ಜಯಾ ಎದುರು ಪ್ರಧಾನಿಗೆ 'ಕೊಲವರಿ ಡಿ' ಎಂದ ಶೆಟ್ಟರ್

ಇನ್ನು ಎಫ್ ಡಿಐ, ಡೀಸೆಲ್, 6/12 ಸಿಲಿಂಡರ್ ಸೂಕ್ಷ್ಮ ವಿಷಯಗಳಾಗಿದ್ದು ಸ್ವತಃ ಆ ವಿಷಯಗಳೇ ಬಂದ್ ಗೆ ಹೇತುವಾಗಿವೆ. ವ್ಯಾಪಾರ ಸಂಘಟನೆಗಳು ಇತ್ತ ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿದ್ದರೆ ಇಡೀ ದೇಶವನ್ನೇ ಅಡ ಇಡುವಂತಹ ಎಫ್ ಡಿಐ ಸ್ವಾತಂತ್ರ್ಯ ನಮಗೆ ಬೆಡ್ವೇ ಬೇಡವೆಂದು ಆಡಳಿತಾರೂಢ ಮೈತ್ರಿಕೂಟದ ಪಕ್ಷಗಳೇ ಸಿಟ್ಟಿಗೆದ್ದಿವೆ.
ಇದು ಪ್ರಧಾನವಾಗಿ ಯುಪಿಎ-2 ಮೈತ್ರಿಕೂಟದ ಯಜಮಾನಿಕೆ ವಹಿಸಿರುವ ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿದೆ. ತನ್ನ ಮೈತ್ರಿಯನ್ನು ಮಧುರಗೊಳಿಸಲು ನಿರ್ಣಾಯಕ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ ಇಂದಿನ ಭಾರತ್ ಬಂದ್ ಪ್ರತಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ. ಖುದ್ದು ಕಾಂಗ್ರೆಸ್ಸೇ ಇದನ್ನು ಪ್ರತಿಪಕ್ಷಗಳಿಗೆ ಬಳುವಳಿಯಾಗಿ ನೀಡಿದೆ.
ಬಿಜೆಪಿಯಂತೂ ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಸಂಪೂರ್ಣ ಬಂದ್ ಆಚರಿಸಿ, ಆದರೆ ಶಾಂತಿಯುತವಾಗಿರಲಿ ಎಂಬುದು ದೆಹಲಿಯಿಂದ ಹೊರಬಿದ್ದಿರುವ ಪಕ್ಷದ ಸಂದೇಶವಾಗಿದೆ.
ಮಹಾರಾಷ್ಟ್ರದಲ್ಲಿ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿನ ಆಡಳಿತಾರೂಢ ಸರಕಾರ ಬಂದ್ ಬೇಡ ಎಂದಿದೆ. ಇದಕ್ಕೆ ಶಿವಸೇನೆಯೂ ಸಾಥ್ ನೀಡಿದೆ. ಐತಿಹಾಸಿಕ ಗಣೇಶನ ಹಬ್ಬ ಸುಗಮವಾಗಿ ನೆರವೇರಲಿ ಎಂಬುದು ಶಿವಸೈನಿಕರ ಕಾಳಜಿಯಾಗಿದೆ. ಆದರೆ ವಾಣಿಜ್ಯ ನಗರಿಯಲ್ಲಿನ ಉದ್ಯಮಿ/ವ್ಯಾಪಾರಿಗಳಿಗೆ ಎಫ್ ಡಿಐ, ಡೀಸೆಲ್ ಬೆಲೆ, 6/12 ಸಿಲಿಂಡರ್ ನೀತಿಗಳು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ, ಕೇಂದ್ರಕ್ಕೆ ಬಿಸಿಮುಟ್ಟಿಸುವುದು ಅನಿವಾರ್ಯವಾಗಿದ್ದು ಭಾರತ್ ಬಂದ್ ಗೆ ಕೈಜೋಡಿಸಿದೆ.
ಇನ್ನು ಕರ್ನಾಟಕದ ಪರಿಸ್ಥಿತಿಯಂತೂ ಅಯೋಮಯವಾಗಿದೆ. 'ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮೂ' ಅನ್ನುವಂತಾಗಿದೆ ರಾಜ್ಯದ ಸ್ಥಿತಿ. ಎಫ್ ಡಿಐ ಬಗ್ಗೆ ರಾಜ್ಯ ಸರಕಾರದ ನಿಲುವೇನೂ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಡೀಸೆಲ್ ಬೆಲೆ ಏರಿಕೆ ಮತ್ತು 6/12 ಸಿಲಿಂಡರ್ ನೀತಿ ರಾಜ್ಯಕ್ಕೆ ಖಂಡಿತಾ ಸ್ವೀಕಾರಾರ್ಹವಲ್ಲ.
ಇದರ ಜತೆಗೆ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡು ಮುಖ್ಯಮಂತ್ರಿಗೆ (ಸೋದರಿ ಜಯಲಲಿತಾ) ಪ್ರಧಾನಿ ಸಿಂಗ್ ಮಣೆ ಹಾಕಿದ್ದನ್ನು ನೋಡಿ ನಮ್ಮ ಸಿಎಂ ಶೆಟ್ಟರ್ ಅವರು ಇದ್ದಬದ್ಧ ಧೈರ್ಯವನ್ನೆಲ್ಲ ಮೈಮೇಲೆ ಎಳೆದುಕೊಂಡು ಜಯಲಲಿತಾಗೂ ಕೇಳಿಸುವಂತೆ ಜೋರಾಗಿ Why this kolaveri kolaveri kolaveri di ಎಂದು ಪ್ರಧಾನಿಯನ್ನು ಕೇಳಿದ್ದಾರೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಇದರ ತರಂಗಾಂತರಂಗ ಕರ್ನಾಟಕದಲ್ಲೂ ಜೋರಾಗಿ ಕೇಳಿಬರುವಂತಾಗಿದೆ.


Click it and Unblock the Notifications
