ಬರಗಾಲದಲ್ಲಿ ವಿದೇಶಿ ಪ್ರವಾಸ ನಾಚಿಕೆಗೇಡು: ಬಿಎಸ್ ವೈ

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರು ಸಂಕಷ್ಟದಲ್ಲಿರುವಾಗ ಯಾರೇ ವಿದೇಶ ಪ್ರವಾಸ ಮಾಡಿದರೂ ಸಹ ಅದು ಅಪರಾಧ. ಯಾವುದೇ ಶಾಸಕರು ಹೊರ ರಾಜ್ಯಗಳಿಗೂ ಸಹ ಹೋಗಬಾರದು. ಇಲ್ಲೇ ಇದ್ದು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದ್ದೇನೆ ಎಂದರು.
ಈಗಾಗಲೇ ವಿದೇಶ ಪ್ರವಾಸ ಕೈಗೊಂಡಿರುವ ಶಾಸಕರು ವಾಪಸ್ ಬರಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಜೊತೆ ಮಾತನಾಡಿ ಕೂಡಲೇ ಅವರೆಲ್ಲಾ ವಾಪಸ್ ಬರುವಂತೆ ಮನವಿ ಮಾಡುತ್ತೇನೆ. ಜನರೂ ಸಹ ಇದನ್ನೇ ನಿರೀಕ್ಷಿಸುತ್ತಿದ್ದಾರೆ. ಇದಕ್ಕೂ ಮೀರಿ ಪ್ರವಾಸ ಕೈಗೊಂಡವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಯಡಿಯೂರಪ್ಪ ಖಡಕ್ ಸಂದೇಶ ನೀಡಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಬರ ಅಧ್ಯಯನ ಪ್ರವಾಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ, ಪ್ರತಿ ಪಕ್ಷಗಳಿಗೆ ಇದ್ದಕ್ಕಿಂದ್ದಂತೆ ಬರಗಾಲ ನೆನಪಾಗಿದೆ. ಕಾಂಗ್ರೆಸ್‌ನವರು ಬರ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸುವುದಕ್ಕಿಂತ ಪ್ರಧಾನಿ ಹಾಗೂ ಕೇಂದ್ರ ಕೃಷಿ ಸಚಿವರ ಬಳಿ ತೆರಳಿ ರಾಜ್ಯಕ್ಕೆ ಹೆಚ್ಚು ಅನುದಾನ ನೀಡುವಂತೆ ಮಾಡಲಿ. ಅಗತ್ಯ ಬಿದ್ದರೆ ನಾನೂ ಸಹ ಕಾಂಗ್ರೆಸ್ ನಾಯಕರೊಂದಿಗೆ ನಿಯೋಗದಲ್ಲಿ ತೆರಳುತ್ತೇನೆ.
ಆದರೆ ರಾಜ್ಯದಲ್ಲಿ ನಾಲ್ವರು ಕೇಂದ್ರ ಸಚಿವರಿದ್ದರೂ ಸಹ ಬರ ಪರಿಹಾರಕ್ಕೆ ಬಿಡಿಗಾಸೂ ಬಿಡುಗಡೆಯಾಗಿಲ್ಲ. ಯಾವ ಸಚಿವರೂ ಸಹ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಇವರನ್ನು ನಮ್ಮ ಜನಪ್ರತಿನಿಧಿಗಳೆಂದು ಹೇಗೆ ಹೇಳೋದು ಎಂದು ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications