ಜೆಡಿಯು, ಶಿವಸೇನೆ ಟಾಂಗ್; ಮೋದಿಗೆ ಭಾರಿ ಹೊಡೆತ

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಜೆಡಿಯು ಘೋಷಿಸಿದೆ. ಬಿಹಾರದಲ್ಲಿ ಬಿಜೆಪಿ ಜತೆ 8 ವರ್ಷಗಳಿಂದ ಮೈತ್ರಿ ಹೊಂದಿರುವ ಜೆಡಿಯು ಮೋದಿಗೆ ಸರಿಯಾದ ಟಾಂಗ್ ಕೊಟ್ಟಿದೆ ಎಂದು ವಿಶ್ಲೇಷಿಸಲಾಗಿದೆ.
ಗುಜರಾತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ರಾಷ್ಟ್ರೀಯ ಘಟಕದ ಅಧ್ಯಕ್ಷ ಶರದ್ ಯಾದವ್ ಘೋಷಿಸಿದ್ದಾರೆ.
ಜೆಡಿಯು ಗುಜರಾತ್‌ನಲ್ಲಿ ಕನಿಷ್ಠ ನೂರು ಸ್ಥಾನಗಳಲ್ಲಿ ಸ್ಫರ್ಧಿಸಲಿದೆ. ಗುಜರಾತ್‌ನಲ್ಲಿ ಬಿಜೆಪಿ ಜತೆ ಎಂದಿಗೂ ತಮ್ಮ ಪಕ್ಷ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಆದರೆ ಗುಜರಾತ್ ಹೊರತುಪಡಿಸಿ ಉಳಿದ ಕಡೆ ಬಿಜೆಪಿ ಜತೆ ಮೈತ್ರಿಯನ್ನು ಮುಂದುವರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಶರದ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಶಿವಸೇನೆಯದೂ ಭಿನ್ನರಾಗ: ಈ ಮಧ್ಯೆ, ಬಿಜೆಪಿ ಆಳ್ವಿಕೆಯ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ತಾನೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಶಿವಸೇನೆ ಹೇಳಿದೆ. ಇದು ಶಿವಸೇನೆ-ಬಿಜೆಪಿ ನಡುವಣ ಸುದೀರ್ಘ ಮೈತ್ರಿಯಲ್ಲಿ ಒಡಕು ಮೂಡುವ ಸ್ಪಷ್ಟ ಸೂಚನೆಯಾಗಿದೆ.
ಶಿವಸೇನೆ ವಕ್ತಾರ ಸಂಜಯ್ ರಾವುತ್ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ. ಇದರ ತಯಾರಿ ನಡೆಸಲಾಗುತ್ತಿದೆ ಎಂದಿದ್ದಾರೆ. ಶಿವಸೇನೆ ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ.
ಸುಷ್ಮಾ ಸ್ವರಾಜ್ ಪ್ರಧಾನಿ ಅಭ್ಯರ್ಥಿ ಎಂದು ಶಿವಸೇನಾ ಪ್ರಮುಖ ಬಾಳ್ ಠಾಕ್ರೆ ಹೇಳಿಕೆ ನೀಡಿರುವ ಬೆನ್ನಲ್ಲೇ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸುವ ಘೋಷಣೆ ಮಾಡಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications