೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ವರ್ಷ ದ.ಕ. ಜಿಲ್ಲೆಯ 10 ಮಂದಿ ಇಮಾಮರಿಗೆ ಈ ಅವಕಾಶ ಕಲ್ಪಿಸಲಾಗುವುದು ಎಂದು ಜಮೀರ್ ಅಹ್ಮದ್ ಇದೇ ವೇಳೆ ಭರವಸೆ ನೀಡಿದರು.
ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ರಾಜ್ಯದ 3 ಲಕ್ಷ ವಿಕಲಚೇತನ ಕುಟುಂಬಗಳ ಮಕ್ಕಳಿಗೆ ಮಾಸಿಕ 2,500 ರೂ. ಗೌರವ ಧನ ಮತ್ತು ಮದುವೆ ಯಾಗದ ಹೆಣ್ಮಕ್ಕಳಿಗೆ ಮಾಸಿಕ 1,500 ರೂ. ಗೌರವ ಧನ ನೀಡಲಾ ಗುವುದು ಎಂದು ಕುಮಾರಸ್ವಾಮಿ ಘೋಷಿಸಿದರು.












Click it and Unblock the Notifications