ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರಿಯನ್ ಸಾವಿನಿಂದ ಅಮೂಲ್ ಬೇಬಿ ತಬ್ಬಲಿ

By Srinath
|
Google Oneindia Kannada News

ಬೆಂಗಳೂರು, ಸೆ. 10: 90 ವರ್ಷದ ಡಾ. ವರ್ಗೀಸ್ ಕುರಿಯನ್ ಅವರು 2012ರ ಸೆಪ್ಟೆಂಬರಿನಲ್ಲಿ ಮೃತಪಟ್ಟಾಗ ಅವರ ಸೇವೆಯನ್ನು ಸ್ಮರಿಸುತ್ತಾ ಸಿದ್ಧಪಡಿಸಲಾದ ಲೇಖನ ಇಲ್ಲಿದೆ.

ಕೆಳಗಿನ ಚಿತ್ರವನ್ನು ಮತ್ತೊಮ್ಮೆ ನೋಡಿ. ಚಿತ್ರವೇ ಎಲ್ಲವನ್ನೂ ಹೇಳುತ್ತದೆ. ಮತ್ತು ಅನೇಕ ವರ್ಷಗಳಿಂದ ಎಲ್ಲವನ್ನೂ ಹೇಳುತ್ತಲೇ ಬಂದಿದೆ. ಜೀವಮಾನದಲ್ಲೆಂದೂ ಒಂದು ತೊಟ್ಟು ಹಾಲನ್ನು ಕುಡಿಯದ ಡಾ. ವರ್ಗಿಸ್ ಕುರಿಯನ್ ಎಂಬ ಶ್ವೇತಕ್ರಾಂತಿಯ ಹರಿಕಾರನೇ ಈ ಅಮೂಲ್ ಬೇಬಿಯ ಅಪ್ಪ-ಅಮ್ಮ. ಮತ್ತು ನಿನ್ನೆ ಡಾ. ಕುರಿಯನ್ ಅವರು ಸ್ವರ್ಗಸ್ಥರಾದ ಬಳಿಕ ಅಮೂಲ್ ಬೇಬಿ ತಬ್ಬಲಿಯಾಗಿದೆ.

achali-bachali-delicious-kurien-amul-baby-orphaned

ಡಾ. ಕುರಿಯನ್ ಅವರ ಬಗ್ಗೆ ಹೇಳುವ ಮುನ್ನ ಈ ಅಮೂಲ್ ಬೇಬಿ ಬಗ್ಗೆ ಒಂದಷ್ಟು...ನಾಲ್ಕಾರು ದಶಕಗಳ ಹಿಂದೆ ಜನ್ಮತಾಳಿದ ಅಮೂಲ್ ಬೇಬಿ ಕಾರ್ಟೂನ್ ಚಿತ್ರ ಸರಣಿ ಇಂದಿಗೂ ಮುಂದುವರಿದಿದೆ. ದೇಶದ ನಾನಾ ಆಗುಹೋಗುಗಳ ಬಗ್ಗೆ ಗುರುತಿಸಿಕೊಳ್ಳುತ್ತಾ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡ ಅಮೂಲ್ ಬೇಬಿ ಚಿತ್ರಗಳ ಬಗ್ಗೆ (Vipul Rathod) ಯಾರಿಗೇ ಆಗಲಿ ತುಂಬು ಅಭಿಮಾನ ಮೂಡದಿರದು. ಅಮೂಲ್ ಬೇಬಿ ಬಗ್ಗೆ ತಿಳಿಯಬೇಕೆಂದರೆ ಅದಕ್ಕಿಂತ ಹೆಚ್ಚಾಗಿ ಕುರಿಯನ್ ರ ಬಗ್ಗೆ ತಿಳಿಯುವ ಆಸಕ್ತಿಯಿದ್ದರೆ google imagesಗೆ ಹೋಗಿ amul ಅಂತ ಜಾಲಾಡಿ, ಅಮೂಲ್ ಬೇಬಿಯ ತುಂಟಾಟ ನಿಮ್ಮ ಕಣ್ಣಮುಂದೆ ಹರಡಿಕೊಳ್ಳುತ್ತದೆ.

