ಭಾರತ್ ಬಂದ್‌ಗೆ ಬೆನ್ನುತಟ್ಟಿದ ಬೆಂಗಳೂರು!

ಬೆಂಗಳೂರು, ಸೆ. 18 : ಕಳೆದ ಹದಿನಾರು ದಿನಗಳಲ್ಲಿ ಕರ್ನಾಟಕ ಕಾಣುತ್ತಿರುವ ಮೂರನೇ ಬಂದ್ ಇದು. ಸೆ.4ರಂದು ಕಲ್ಲಿದ್ದಲು ಮಸಿ ವಿರೋಧಿಸಿ ಭಾರತದಾದ್ಯಂತ ಕಾಲೇಜು ಬಂದ್ ಕರೆ ನೀಡಲಾಗಿತ್ತು. ಸೆ.13ರಂದು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಕರೆಯಲಾಗಿದ್ದ ಬಂದ್ ಮೂರು ದಿನ ಜನರನ್ನು ಮತ್ತು ಸರಕಾರವನ್ನು ಸಾಕಷ್ಟು ಆಟ ಆಡಿಸಿತು. ಈಗ, ಇಂದು, ಸೆ.20ರಂದು ಎನ್‌ಡಿಎ ಕರೆದಿರುವ ಭಾರತ್ ಬಂದ್.

ಈ ಬಂದ್‌ನಿಂದಾಗಿ, ದಿನನಿತ್ಯ ರಸ್ತೆ ಸಂಚಾರ ದಟ್ಟಣೆಯಿಂದ ಬವಣೆಪಡುತ್ತಿರುವ ಬೆಂಗಳೂರು ನಗರಿ ಇದ್ದಕ್ಕಿದ್ದಂತೆ ಹೊಸ ಅಂಗಿ ತೊಟ್ಟಂತೆ ನಲಿದಾಡಲು ಶುರು ಮಾಡಿಬಿಡುತ್ತದೆ. ಉಸಿರಿಗಟ್ಟುವ ವಾತಾವರಣ ಇಲ್ಲದೆ ಸರಾಗವಾಗಿ ಉಸಿರಾಡಲು ಪ್ರಾರಂಭಿಸುತ್ತದೆ. ನಿತ್ಯ ಬಸ್ಸನ್ನೇ ನಂಬಿರುವವರು ತೊಂದರೆ ಅನುಭವಿಸಿದರೂ, ಉದ್ಯಾನ ನಗರಿ ಮಾತ್ರ ಹೊಸ ಕಳೆಯಿಂದ ಕಂಗೊಳಿಸಲು ಪ್ರಾರಂಭಿಸುತ್ತದೆ.

ಕೆಂಗೇರಿ ಉಪನಗರದಿಂದ ಜಯನಗರ 3ನೇ ಬ್ಲಾಕಿಗೆ ಬರುವ ದಾರಿ ಪ್ರತಿದಿನ ಹೀಗೇ ಇದ್ದರೆ ಎಷ್ಟು ಚೆನ್ನ ಎಂಬಂತೆ ಭಾಸವಾಗುತ್ತಿರುತ್ತಿತ್ತು. ಬಿಎಂಟಿಸಿ ಬಸ್ಸಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆ ಖಾಲಿಖಾಲಿ. ಹ್ಯಾಗಿದ್ರೂ ಬಸ್ಸು ಬರೋದಿಲ್ಲವೆಂದು ಜನರೂ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಬಸ್ಸಿಗಾಗಿ ಕಾಯುವ ಗೋಜಿಗೆ ಹೋಗಿಲ್ಲ. ಕೆಲ ಅಂಗಡಿ ಮಾಲಿಕರು ಇಲ್ಲಿ ಹ್ಯಾಗಿದ್ರೂ ಗಲಾಟೆಯಾಗಲ್ಲ, ಕಲ್ಲು ಹೊಡೆಯಲ್ಲ ಎಂದು ದಿಲ್ದಾರ್ ಆಗಿ ಅಂಗಡಿ ತೆರೆದು ಗಿರಾಕಿಗಳಿಗಾಗಿ ಕಾಯುತ್ತಿದ್ದರು. [ಭಾರತ ಬಂದ್ ಚಿತ್ರಸಂಪುಟ]

ಬಂದ್‌ನಿಂದಾಗಿ ಕಂಡುಬಂದ 5 ದೃಶ್ಯವಾಳಿಗಳು ಹೀಗಿವೆ

ಇದು ನಿಜಕ್ಕೂ ನಾಯಂಡಹಳ್ಳಿ ಜಂಕ್ಷನ್ನಾ?

