ಮೆಜೆಸ್ಟಿಕ್ ನಲ್ಲಿ ಸಿಕ್ಕಿಬಿದ್ದ ಖತರ್ನಾಕ್ ಶಂಕಿತ ಉಗ್ರ

ಬಂಧಿತ ಶಂಕಿತ ಉಗ್ರನನ್ನು 22 ವರ್ಷದ ಮಹಮ್ಮದ್ ಅಕ್ರಂ ಅಲಿಯಾಸ್ ಇಮ್ರಾನ್ ಎಂದು ಗುರುತಿಸಲಾಗಿದೆ. ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಕಾರು ಚಾಲಕನಂತೆ ಇದ್ದು ತರಬೇತಿ ಹೊಂದಿದ್ದ. ಮಹಾರಾಷ್ಟ್ರದ ನಾಂದೇಡ್ ನಲ್ಲಿ ಈತ ನೆಲೆಸಿದ್ದ. ಬೆಂಗಳೂರಿನಿಂದ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಗ ಬೆಂಗಳೂರಿನ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸ್ ಆಯುಕ್ತ ಮಿರ್ಜಿ ಹೇಳಿದ್ದಾರೆ.
ನಿಷೇಧಿತ ಲಷ್ಕರ್ ಇ ತೋಯಿಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ(HuJI) ಸಂಘಟನೆ ಜೊತೆ ಅಕ್ರಮ್ ನೇರ್ ಸಂಬಂಧ ಹೊಂದಿದ್ದಾನೆ. ಇತ್ತೀಚೆಗೆ ಸಮಾಜದ ಗಣ್ಯರ ಹತ್ಯೆ ಸಂಚಿನ ಪ್ರಮುಖ ರುವಾರಿಯಾಗಿದ್ದಾನೆ ಎಂದು ಮಿರ್ಜಿ ಹೇಳಿದ್ದಾರೆ. ಕೊಪ್ಪದಲ್ಲಿ ಸಿಕ್ಕಿಬಿದ್ದ ಒಬ್ಬ ಉಗ್ರನನ್ನು ಸೇರಿಸಿದರೆ ಸಿಸಿಬಿ ಬಲೆಗೆ ಒಟ್ಟಾರೆ 13 ಜನ ಶಂಕಿತ ಉಗ್ರರು ಬಿದ್ದಿದ್ದಾರೆ.
ಬಂಧಿತ ಅಕ್ರಮ್ ನಿಂದ 7.65mm ವಿದೇಶಿ ಪಿಸ್ತೂಲ್ ಹಾಗೂ 16 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ಅಡಗುತಾಣ ಕಂಡು ಹಿಡಿಯಲು ತೀವ್ರ ಶೋಧ ಕಾರ್ಯ ನಡೆದಿದ್ದು, ಉಗ್ರರ ವಿಚಾರಣೆಯನ್ನು ರಹಸ್ಯ ಸ್ಥಳದಲ್ಲಿ ಮಾಡಲಾಗುತ್ತಿದೆ.
ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಅಡಗಿದ್ದ ಶಂಕಿತ ಉಗ್ರನೊಬ್ಬನನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಭಾನುವಾರ(ಸೆ.2) ಬಂಧಿಸಿದ್ದಾರೆ. ಬಂಧಿತ ಶಂಕಿತ ಉಗ್ರನನ್ನು ಮಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ಇನ್ನೂ ಮೂವರು ಶಂಕಿತರು ಅಡಗಿರುವ ಸಾಧ್ಯತೆ ಕಂಡು ಬಂದಿದ್ದು, ತೀವ್ರ ಶೋಧ ನಡೆದಿದೆ.
ಚಿಕ್ಕಮಗಳೂರು, ಭಟ್ಕಳ ಸೇರಿದಂತೆ ಹಲವೆಡೆ ಪೊಲೀಸರ ಕಾರ್ಯಾಚರಣೆ ನಡೆದಿದ್ದು ಹಲವರನ್ನು ಬಂಧಿಸಲಾಗಿದೆ ಎಂದು ಶನಿವಾರ ಎಸ್ ಎಂಎಸ್ ಮೂಲಕ ಸುದ್ದಿ ಹಬ್ಬಿತ್ತು. ಕರಾವಳಿ ಕರ್ನಾಟಕದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
ಸಿಸಿಬಿ ಬೇಟೆ ಮುಂದುವರಿಕೆ: ಬೆಂಗಳೂರು, ಹುಬ್ಬಳ್ಲಿ, ಹೈದರಾಬಾದ್, ಬಿಜಾಪುರ, ಚಿಕ್ಕಮಗಳೂರು ಹಾಗೂ ಭಟ್ಕಳದ ಕಡೆಗೆ ಒಟ್ಟು 8 ತಂಡಗಳಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ತೆರಳಿದ್ದು, ತೀವ್ರ ತಪಾಸಣೆ ನಡೆಸಿದ್ದಾರೆ.
ಸದ್ಯಕ್ಕೆ ಶಂಕಿತ ಉಗ್ರರ ಫೋನ್ ಕಾಲ್ ಕರೆ ಹಾಗೂ ಲ್ಯಾಪ್ ಟಾಪ್ ನಲ್ಲಿ ಸಿಕ್ಕ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶಂಕಿತ ಉಗ್ರರು ವ್ಯಾಸಂಗ ಮಾಡುತ್ತಿದ್ದ ಕಾಲೇಜುಗಳಿಗೆ ತೆರಳಿ ವಿಚಾರಣೆ ನಡೆಸಲಾಗುತ್ತಿದೆ. ಸಂಜೆ ವೇಳೆಗೆ ಇನ್ನೂ ಕೆಲವು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.












Click it and Unblock the Notifications