ಭಾರತ್ ಬಂದ್ ಗೆ ತುಪ್ಪ ಸುರಿದ ಪ್ರಧಾನಿ ಸಿಂಗ್

'ಮುಂದಿನ ತಿಂಗಳು ನೈಋತ್ಯ ಮುಂಗಾರು ಮಳೆಯಾಗಲಿ ಆಗ ಬೇಕಾದರೆ ಕಾವೇರಿ ನೀಡುಬಿಡುತ್ತೇವೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರಧಾನಿ ಕರೆದಿದ್ದ ಸಭೆಗೆ ನಿನ್ನೆ ತಿಳಿಯಹೇಳಿದರೂ
ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಪೂರ್ವತಯಾರಿಯಾಗಿ ಬಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜಕೀಯ ಕಾರಣಗಳಿಗಾಗಿ ಮಂಡಿಯೂರಿ ತಮಿಳುನಾಡಿಗೆ ದಿನಾ ನೀರು ಬಿಡಿ ಎಂದಿದ್ದಾರೆ. ಈ ತಾರತಮ್ಯ ನೀತಿಯು ಮಂಡ್ಯ, ಬೆಂಗಳೂರು ಜನರನ್ನು ರೊಚ್ಚಿಗೆಬ್ಬಿಸಿದೆ.
ಕಾವೇರಿ ತಟದ ವ್ಯಕ್ತಿಯೊಬ್ಬರು ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ಕರ್ನಾಟಕದ ಪರವಾಗಿ ನ್ಯಾಯೋಚಿತ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಧಾನಿಗೆ ವಸ್ತುಸ್ಥಿತಿ ವಿವರಿಸುವಲ್ಲಿ ವಿಫಲವಾಗಿರುವುದು ಮಂಡ್ಯದ ಜನತೆಗೆ ಅತೀವ ಬೇಸರದ ಸಂಗತಿಯಾಗಿದೆ.
ಈಗಾಗಲೇ ಪ್ರತಿಪಕ್ಷಗಳು ಕರೆನೀಡಿದ್ದ ದೇಶವ್ಯಾಪಿ ಬಂದ್ ಗೆ ಇದರಿಂದ ತುಪ್ಪ ಸುರಿದಂತಾಗಿದೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಯಾವಾಗ ಹೇಗೋ ಏನೋ ಎಂಬ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರಿ ಬಸ್ಸುಗಳು ಬೀದಿಗಿಳಿಯುವ ಗೋಜಿಗೇ ಹೋಗಿಲ್ಲ. ಮೊನ್ನೆಯಷ್ಟೇ ಇದೇ ಸರಕಾರಿ ಬಸ್ಸುಗಳ ಮೂರು ದಿನಗಳ ಮುಷ್ಕರದಿಂದ ಹೈರಾಣಗೊಂಡಿದ್ದ ಪ್ರಯಾಣಿಕರು ಇದೆಲ್ಲ ನಿರೀಕ್ಷಿತ ಎಂಬಂತೆ ಮನೆಬಿಟ್ಟು ಹೊರಬಂದಿಲ್ಲ.
ಇನ್ನು ಹಬ್ಬಕ್ಕೆಂದು ಊರುಗಳಿಗೆ ಹೋಗಿರುವವರು ಅಲ್ಲೇ ಜಂಡಾ ಹೂಡಿದ್ದಾರೆ. ಈ ಮಧ್ಯೆ ಅನಿವಾರ್ಯವಾಗಿ ಕೆಲಸಕ್ಕೆ ಬರಬೇಕಾದವರು ಮುಂಜಾನೆಯೇ ಬಸ್ ಹಿಡಿದು ತಮ್ಮ ಕಚೇರಿಗಳನ್ನು ಸೇರಿಕೊಂಡಾಗಿದೆ. ಅಂತಹವರಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಮಂದಿ ಒಂದಷ್ಟು ಕರುಣೆ ತೋರಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯೊಳಗಾಗಿ ಅನಿವಾರ್ಯ ಮಾರ್ಗಗಳಲ್ಲಿ ಬಸ್ ಓಡಾಡಿವೆ. ಕೆಲಸದ ನಿಮಿತ್ತ ಅನಿವಾರ್ಯವಾಗಿ ಬಸ್ ಹತ್ತಿದ ಪ್ರಯಾಣಿಕರನ್ನು ಅವರವರ ಕಚೇರಿಗಳ ಇಂಚುಮುಂಚು ಇಳಿಸಿ ಡಿಪೋಗಳಿಗೆ ವಾಪಸಾಗಿವೆ.