ಇದು ನಿಜಕ್ಕೂ ನಾಯಂಡಹಳ್ಳಿ ಜಂಕ್ಷನ್ನಾ?

ಪ್ರತಿದಿನ ಮೈಸೂರು ರಸ್ತೆಯಲ್ಲಿರುವ ನಾಯಂಡಹಳ್ಳಿ ಜಂಕ್ಷನ್ನಿನಲ್ಲಿ ಉಸಿರುಗಟ್ಟಿರುವ ರಿಕ್ಕಾದ ವಾಹನ ದಟ್ಟಣೆ ನೋಡಿ ಅಭ್ಯಾಸವಾದವರಿಗೆ ಇಂದಿನ ದೃಶ್ಯ ಬೇಜಾರಾದರೂ ಆಶ್ಚರ್ಯವಿಲ್ಲ. ಇದು ನಾಯಂಡಹಳ್ಳಿ ವೃತ್ತವೇ ಎಂಬಷ್ಟು ಸಂತೋಷ ತಂದರೂ ಆಶ್ಚರ್ಯವಿರಲಿಲ್ಲ. ಪಕ್ಕದಲ್ಲಿ ಹರಿಯುವ ವೃಷಭಾವತಿ ನದಿ(ಚರಂಡಿ)ಯ ಸಪ್ಪಳ ಕೇಳಿಸುವಷ್ಟು ವಾಹನ ಸಂಚಾರ ವಿರಳವಾಗಿತ್ತು. ನಾಗರಭಾವಿಯಿಂದ ಬನಶಂಕರಿಗೆ ಹೋಗುವ ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಿಸಿರುವುದು ಇಲ್ಲಿ ವಾಹನ ದಟ್ಟಣೆಯನ್ನು ಸಾಕಷ್ಟು ಕಡಿಮೆ ಮಾಡಿದೆ. ಇಲ್ಲಿ ದಿನನಿತ್ಯ ಅಡ್ಡಾಡುವವರು ಇಂದು ಹೇಳುವುದು ಒಂದೇ ಮಾತು, ಥ್ಯಾಂಕ್ಸ್ ಟು ಬಂದ್.

ಪೆಟ್ರೋಲ್ ತುಂಬಿಸಿಕೊಳ್ಳಲು ಜನರ ಪರದಾಟ

ಪೆಟ್ರೋಲ್ ತುಂಬಿಸಿಕೊಳ್ಳಲು ಜನರ ಪರದಾಟ

'ಭಾರತ ಬಂದ್ ಪ್ರಯುಕ್ತ ಇಂದು ಸಂಜೆಯವರೆಗೆ ಪೆಟ್ರೋಲ್, ಡೀಸೆಲ್ ಇರುವುದಿಲ್ಲ' ಎಂದು ರಿಂಗ್ ರಸ್ತೆಯ ಅನೇಕ ಪೆಟ್ರೋಲ್ ಬಂಕ್‌ಗಳು ಬೋರ್ಡ್ ಹಾಕಿಕೊಂಡು ಕೂತಿವೆ. ಪೆಟ್ರೋಲ್ ಸಿಗದೆ ಪರದಾಡುತ್ತಿದ್ದ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುತ್ತಿದ್ದ ಹಿರಿಯರೊಬ್ಬರು, "ಅಲ್ರೀ ಪೆಟ್ರೋಲ್ ಇರುವುದಿಲ್ಲ ಅಂತ ಯಾಕೆ ಬರೀತಿರಾ, ಕೊಡುವುದಿಲ್ಲ ಅಂತ ಬರೀರಿ" ಎಂದು ಜನರಿಗೆ ಪೆಟ್ರೋಲ್ ಇಲ್ಲ ಇಲ್ಲ ಎಂದು ಹೇಳಿ ಸುಸ್ತಾಗಿದ್ದ ಪೆಟ್ರೋಲ್ ಬಂಕ್ ಹುಡುಗರ ಜೊತೆ ಜಗಳವಾಡುತ್ತಿದ್ದರು. ಪುಣ್ಯಕ್ಕೆ ಕೆಲವೊಂದು ಬಂಕ್‌ಗಳು ದ್ವಿಚಕ್ರ, ನಾಲ್ಕುಚಕ್ರ ವಾಹನಗಳು ಹೊಟ್ಟೆಯನ್ನು ತುಂಬಿಸುತ್ತಿದ್ದವು.

