ರೈಲ್ವೆ ಹಳಿಗೆ ಇನ್ನೂ ಕಗ್ಗಂಟಾಗೇ ಉಳಿದ ಟಿಪ್ಪು ಶಸ್ತ್ರಾಗಾರ

ಟಿಪ್ಪು ಸುಲ್ತಾನ್ ಶಸ್ತ್ರಾಗಾರ ಸ್ಥಳಾಂತರಕ್ಕೆ ಅಮೆರಿಕದ ಕಂಪನಿಯೊಂದು ಸಿದ್ಧವಾಗಿವೆ. ರಾಜ್ಯ ಪುರಾತತ್ವ ಶಾಸ್ತ್ರ ಇಲಾಖೆಯೂ ಇದಕ್ಕೆ ಅನುಮೋದನೆ ನೀಡಿದೆ. ಆದರೆ ಭಾರತೀಯ ಪುರಾತತ್ವ ಶಾಸ್ತ್ರ ಇಲಾಖೆಯು (Archaeological Survey of India- ASI) ಅಂತಿಮ ಅನುಮೋದನೆ ನೀಡಲು ಹಿಂದೆಮುಂದೆ ನೋಡುತ್ತಿದೆ.
ಪ್ರಸ್ತಾವಿತ ರೈಲ್ವೆ ಯೋಜನೆಗೆ ಅಡ್ಡಬಂದಿರುವ ಟಿಪ್ಪು ಶಸ್ತ್ರಾಗಾರವು ಶ್ರೀರಂಗಪಟ್ಟಣದ ಬಳಿ ಇದೆ. ಇದನ್ನು ಈಗಿರುವ ಜಾಗದಿಂದ ಸುಮಾರು 150 ಮೀಟರ್ ದೂರಕ್ಕೆ ಸ್ಥಳಾಂತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಸ್ಥಳಾಂತರಕ್ಕೆ 10 ಕೋಟಿ ರೂ. ವೆಚ್ಚ ತಗುಲಲಿದೆ.
ದೇಶದಲ್ಲೇ ಮೊದಲ ಬಾರಿಗೆ ಇಂತಹ ಬೃಹತ್ ನಿರ್ಮಾಣವನ್ನು ಸ್ಥಳಾಂತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಸುಣ್ಣ ಮತ್ತು ಇಟ್ಟಿಗೆಗಳಿಂದ ನಿರ್ಮಣಾವಾಗಿರುವ ಶತಮಾನಗಳಷ್ಟು ಹಳೆಯದಾದ ಇಡೀ ಕಟ್ಟಡವನ್ನು ಏಕವಾಗಿ ಸ್ಥಳಾಂತರಿಸುತ್ತಿರುವುದಂತೂ ಇದೇ ಮೊದಲು.
ಈ ಶಸ್ತ್ರಾಗಾರ ಸ್ಥಳಾಂತರಕ್ಕೆ ಕಗ್ಗಂಟಾಗುವ ಮತ್ತೊಂದು ವಿಚಾರವೆಂದರೆ ಈ ಬೃಹತ್ ಕಟ್ಟಡದ ಮುಕ್ಕಾಲು ಭಾಗ ಭೂಮಿಯೊಳಗೇ ಇದೆ. 150 ಮೀಟರ್ ಅಗಲ 1.5 ಮೀಟರ್ ಎತ್ತರದ ಗೋಡೆಗಳುಳ್ಳ ಈ ಕಟ್ಟಡದ ತೂಕ ಬರೋಬ್ಬರಿ 800 ಟನ್. ಟಿಪ್ಪು ಸುಲ್ತಾನ್ ಶಸ್ತ್ರಾಗಾರ ಸ್ಥಳಾಂತರ ವಿಚಾರವು ಸೂಕ್ಷ್ಮವಿಚಾರವಾಗಿದ್ದು, ಜನರ ಭಾವನೆಗಳಿಗೆ ಮನ್ನಣೆ ನೀಡಬೇಕಾಗಿರುವುದೂ ಪ್ರಧಾನವಾಗಲಿದೆ.
ಆದಾಗ್ಯೂ ಭಾರತೀಯ ಪುರಾತತ್ವ ಶಾಸ್ತ್ರ ಇಲಾಖೆ ಅಂತಿಮ ಅನುಮೋದನೆ ನೀಡುತ್ತಿದ್ದಂತೆ ಸ್ಥಳಾಂತರ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ಮಿತ್ತಲ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಮತ್ತು ಈ ಕಾರ್ಯದಲ್ಲಿ ನೆರವಾಗಲು ಅಮೆರಿಕದ ಪ್ರೈಮ್ ಮೂವರ್ಸ್ ಎಂಬ ಸಂಸ್ಥೆ ಈಗಾಗಲೇ ಸಿದ್ಧವಾಗಿದೆ.












Click it and Unblock the Notifications