ಡ್ರೈವರ್ ಕಂಡಕ್ಟರುಗಳು ಇಂತಹ ಪ್ರಯಾಣಿಕರಿಗೆ ಉಚಿತ ಸಲಹೆಯನ್ನೂ ನೀಡಿದ್ದಾರೆ. ಸಂಜೆ 6 ಗಂಟೆವರೆಗೂ ಇಂದು ನಿಮ್ಮ ನಿಮ್ಮ ಕಚೇರಿಗಳಲ್ಲೇ ಇರಿ, ಸಂಜೆ ಆರೇಳು ಗಂಟೆಯ ನಂತರವಷ್ಟೇ ನಾವು ಮತ್ತೆ ಕೆಲಸಕ್ಕೆ ಬರೋದು ಎಂದು ಹೇಳಿಹೋಗಿದ್ದಾರೆ. 'ಬದುಕಿದೆಯಾ ಬಡಜೀವವೇ' ಎಂದು ಪ್ರಯಾಣಿಕರೂ ಬಿಎಂಟಿಸಿ ಸಿಬ್ಬಂದಿಗೆ ಒಂದು ಥ್ಯಾಂಕ್ಸ್ ಹೇಳಿ ತಮ್ಮ ಕಚೇರಿಗಳತ್ತ ಕಾಲೆಳೆದಿದ್ದಾರೆ.
ಇನ್ನು ರಾಜ್ಯದ ಇತರೆ ಭಾಗಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯದ ಮಟ್ಟಿಗೆ ಹೇಳುವುದಾದರೂ ಇದೊಂದು government sponsored ಬಂದ್ ಅಂತಲೇ ಹೇಳಬಹುದು. ಹಾಗಾಗಿ ಶಾಲಾ ಕಾಲೇಜು ಕಚೇರಿಗಳನ್ನು ಬಂದ್ ಮಾಡುವುದು ಆಯಾ ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟ ನಿರ್ಧಾರವೆಂದು ಹೇಳಿದ್ದರೂ ಈಗಾಗಲೇ 10 ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಿಸಿರುವುದರಿಂದ ಉಳಿದ ಜಿಲ್ಲೆಗಳೂ ಸದ್ದಿಲ್ಲದೆ ಬಂದ್ ಆಚರಿಸುತ್ತಿವೆ.
ಈ ಮಧ್ಯೆ, ನಿಜಕ್ಕೂ ಹೆಚ್ಚುವರಿ ಕೆಲಸದಲ್ಲಿ ತೊಡಗಿರುವವರು ನಮ್ಮ ಪೊಲೀಸ್ ಸಿಬ್ಬಂದಿ. ಅತ್ತ ಶಂಕಿತ ಭಯೋತ್ಪಾದನೆ, ಆ ನಂತರ ಮುಷ್ಕರಗಳ ಉಗ್ರವಾದ, ಈಗ ಪ್ರತಿಭಟನೆಯ ಬಿಸಿಯಿಂದಾಗಿ ಪೊಲೀಸರು ಈಬಾರಿ ನೆಮ್ಮದಿಯಾಗಿ ಗಣೇಶನ ಹಬ್ಬವನ್ನೂ ಆಚರಿಸಿಲ್ಲ. ಜನರನ್ನು ನೆಮ್ಮದಿಯಾಗಿರಲು ಬಿಟ್ಟು ಪೊಲೀಸರು ಅಕ್ಷರಶಃ ಬೀದಿಯಲ್ಲಿ ಪಹರೆಗೆ ನಿಂತಿದ್ದಾರೆ.


Click it and Unblock the Notifications