ಹಾಫ್ ಶಟರ್ ಡೌನ್, ಹಾಫ್ ಶಟರ್ ಓಪನ್

ಹಾಫ್ ಶಟರ್ ಡೌನ್, ಹಾಫ್ ಶಟರ್ ಓಪನ್

ಮೈಸೂರು ರೋಡ್ ರಿಂಗ್ ರಸ್ತೆ, ನಾಗರಭಾವಿ, ಆವಲಹಳ್ಳಿ, ಹನುಮಂತನಗರ, ಎನ್ಆರ್ ಕಾಲೋನಿ ಮುಂತಾದ ಪ್ರದೇಶಗಳಲ್ಲಿ ಶೇ.90ರಷ್ಟು ಅಂಗಡಿಮುಂಗಟ್ಟುಗಳು ಬಂದ್‌ನಲ್ಲಿ ಭಾಗವಹಿಸಿದ್ದರೂ, ಔಷಧಿ ಅಂಗಡಿ, ಎಟಿಎಂ, ಕ್ಷೌರಿಕರ ಅಂಗಡಿ ಹೊರತುಪಡಿಸಿದರೆ ಶೇ.8ರಷ್ಟು ಅಂಗಡಿಗಳು, ಅಯ್ಯೋ ಯಾರೇನ್ ಮಾಡ್ತಾರೆ ಎಂಬ ಮನೋಭಾವದಿಂದ ಎಂದಿನ ವ್ಯಾಪಾರದಲ್ಲಿ ಮುಳುಗಿವೆ. ಇನ್ನು ಶೇ.2ರಷ್ಟು ಅಂಗಡಿಗಳು ಎಲ್ಲಿ ಕಲ್ಲು ಬಿದ್ದಾವೋ ಎಂಬ ಹೆದರಿಕೆಯಿಂದ ಅರ್ಧ ಶಟರ್ ಎಳೆದು, ಅರ್ಧ ಶಟರ್ ತೆರೆದುಕೊಂಡು, ಒಂದು ಕಣ್ಣನ್ನು ಕಲ್ಲು ಎಸೆಯುವವರ ಮೇಲೆ ನೆಟ್ಟುಕೊಂಡೇ ವ್ಯಾಪಾರ ನಡೆಸುತ್ತಿದ್ದವು.

ಶ್ರೀನಗರದ ಬೀದಿಯಲ್ಲಿ ಬ್ಯಾಡ್ಮಿಂಟನ್

ಶ್ರೀನಗರದ ಬೀದಿಯಲ್ಲಿ ಬ್ಯಾಡ್ಮಿಂಟನ್

ಸೈನಾ ನೆಹ್ವಾಲ್ ಆಟದಿಂದ ಉತ್ತೇಜಿತರಾಗಿರುವ ಹುಡುಗರನೇಕರು, ಕಾಲೇಜು ಇಲ್ಲದ್ದರಿಂದ ರಸ್ತೆ ಮಧ್ಯದಲ್ಲಿಯೇ ಬ್ಯಾಡ್ಮಿಂಟನ್ ಆಡುವಲ್ಲಿ ನಿರತರಾಗಿದ್ದರು. ಇನ್ನು ಧೋನಿ, ಸಚಿನ್, ವಿರಾಟ್ ಎಂಬ ಹೆಸರುಗಳನ್ನು ಕನಸಿನಲ್ಲಿಯೂ ಕನವರಿಸುವ ಪಡ್ಡೆಗಳು ರಸ್ತೆ ಮಧ್ಯದಲ್ಲಿ ವಿಕೆಟ್ ನೆಟ್ಟು ಕ್ರಿಕೆಟ್ ಆಡುತ್ತ ಕಾಲಕಳೆಯುತ್ತಿದ್ದರು. ಆಗಾಗ ಬರುವ ಮೊಪೆಡ್‌ಗಳು, ಕಾರುಗಳು ಬಂದಾಗ ಬದಿಗೆ ಸರಿದು ಮತ್ತೆ ಅದೇ ಆಟ ಶುರು.

