ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಶೇಖರ ರೆಡ್ಡಿಗೆ ಜೈಲು ಸೇರಿದರೂ ಬುದ್ಧಿ ಬಂದಿಲ್ಲ

By Srinath
|
Google Oneindia Kannada News

bailgate-cash-mobile-phone-seize-from-somashekhar-reddy
ಹೈದರಾಬಾದ್, ಆ.31: ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಅನ್ನುತ್ತಾರೆ. ಆದರೆ ಕೆಲವರ ಜಾಯಮಾನದಲ್ಲಿ... ಈ ಅಕ್ರಮ ಗಣಿವೀರ ಜನಾರ್ದನ ರೆಡ್ಡಿಯ ಅಣ್ಣ ಸೋಮಶೇಖರ ರೆಡ್ಡಿಗೆ ಜೈಲುಪಾಲಾದರೂ ಇನ್ನೂ ಬುದ್ಧಿ ಬಂದಂತಿಲ್ಲ.

ಒಬ್ಬೊಬ್ಬರಾಗಿ ಮನೆ ಮಂದಿಯೆಲ್ಲ ಜೈಲುಪಾಲಾಗಿರುವುದರಿಂದ KMF ಗೋಪಾಲಕ ಸೋಮ ರೆಡ್ಡಿ ಕಂಗೆಟ್ಟಿದ್ದಾರೆ ಅನಿಸುತ್ತಿದೆ. ಜೈಲಿನ ಹೊರಗಿದ್ದರೇನು, ಒಳಗಿದ್ದರೇನು? ಅದೇ ಅಕ್ರಮ ಗಣಿ ದುಡ್ಡಿನಿಂದ ಇನ್ನೂ ಏನು ಬೇಕಾದರೂ ಖರೀದಿಸುತ್ತೇವೆ ಎಂಬ ಹಪಾಹಪಿಗೆ ಬಿದ್ದಿದ್ದಾರೆ.

ಹಾಗಾಗಿಯೇ ಜೈಲು ಸೇರಿ ಇನ್ನೂ ಒಂದು ತಿಂಗಳು ಕಳೆದಿಲ್ಲ (ಆಗಸ್ಟ್ 6) ಆಗಲೇ ಅಲ್ಲಿನ ವ್ಯವಸ್ಥೆಯನ್ನು ಕೆಡಿಸಿ, ತಮಗೆ ಬೇಕಾದ ಹಾಗೆ ಇರಬಹುದು ಎಂದುಕೊಂಡು ಜೈಲಿನಲ್ಲಿದ್ದುಕೊಂಡೇ ಅಕ್ರಮವಾಗಿ ದುಡ್ಡು ಶೇಖರಿಸಿಟ್ಟುಕೊಂಡಿದ್ದಾರೆ.

ಮತ್ತು ಆ ಬಗ್ಗೆ 'ತನ್ನ ಬಳಿ ಹಣವಿತ್ತು' ಎಂದು ತಪ್ಪೊಪ್ಪಿಗೆಯನ್ನೂ ಬರೆದುಕೊಟ್ಟಿದ್ದಾರೆ. ಒಟ್ಟಿನಲ್ಲಿ ಜನಾರ್ದನ ರೆಡ್ಡಿ ಜೈಲುಪಾಲಾದ ನಂತರ ಒಂದೊಂದೇ ಸ್ವಯಂಕೃತಾಪರಾಧಗಳನ್ನು ಮಾಡುತ್ತಾ ಸಾಗಿರುವ ರೆಡ್ಡಿ ಬ್ರದರ್ಸ್ ಗೆ ಸದ್ಯಕ್ಕೆ ಜೈಲಿನಿಂದ ಮುಕ್ತಿ ದೊರಕುವ ಲಕ್ಷಣಗಳು ಸುತರಾಂ ಇಲ್ಲ ಅನಿಸುತ್ತದೆ.

ಸೋಮ ರೆಡ್ಡಿಗೆ ಕ್ಯಾಂಟಿನ್ ಸೇವೆ ಬಂದ್: ನಿನ್ನೆ ಗುರುವಾರ ಏನಾಯಿತೆಂದರೆ ಸೋಮಶೇಖರ ರೆಡ್ಡಿ ಅವರಿದ್ದ ಜೈಲಿನ 'ಮಾನಸ ಸರೋವರ' ಸೆಲ್‌ನಲ್ಲಿ ಜೈಲಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದಾರೆ. ತಪಾಸಣೆ ವೇಳೆ 2 ಮೊಬೈಲ್ ಫೋನುಗಳು ಮತ್ತು 15 ಸಾವಿರ ರೂ. ನಗದನ್ನು ಸೋಮಶೇಖರ ರೆಡ್ಡಿಯಿಂದ ವಶಪಡಿಸಿಕೊಂಡಿದ್ದಾರೆ.

