ಭಾರತ-ಪಾಕ್ ವೀಸಾ ನಿಯಮ ಸಡಿಲಿಕೆ ಏನು ಲಾಭ?

Hinda Rabbani and SM Krishna
ಇಸ್ಲಾಮಾಬಾದ್, ಸೆ.9: ಭಾರತ ಹಾಗೂ ಪಾಕ್ ನಡುವೆ ಬಹುನಿರೀಕ್ಷಿತ ಉದಾರೀಕೃತ ವೀಸಾ ಒಪ್ಪಂದಕ್ಕೆ ಶನಿವಾರ(ಸೆ.8) ಅಂಕಿತ ಹಾಕಲಾಗಿದೆ. ಪಾಕ್ ಮಾಧ್ಯಮಗಳು ಭಾರತದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರ ಮೂರು ದಿನದ ಭೇಟಿಯನ್ನು ಹಾಡಿ ಹೊಗಳಿದೆ.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ಪಾಕ್ ಗೃಹ ಸಚಿವ ರಹ್ಮಾನ್ ಮಲಿಕ್ ಇಸ್ಲಾಮಾಬಾದ್‌ನಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೊಸ ಹಾದಿ ತೋರಿದ್ದಾರೆ ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆಗಳು ವರದಿ ಮಾಡಿದೆ. ಆದರೆ, ಪ್ರಭಾವಿ ಪತ್ರಿಕೆ ಡಾನ್ ಮಾತ್ರ ಉಭಯ ದೇಶಗಳು ಮೂಲ ಸಮಸ್ಯೆಗಳತ್ತ ಗಮನ ಹರಿಸದೆ ಹಿಂಜರಿಕೆಯಿಂದ ಭೇಟಿ, ಚರ್ಚೆ ಮುಗಿಸಿದೆ ಎಂದು ಬರೆದಿದೆ.

ವೀಸಾ ನಿಯಮ ಸಡಿಲಿಕೆ ಏನು ಲಾಭ?: ಹಲವು ನಿರ್ಬಂಧಗಳಿಂದ ಕೂಡಿದ 38 ವರ್ಷಗಳಷ್ಟು ಹಳೆಯ ವೀಸಾ ಒಪ್ಪಂದವನ್ನು ತೆರವುಗೊಳಿಸಲಿರುವ ಈ ನೂತನ ಒಡಂಬಡಿಕೆಯು, ಉಭಯ ದೇಶಗಳ ಬಾಂಧವ್ಯದ ಬೆಳವಣಿಗೆಗೆ ಹೊಸ ಮೈಲುಗಲ್ಲಾಗುವ ನಿರೀಕ್ಷೆಯಿದೆ.

* ಇನ್ನು ಮುಂದೆ ಅರ್ಜಿ ಸಲ್ಲಿಸಿದ 45 ದಿನಗಳೊಳಗೆ ವೀಸಾವನ್ನು ನೀಡಬೇಕಾಗುತ್ತದೆ. ನೂತನ ಒಪ್ಪಂದದಡಿ ಓರ್ವ ವ್ಯಕ್ತಿಯು ಗರಿಷ್ಠ ಐದು ಸ್ಥಳಗಳಿಗೆ ಭೇಟಿ ನೀಡ ಬಹುದಾಗಿದೆ. ಹಳೆಯ ವೀಸಾ ನೀತಿಯಲ್ಲಿ ಓರ್ವ ವ್ಯಕ್ತಿಯು ಮೂರು ಸ್ಥಳಗಳನ್ನು ಮಾತ್ರ ಸಂದರ್ಶಿಸಬಹುದಾಗಿತ್ತು.

* 65ವರ್ಷಕ್ಕಿಂತ ಮೇಲ್ಪಟ್ಟವರು, 12ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಹಾಗೂ ಪ್ರಮುಖ ಉದ್ಯಮಿಗಳು, ಪೊಲೀಸರಿಗೆ ತಮ್ಮ ಬಗ್ಗೆ ಮಾಹಿತಿ ನೀಡುವ ಅಗತ್ಯವಿರುವುದಿಲ್ಲ.

* ಆಗಮನ ವೇಳೆ ವೀಸಾ: 65 ವಯಸ್ಸು ದಾಟಿದವರಿಗೆ ಅಟ್ಟಾರಿ/ವಾಘಾ ಗಡಿ ತಪಾಸಣಾ ಕೇಂದ್ರಗಳಲ್ಲಿ 45 ದಿನಗಳಿಗೆ ವೀಸಾ ನೀಡಲಾಗುವುದು. ಈ ವೀಸಾವನ್ನು ವಿಸ್ತರಿಸುವುದಕ್ಕೆ ಮತ್ತು ಪರಿವರ್ತಿಸುವುದಕ್ಕೆ ಅವಕಾಶ ಇಲ್ಲ.

* ಗುಂಪು ಪ್ರವಾಸಿ ವೀಸಾ: 10ಕ್ಕಿಂತ ಕಡಿಮೆಯಲ್ಲದ ಮತ್ತು 50ಕ್ಕಿಂತ ಅಧಿಕವಲ್ಲದ ಜನರ ಗುಂಪಿಗೆ 30 ದಿನಗಳ ಗುಂಪು ಪ್ರವಾಸಿ ವೀಸಾ ನೀಡಲಾಗುವುದು. ಇದಕ್ಕೆ 45 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

* ಯಾತ್ರಿ ವೀಸಾ : ಏಕಪ್ರವೇಶಕ್ಕೆ 15 ದಿನಗಳ ಅವಧಿಗೆ ಈ ವೀಸಾ ನೀಡಲಾಗುವುದು. ಯಾತ್ರಿ ವೀಸಾ ಅವಧಿಯನ್ನು ವಿಸ್ತರಿಸಲು ಅವಕಾಶವಿಲ್ಲ.

* ವ್ಯಾಪಾರ ವೀಸಾ: ಎರಡು ಬಗೆಯ ವ್ಯಾಪಾರ ವೀಸಾ ಪಡೆಯಲು ಅವಕಾಶವಿದೆ. ಒಂದು ವರ್ಷದ ಅವಧಿಗೆ 5 ಸ್ಥಳಗಳ ಭೇಟಿಗೆ ನಾಲ್ಕು ಪ್ರವೇಶಗಳಿಗೆ ಮೊದಲ ಬಗೆಯ ವೀಸಾದಲ್ಲಿ ಅವಕಾಶವಿದ್ದರೆ ಎರಡನೆ ಬಗೆಯ ವೀಸಾದಲ್ಲಿ ಒಂದು ವರ್ಷದ ಅವಧಿಗೆ 10 ಸ್ಥಳಗಳ ಭೇಟಿಗೆ ಬಹುಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ವೀಸಾದಡಿ ಪೊಲೀಸರ ಮುಂದೆ ಹಾಜರಾಗುವ ಅಗತ್ಯವಿಲ್ಲ.

* ನೋಂದಣಿ: 65 ವರ್ಷ ಮೀರಿದ ಹಿರಿಯ ನಾಗರಿಕರು ಮತ್ತು 12 ವರ್ಷ ಮೀರದ ಮಕ್ಕಳು ಹಾಗೂ ಖ್ಯಾತ ವಾಣಿಜ್ಯೋದ್ಯಮಿಗಳಿಗೆ ಪೊಲೀಸರ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

* ರಾಜತಾಂತ್ರಿಕೇತರ ವೀಸಾ: ಅರ್ಜಿ ಸಲ್ಲಿಸಿದ 45 ದಿನಗಳೊಳಗೆ ರಾಜತಾಂತ್ರಿಕೇತರ ವೀಸಾಗಳನ್ನು ನೀಡಲಾಗುವುದು.

ಮುಂಬೈ ಉಗ್ರರ ದಾಳಿ, ಪಾಕ್ ನಲ್ಲಿರುವ ಭಾರತೀಯ ಖೈದಿಗಳ ಬಿಡುಗಡೆ ಹಾಗೂ ಅಕ್ರಮ ವಲಸೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲು ಕಾಲಾವಕಾಶ ಕಮ್ಮಿ ಇತ್ತು. ಸದ್ಯಕ್ಕೆ ವೀಸಾ ಒಪ್ಪಂದ ಹಾಗೂ ಪರಸ್ಪರ ಸಾಂಸ್ಕೃತಿಕ ಕ್ಷೇತ್ರಗಳ ವಿನಿಮಯಕ್ಕೆ ಉಭಯ ದೇಶಗಳು ಈ ಭೇಟಿ ಸಂದರ್ಭದಲ್ಲಿ ಒತ್ತು ನೀಡಿದ್ದವು ಎಂದು ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

ವೀಸಾ ನಿಯಮ ಸಡಿಲಿಕೆಯಿಂದ ಉಗ್ರರ ನುಸುಳುವಿಕೆ ಭೀತಿ ಬಗ್ಗೆ ಭದ್ರತಾ ಅಧಿಕಾರಿಗಳು ಚಿಂತೆ ವ್ಯಕ್ತಪಡಿಸಿದೆ, ಕಲೆ, ಸಂಸ್ಕೃತಿ, ಮನರಂಜನೆ ಕ್ಷೇತ್ರದ ಜನ ಸಮಾನ್ಯರಿಗೆ ಪಾಕಿಸ್ತಾನಕ್ಕೆ ಹೋಗಿ ಬರುವ ಅವಕಾಶ ಸುಲಭವಾಗಿದ್ದಕ್ಕೆ ಸಂತಸ ಪಟ್ಟಿದ್ದಾರೆ. ಒಟ್ಟಾರೆ, ಎಸ್ ಎಂ ಕೃಷ್ಣ ಅವರ ಭೇಟಿ ಫಲಪ್ರದ ಎಂದು ಜಿಯೋ ನ್ಯೂಸ್ ಕೂಡಾ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+