ತಣ್ಣಗೆ ಕುಳಿತ ಬೆಂಗಳೂರಿನ ನಾಗರಿಕರು

ತಣ್ಣಗೆ ಕುಳಿತ ಬೆಂಗಳೂರಿನ ನಾಗರಿಕರು

ಅಚ್ಚರಿಯ ಸಂಗತಿಯೆಂದರೆ, ಬೆಂಗಳೂರಿನ ನಾಗರಿಕರು ಬಂದ್‌ನಿಂದಾಗಿ ದಕ್ಕಿರುವ ರಜಾದಿನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆಯೆ ಹೊರತು, ಯಾವುದೇ ಬಡಾವಣೆಯಲ್ಲಿ ಯಾರು ಕೂಡ ತಮ್ಮ ತೊಂದರೆಯನ್ನು ತೋಡಿಕೊಳ್ಳಲು ಬೀದಿಗಿಳಿದಿಲ್ಲ, ಪ್ರತಿಭಟನೆ ಮಾಡುತ್ತಿಲ್ಲ. ಡೀಸೆಲ್ ಬೆಲೆ ಏರಿಸಿದರೆ, ಎಲ್ಪಿಜಿ ಸಿಲಿಂಡರನ್ನು 6ಕ್ಕೇ ನಿಗದಿಪಡಿಸಿದರೆ ಹೋರಾಟ ಮಾಡಲು ಕನ್ನಡಪರ ಸಂಘಟನೆಗಳಿವೆ, ರಾಜಕಾರಣಿಗಳಿದ್ದಾರೆ ಎಂದು ಸಾರ್ವಜನಿಕರು ತಣ್ಣಗೆ ಮನೆಯಲ್ಲಿ ಟಿವಿಯಲ್ಲಿ ಚಲನಚಿತ್ರ ನೋಡುತ್ತ ತಣ್ಣಗೆ ಕುಳಿತುಬಿಟ್ಟಿದ್ದಾರೆ. ಜನರೇಕೆ ಬೀದಿಗಳಿದು ಹೋರಾಟ ಮಾಡಬಾರದು?


ಈ ಬಂದ್‌ಗಳೆಲ್ಲ ಬೇಕಾ? ಬಂದ್‌ಗಳಿಂದ ಕೇಂದ್ರ ಸರಕಾರ ಬಗ್ಗುವುದಾ? ಇಂಥ ಬಂದ್‌ಗಳಿಂದ ಯಾರಿಗೆ ಎಷ್ಟು ಲಾಭ, ಎಷ್ಟು ನಷ್ಟ? ಬಂದ್‌ನಿಂದ ದೇಶದ ಸಾರ್ವಜನಿಕ ಆಸ್ತಿಪಾಸ್ತಿಗೆ ಎಷ್ಟು ನಷ್ಟವಾಗಿದೆ ಇತ್ಯಾದಿ ಪ್ರಶ್ನೆಗಳಿಗೆ ಎಂದೂ ಉತ್ತರ ದಕ್ಕುವುದಿಲ್ಲ. ರಾಜಕೀಯ ಉದ್ದೇಶ ಇಟ್ಟುಕೊಂಡು ಬಂದ್ ಕರೆ ನೀಡಿರುವ ಪಕ್ಷಗಳಿಗೆ ಈ ಪ್ರಶ್ನೆಗಳ ಉತ್ತರಗಳೂ ಬೇಕಾಗಿರುವುದಿಲ್ಲ. ಒಟ್ಟಿನಲ್ಲಿ ತಮ್ಮ ಕಾಳು ಬೇಯಬೇಕು ಅಷ್ಟೆ.

ಇದೆಲ್ಲ ಒಂದು ರೀತಿ ಬಂದ್ ಆಟವಾದರೆ, ಬಂದ್‌ನಿಂದಾಗಿ ಇಂದು ರಜಾ ಸಿಗತ್ತಾ? ಕನಿಷ್ಠಪಕ್ಷ ಬಸ್ಸುಗಳಾದರೂ ಓಡಾಡುತ್ತಿವೆಯಾ? ಬಸ್ಸಿಲ್ಲದಿದ್ದರೇನಂತೆ ಥಿಯೇಟರುಗಳಾದರೂ ಓಪನ್ ಇರುತ್ತವಾ? ನಮಗಿಲ್ಲದಿದ್ದರೆ ಹೋಗಲಿ ಮಕ್ಕಳಿಗಾದರೂ ಶಾಲಾ ಕಾಲೇಜುಗಳು ರಜಾ ಕೊಟ್ಟಿರುತ್ತವಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿರುತ್ತಾರೆ. ಇನ್ನು ಕೆಲ ವರ್ಗದ ಜನತೆಗೆ ಬಂದ್ ಕರೆದಿದ್ದಾರಾ, ಯಾಕೆ ಕರೆದಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳುವುದೂ ಇಲ್ಲ, ಉತ್ತರಗಳನ್ನು ಕಂಡುಕೊಳ್ಳುವುದೂ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+