ಹಿರಿಯ ಪೋಲೀಸ್ ಅಧಿಕಾರಿಗಳು ಜೆಡಿಎಸ್ ತೆಕ್ಕೆಗೆ

ಹಿರಿಯ ಮೂವರು ನಿವೃತ್ತ ಪೋಲೀಸ್ ಅಧಿಕಾರಿಗಳು ಜೆಡಿಎಸ್ ಪಕ್ಷವನ್ನು ಸೇರಲಿದ್ದಾರೆ. ಕ್ರಿಮಿನಲ್ ಗಳಿಗೆ ಸಿಂಹಸ್ವಪ್ನ ಮತ್ತು ದಕ್ಷ ಪೋಲೀಸ್ ಅಧಿಕಾರಿಗಳಾದ ಅಶೋಕ್ ಕುಮಾರ್, ಸುಭಾಶ್ ಭರಣಿ ಮತ್ತು ಸೌದಾಗರ್ ಈ ಮೂವರು ಪೋಲೀಸ್ ಅಧಿಕಾರಿಗಳು ಜೆಡಿಎಸ್ ಸೇರಲಿದ್ದಾರೆ.
ಶನಿವಾರ (ಸೆ 15) ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬರುವ ಭಾನುವಾರ (ಸೆ 23) ನಗರದ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿಗಳು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ನಮ್ಮ ಪಕ್ಷ ತೊರೆದು ಯಾರೂ ಬೇರೆ ಪಕ್ಷಕ್ಕೆ ಸೇರುತ್ತಿಲ್ಲ. ಇದರ ಬಗ್ಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುತ್ತಿದ್ದೇನೆ. ನಮ್ಮ ಪಕ್ಷದ ಸಮಾವೇಶದಲ್ಲಿ ಅವರೆಲ್ಲರೂ ಭಾಗವಹಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಮಾಡಿರುವ ಕೆಲಸಗಳೆಲ್ಲಾ ನಮಗೆ ತಿಳಿದಿದೆ. ಅವರಿಂದ ನಮ್ಮ ಪಕ್ಷ ಕಲಿಯಬೇಕಾಗಿರುವುದು ಏನೂ ಇಲ್ಲ. ಮಹಿಳೆಗೆ ಮರ್ಯಾದೆ ಕೊಡುವುದನ್ನು ಆಯನೂರು ಕಲಿಯಲಿ.
ರಾಜ್ಯದ ಜನರ ಹಿತದೃಷ್ಟಿ ನಮಗೆ ಮುಖ್ಯ. ಅಧಿಕಾರಕ್ಕಾಗಿ ಹೊಗಳು ಭಟ್ಟರ ಕೆಲಸ ಮಾಡುವ ಜಾಯಮಾನ ನಮ್ಮದಲ್ಲ. ಅಧಿಕಾರಕ್ಕಾಗಿ ಆಯನೂರು ಏನು ಮಾಡಿದರು ಎನ್ನುವುದು ನಮಗೆ ತಿಳಿದಿದೆ ಸುಮ್ಮನೆ ನಮ್ಮನ್ನು ಕೆಣಕದಿರಿ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಬಿಜೆಪಿ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪಾದಧೂಳಿಗೂ ಸಮರಲ್ಲ ಎಂದು ಜೆಡಿಸ್ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಕಿಡಿಕಾರಿದ್ದರು.












Click it and Unblock the Notifications