ಅಮೂಲ್ ಬೇಬಿ ಕಾರ್ಟೂನ್ ಚಿತ್ರಗಳನ್ನು ನೋಡುತ್ತಾ ಹೋದರೆ ಭಾರತ ಹೇಗೆಲ್ಲ ಪ್ರಗತಿಯತ್ತ ದಾಪುಹಾಕಿದೆ ಎಂಬ ಚಿತ್ರಣ ಮೂಡಿಬರುತ್ತದೆ. ನಾನಾ ಕಾಲಘಟ್ಟಗಳ ಸಂಕ್ಷಿಪ್ತ ನೋಟವನ್ನು ಅಮೂಲ್ ಬೇಬಿ ನೀಡುತ್ತಾ ಸಾಗಿದೆ. ಸ್ವಾತಂತ್ರ್ಯಾನಂತರದ ಭಾರತವನ್ನು ಇದು ಪ್ರತಿಬಿಂಬಿಸುತ್ತದೆ ಅಂದರೆ ಅತಿಶಯೋಕ್ತಿಯಲ್ಲ. 80 ದಶಕದಲ್ಲಿ ಸಿದ್ಧಾರ್ಥ ಬಸು ಅವರ ಕ್ವಿಜ್ ಪ್ರೋಗ್ರಾಂನಿಂದಾಗಿ ಅಮೂಲ್ ಬೇಬಿ ಚಿತ್ರ ದಕ್ಷಿಣ ಭಾರತದಲ್ಲಿಯೂ ಮನೆಮಾತಾಯಿತು.

ಇನ್ನು, ಅಮೂಲ್ ಬೇಬಿಯ ಜನಕ ಡಾ. ವರ್ಗಿಸ್ ಕುರಿಯನ್ ಅವರ ಬಗ್ಗೆ ಹೇಳಲು ಹೊರಟರೆ ಅದೂ ಅಷ್ಟೆ ಗ್ರಾಮೀಣ ಭಾರತದ ಇತಿಹಾಸವನ್ನು ತೆರೆದಿಟ್ಟಂತೆ. ಕೇರಳದಲ್ಲಿ ಹುಟ್ಟಿ ಉದ್ಯೋಗವನ್ನರಸಿ ಗುಜರಾತಿನ ಕುಗ್ರಾಮದಲ್ಲಿ ತಳವೂರಿದ ಕುರಿಯನ್ ದೇಶದ ದಿಕ್ಕನ್ನೇ ಬದಲಿಸಿದವರು.

ಕರ್ನಾಟಕದಲ್ಲಿ ಅದರಲ್ಲೂ ಕೋಲಾರ ಮತ್ತು ತುಮಕೂರಿನಲ್ಲಿ ಹಾಕು ಹಾಕುವ ಪ್ರತಿ ರೈತನ ಮನೆಯಲ್ಲೂ ಕುರಿಯನ್ ಅವರ ಚಿತ್ರವಿದೆ. ಮಂಡ್ಯದ ರೈತನ ಮನೆಯಲ್ಲಿ ಸರ್ ಎಂ ವಿಶ್ವೇರಯ್ಯನವರ ಫೋಟೋ ಇದ್ದಂತೆ! ಬರಗೆಟ್ಟ ಕೋಲಾರ, ತುಮಕೂರು ಭಾಗದ ರೈತನಿಗೆ ಅಮೃತವುಣಿಸಿದ ಮಹಾನ್ ಚೇತನ ಕುರಿಯನ್.

ನಿನ್ನೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಪುತ್ರ ರೇವಣ್ಣ ಡಾ. ಕುರಿಯನ್ ಅವರ ನಿಧನಕ್ಕೆ ಮಮ್ಮಲ ಮರುಗಿದರೆಂದರೆ ಅದು ಕುರಿಯನ್ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆ ಕಾಣವಾಗುತ್ತದೆ. ಕೋರಮಂಗಲದಲ್ಲಿ NDDB ಘಟಕ ಸ್ಥಾಪನೆ ಮತ್ತು ಅದಕ್ಕೆ ತಮ್ಮ ಪುತ್ರ ರೇವಣ್ಣ ಅವರನ್ನು ಸಂಸ್ಥಾಪಿಸಲು ಅಂದಿನ ಪ್ರಧಾನಿ ದೇವೇಗೌಡರಿಗೆ ಇದೇ ಕುರಿಯನ್ ಕಾರಣವಾಗುತ್ತಾರೆ. NDDB ಮತ್ತು KMF ಕೆಚ್ಚಲಿಗೆ ಕೊಡಲಿ ಹಾಕಿದ ಮಹಾಮಹಿಮರ ಮಧ್ಯೆಯೂ ಅದು ಜೀವಂತವಾಗಿದೆ ಅಂದರೆ ಕುರಿಯನ್ ಅವರು ತಳೆದಿದ್ದ ಕಠಿಣ ನಿಲುವುಗಳೇ ಕಾರಣ.

ಹಠವಾದಿ ಕುರಿಯನ್ ಅವರ ಮುಂದೆ ಯಾವುದೇ ರಾಜಕೀಯ ಆಟವೂ ನಡೆಯುತ್ತಿರಲಿಲ್ಲ. ಆದರೂ ಎಚ್ ಡಿ ದೇವೇಗೌಡರ ಹಾಸನ ರಾಜಕೀಯ ಜೀವನಕ್ಕೆ ಸ್ಪಷ್ಟ ದಿಕ್ಕನ್ನು ಕಲ್ಪಿಸಿದ್ದು ಇದೇ NDDB ಮತ್ತು KMF.

ಪದ್ಮವಿಭೂಷಣ, ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಕುರಿಯನ್ ಅವರ ಚರಿತ್ರೆಯ ಪುಟಗಳನ್ನು ಓದುತ್ತಾ ಹೋದರೆ ಗ್ರಾಮಾಂತರ ಭಾರತ ಹೈನೋದ್ಯಮದ ಮೂಲಕ ಹೇಗೆಲ್ಲ ಪ್ರಗತಿ ಕಂಡಿತು ಎಂಬುದು ವೇದ್ಯವಾಗುತ್ತದೆ.

ಕುರಿಯನ್ ಅವರು ಇಂತಹ ಚರಿತ್ರೆಯ ನಿರ್ಮಿಸುವ ಹೊತ್ತನಲ್ಲಿ ನಾಡಿನಲ್ಲಿ ಎಲ್ಲವೂ ಸುಗಮವಾಗೇನೂ ಇರಲಿಲ್ಲ. ಕೊನೆಗೆ ಅವರನ್ನೇ ಪದಚ್ಯುತಗೊಳಿಸುವ ಕುತಂತ್ರವೂ ಯಶಸ್ವಿಯಾಗಿ ನೆರವೇರಿತು. ಸಹಕಾರ ತತ್ವದಲ್ಲಿ ಅಪಾರ ನಂಬಿಕೆ ಹೊಂದಿದ್ದ ಕುರಿಯನ್ ಅವರನ್ನು ಕೇಂದ್ರದ ಕಾಂಗ್ರೆಸ್ ಸರಕಾರ ಒಬ್ಬ ಐಎಎಸ್ ಮೂಲಕ ಬೀಳಿಸಿದಾಗಲೇ ಕುರಿಯನ್ ಹತಾಶರಾಗಿದ್ದರು.

ಸಂಸ್ಥೆ ಮತ್ತು ವ್ಯವಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದ ಕುರಿಯನ್ ಅವರು ರೈತರ ಕೈಗೆ ಮೀನನ್ನು ಕೊಡುವ ಬದಲು ಮೀನನ್ನು ಹಿಡಿಯುವ ಕೆಲಸವನ್ನು ಕಲಿಸುತ್ತಿದ್ದರು. ಹಾಗಾಗಿಯೇ ಶ್ವೇತ ಕ್ರಾಂತಿಯ ಮೂಲಕ ಭಾರತ ಇಂದು ಇಡೀ ವಿಶ್ವಕ್ಕೇ ಸಡ್ಡು ಹೊಡೆಯುವ ಮಟ್ಟಕ್ಕೆ ಭಾರತ ಬೆಳೆದಿದೆ.

90 ವರ್ಷದ ಕುರಿಯನ್ ಅವರ ಪಾರ್ಥಿವ ಶರೀರಕ್ಕೆ 'ಹಾಲು-ತುಪ್ಪದ ಶಾಸ್ತ್ರ' ಮುಗಿದಿದೆ. ಆದರೆ ಅವರು ಕಟ್ಟಿ ಬೆಳೆಸಿದ ಸಹಕಾರ ಸಂಸ್ಥೆಯಲ್ಲಿ ರಾಜಕೀಯ ಹುಳಿ ಹಿಂಡದೆ ಅದನ್ನು ಮಹತ್ತರವಾದ ಮಜಲಿಗೆ ಕೊಂಡೊಯ್ಯುವ ಜವಾಬ್ದಾರಿಯು ಪ್ರತಿಯೊಬ್ಬ ಸಹಕಾರಿಯ ಹೆಗಲ ಮೇಲಿದೆ.

English summary
With the sad demise of the architect of 'white revolution', Verghese Kurien, Achali Bachali Delicious Kurien Amul Baby is orphaned. The saga of Amul Baby vis a vis Verghese Kurien.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X