ಜನಾರ್ದನ ರೆಡ್ಡಿ ಜಾಮೀನು ಲಂಚ ಪ್ರಕರಣದಲ್ಲಿ ಹೈದರಾಬಾದಿನ ಚೆರ್ಲಪಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಜೈಲಲ್ಲೇ ಐಷಾರಾಮಿ ಜೀವನ ನಡೆಸಲು ಜೈಲು ಸಿಬ್ಬಂದಿಗೆ ಲಂಚ ರುಶುವತ್ತುಗಳನ್ನು ನೀಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಹವಣಿಸಿದ್ದಾರೆ ಎನಿಸುತ್ತದೆ.

ತಿರುಪತಿ ತಿಮ್ಮಪ್ಪನಿಗೆ ಮುಡಿಪು: ತಿರುಪತಿ ತಿಮ್ಮಪ್ಪನಿಗೆ ಮುಡಿಪು ಸಲ್ಲಿಸುವ ಉದ್ದೇಶದಿಂದ ಹಣವನ್ನು ತಮ್ಮ ಕುಟುಂಬದ ಸದಸ್ಯರು ನನ್ನನ್ನು ನೋಡಲು ಇಲ್ಲಿಗೆ ಬಂದಿದ್ದಾಗ ನೀಡಿದ್ದರು ಎಂದು ಸೋಮಶೇಖರ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ ಎಂದು ಚೆರ್ಲಪಲ್ಲಿ ಜೈಲು ಅಧೀಕ್ಷಕ ಶ್ರೀನಿವಾಸ ರಾವ್‌ ಟಿವಿ9ಗೆ ತಿಳಿಸಿದ್ದಾರೆ.

ಆದರೆ ಇದನ್ನು ಸೋಮ ರೆಡ್ಡಿ ತಕ್ಷಣ ಜೈಲಧಿಕಾರಿಗಳ ಗಮನಕ್ಕೆ ತಂದು ಅವರ ಅನುಮತಿ ಪಡೆಯಬೇಕಿತ್ತು. ಆದರೆ ಕಾನೂನುಬಾಹಿರವಾಗಿ ಹಣ ಸಂಗ್ರಹಿಸಿಟ್ಟುಕೊಂಡಿದ್ದರ ಫಲವಾಗಿ ಸೋಮಶೇಖರ್‌ ರೆಡ್ಡಿಗೆ ಯಾವ ಸಂದರ್ಶಕರನ್ನೂ ಭೇಟಿ ಮಾಡದಂತೆ ನಿರ್ಬಂಧ ವಿಧಿಸಿಸಲಾಗಿದೆ. ಜತೆಗೆ, ಜೈಲು ಕ್ಯಾಂಟಿನ್ ಸೇವೆಯನ್ನು ಬಂದ್ ಮಾಡಲಾಗಿದೆ ಎಂದು ಅಧೀಕ್ಷಕ ಶ್ರೀನಿವಾಸ ರಾವ್‌ ಅವರು ತಿಳಿಸಿದ್ದಾರೆ.

ಜನಾ ರೆಡ್ಡಿಗೆ ಮತ್ತೊಂದು ಕಂಟಕ:
ಬಳ್ಳಾರಿ ವರದಿ: ಜೈಲು ಜನಾರ್ದನಗೆ ಮತ್ತೊಮ್ಮೆ ತಮ್ಮೂರಿನತ್ತ ಪ್ರಯಾಣ ಮಾಡುವ ಸುಯೋಗ ಬಂದಿದೆ. ಮುಂದಿನ ತಿಂಗಳು 14ರಂದು ಖುದ್ದಾಗಿ ಹಾಜರಾಗುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇಲ್ಲಿನ 1ನೇ ಜೆಎಂಎಫ್‌ಸಿ ಎಸಿಜೆ ನ್ಯಾಯಾಲಯ ಗುರುವಾರ ಬಾಡಿ ವಾರಂಟ್‌ ಹೊರಡಿಸಿದೆ.

ಕಾಂಗ್ರೆಸ್‌ ಮುಖಂಡ ದಿವಾಕರ ಬಾಬು ದಾಖಲಿಸಿರುವ ಮಾನ ಹಾನಿ ಪ್ರಕರಣ ಇದಾಗಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಶ್ರೀರಾಮುಲು ಮತ್ತು ಇತರ ಮೂವರಿಗೂ ನೋಟಿಸ್‌ ನೀಡಲಾಗಿದೆ.

ಕಾಂಗ್ರೆಸ್‌ ಮುಖಂಡ ದಿವಾಕರ ಬಾಬು ವಿರುದ್ಧ ಪತ್ರಿಕೆಗಳಲ್ಲಿ ಕೊಲೆಗಡುಕ, ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತಿತರರು 2005ರಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ತಮ್ಮ ವೈಯಕ್ತಿಕ ಚಾರಿತ್ರ್ಯ ವಧೆಯಾಗಿದೆ ಎಂದು ಆರೋಪಿಸಿ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದಿವಾಕರ ಬಾಬು ಖಾಸಗಿ ದೂರು ದಾಖಲಿಸಿದ್ದರು.

English summary
Illegal Mining Bailgate - Rs 15,000 and mobile phones seized from somashekhar reddy in Cherlapally central prison on August 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X