ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರತಾಪ್ ಮದುವೆ'ಯಲ್ಲಿ ಉಗ್ರ ಬೇಟೆ ನಡೆದಿದ್ದು ಹೇಗೆ?

By Srinath
|
Google Oneindia Kannada News

marriage-pratap-terror-suspects-ccb-operation-details
ಬೆಂಗಳೂರು, ಆಗಸ್ಟ್ 31: 'ಪ್ರತಾಪ್ ಮದುವೆ' ಪೌರೋಹಿತ್ಯದ ಉಗ್ರರನ್ನು ಸಿಸಿಬಿ ಪೊಲೀಸರು ಬೇಟೆಯಾಡಿದ್ದು ಹೇಗೆ ಗೊತ್ತಾ? ಸಾಕ್ಷಾತ್ ಮುಖ್ಯಮಂತ್ರಿಯ ತವರು ಮನೆಯ ಸಮೀಪವೇ ಉಗ್ರರ ಅಡಗುದಾಣವಿದ್ದರೂ ಸ್ಥಳೀಯ ಪೊಲೀಸರ ಅದನ್ನು ಗಮನಿಸದೇ ಹೋದರು.

ಆದರೆ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಮತ್ತು ಬಿ. ದಯಾನಂದ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿಸಿದ ಸಿಸಿಬಿ ಪೊಲೀಸರು ಶಂಕಿತ ಭಯೋತ್ಪಾದಕರನ್ನು ಅವರದೇ ಖೆಡ್ಡಾದಲ್ಲಿ ಕೆಡವಿದರು.

ಇನ್ಸ್‌ಪೆಕ್ಟರ್ ಗಳಾದ ಎನ್ ಬಿ ಸಕ್ರಿ ಮತ್ತು ಆನಂದ್ ಕಬ್ಬೂರ್ ನೇತೃತ್ವದಲ್ಲಿ 6 ಸದಸ್ಯರ BCCB ತಂಡವು ಮೊನ್ನೆ ಭಾನುವಾರ ಬೆಳಗ್ಗೆಯೇ ಹುಬ್ಬಳ್ಳಿಗೆ ಬಂದು ಬೀಡುಬಿಟ್ಟಿತ್ತು. ಆದರೆ ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡಲಿಲ್ಲ.

ತಂಡದಲ್ಲಿ ಪೊಲೀಸರ ಜತೆಗೆ ಕಂಪ್ಯೂಟರ್ ತಜ್ಞ, ವಿಡಿಯೋಗ್ರಾಫರ್, ಫೋಟೋಗ್ರಾಫರ್ ಮತ್ತು ತಾಂತ್ರಿಕ ಪರಿಣತರೂ ಇದ್ದರು.

ಖಾಸಗಿ ವಾಹನದಲ್ಲಿ, ಸಮವಸ್ತ್ರ ಧರಿಸದೇ ಹಳೆಯ ಬಸ್ ಸ್ಟಾಂಡ್ ಸಮೀಪದಲ್ಲಿ ಚಿಕ್ಕ ಲಾಡ್ಜೊಂದರಲ್ಲಿ ರೂಮು ಹಿಡಿದ ಸಿಸಿಬಿ ತಂಡ ತನ್ನ ಕಾರ್ಯಾಚರಣೆಗೆ ಸದ್ದಿಲ್ಲದೆ ಸಿದ್ಧತೆ ನಡೆಸಿತು.

ತಾವು ಬಂಧಿಸಬಹುದಾದ ಯುವಕರು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡೇ ಹುಬ್ಬಳ್ಳಿಗೆ ತೆರಳಿದ್ದ ಪೊಲೀಸರು ಬೈಕುಗಳಲ್ಲಿ ಕೇಶ್ವಾಪುರ ಮತ್ತು ಹಳೆಯ ಹುಬ್ಬಳ್ಳಿ ಭಾಗಗಳಲ್ಲಿ ರೌಂಡ್ಸ್ ಹೊಡೆದಿದ್ದಾರೆ.

ಹೀಗೆ ಬೈಕಿನಲ್ಲಿ ಸಂಡೆ ರೌಂಡ್ಸ್ ಹೊಡೆಯುತ್ತಲೇ ತಮ್ಮ ಬೇಟೆಯ ಚಲನವಲನಗಳನ್ನು ಸಮೀಪದಿಂದ ಗಮನಿಸಿ, ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ನಂತರ, ತಮ್ಮ ಲೆಕ್ಕಾಚಾರದಂತೆ ಹುಡುಗರೆಲ್ಲಾ ತಮ್ಮ ತಮ್ಮ ಮನೆಗಳಲ್ಲಿ ಜಂಡಾ ಹೂಡಿದ್ದಾರೆ ಎಂಬುದನ್ನು ದೃಢಪಡಿಸಿಕೊಂಡು ಮೂರು ದಿನಗಳ ನಂತರ ಬುಧವಾರ ಬೆಳಗ್ಗೆ 9 ಗಂಟೆಗೆ ಒಂದೊಂದೇ ಮನೆಗೆ ನುಗ್ಗಿದ್ದಾರೆ. ಕೇವಲ 30 ನಿಮಿಷದಲ್ಲಿ ಅಷ್ಟೂ ಉಗ್ರರನ್ನು ಬೇಟೆಯಾಡಿದ್ದಾರೆ. 11 ಗಂಟೆಗೆಲ್ಲ ಬೆಂಗಳೂರು ಮಾರ್ಗ ಹಿಡಿದಿದ್ದಾರೆ.

ಗಾಬರಿಗೆ ಬಿದ್ದ ಶಂಕಿತ ಭಯೋತ್ಫಾದಕರ ಮನೆಯವರು ಮಫ್ತಿಯಲ್ಲಿದ್ದ ಪೊಲೀಸರನ್ನು ಯಾರು ನೀವು? ಏನು ನಿಮ್ಮ ದಾಂಗುಡಿ? ಎಂದು ವಿಚಾರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇನ್ಸ್‌ಪೆಕ್ಟರ್ ಗಳಾದ ಎನ್ ಬಿ ಸಕ್ರಿ ಮತ್ತು ಆನಂದ್ ಕಬ್ಬೂರ್ ಅವರುಗಳು 'ಚುಪ್' ಎನ್ನುತ್ತಾ ತಮ್ಮ ಐ.ಡಿ. ಕಾರ್ಡನ್ನು ತೆಗೆದು ತೋರಿಸಿದ್ದಾರೆ. ಜತೆಗೆ, ಹೆಚ್ಚಿನ ಮಾಹಿತಿಗೆ ಕೇಶ್ವಾಪುರ ಠಾಣೆಯಲ್ಲಿ ವಿಚಾರಿಸಿ ಎಂದಿದ್ದಾರೆ.

ಎದ್ನೋಬಿದ್ನೋ ಎಂದು ಆರೋಪಿಗಳ ಮನೆಯವರು ಠಾಣೆಗೆ ಹೋದರೆ ಏನೂ ಉಪಯೋಗವಾಗಿಲ್ಲ. ಏಕೆಂದರೆ ಅಲ್ಲಿನ ಪೊಲೀಸರು ತಮಗೇನೂ ಗೊತ್ತೇ ಇಲ್ಲಾ ಎಂದು ಮನೆಯವರನ್ನು ಸಾಗಹಾಕಿದ್ದಾರೆ. ಕಾರ್ಯಾಚರಣೆ ತಹಬಂದಿಗೆ ಬಂದ ಮೇಲೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಮನೆಯವರು ಮುಂದೇನು ಮಾಡುವುದು ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಇತ್ತ ಬೆಂಗಳೂರಿನಲ್ಲೂ ಮುನಿರೆಡ್ಡಿ ಪಾಳ್ಯದಲ್ಲಿ ಒಂದೇ ರೂಮಿನಲ್ಲಿದ್ದ ಪತ್ರಕರ್ತ ಮತಿ ಉರ್ ರೆಹಮಾನ್ ಸಿದ್ದಿಖಿ ತಂಡವನ್ನು ಹೆಚ್ಚು ಪ್ರತಿರೋಧವಿಲ್ಲದೆ ಸಿಸಿಬಿ ತಂಡ ಎತ್ತಿಹಾಕಿಕೊಂಡು ಬಂದಿದೆ. ಇವರ ಬಂಧನದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಕೆಲವು ನಾಯಕರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಹುಡುಗರು ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ. ಆದರೆ ವಿಷಯ ತಿಳಿದ ಪೊಲೀಸರು ಅದಕ್ಕೆ ಸೊಪ್ಪು ಹಾಕಿಲ್ಲ.

ಆಘಾತಕಾರಿ ಸಂಗತಿಯೆಂದರೆ ಬಂಧಿತ ಡಾ. ಜಾಫರ್ ಇಕ್ಬಾಲ್ ಸೊಲ್ಲಾಪುರ ನಿವಾಸವು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮನೆಯಿಂದ ಕೂಗಳತೆಯಲ್ಲಿದೆ. ಹೀಗಾಗಿ ಭದ್ರತೆಯ ಲೋಪ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಇಲ್ಲಿನ ಬದಾಮಿನಗರದ ಮಧುರಾ ಎಸ್ಟೇಟ್‌ನಲ್ಲಿರುವ ಮುಖ್ಯಮಂತ್ರಿ ನಿವಾಸ ಹಾಗೂ ಇಕ್ಬಾಲ್ ಮನೆಯ ನಡುವೆ ಕೇವಲ ನಾಲ್ಕು ಮನೆಗಳಿವೆ.

ಶೆಟ್ಟರ್ ಅವರ ಮನೆಯ ಬಾಗಿಲಿನಿಂದ ನಿಂತು ನೋಡಿದರೂ ಇಕ್ಬಾಲ್ ನಿವಾಸ ಕಾಣಿಸುತ್ತದೆ. ಕೇಶ್ವಾಪುರ ಠಾಣೆಯ ಪೊಲೀಸ್ ವಾಹನವು ಮುಖ್ಯಮಂತ್ರಿ ಬೆಂಗಾವಲಿಗೆ ಬಂದಾಗಲೆಲ್ಲ ಇಕ್ಬಾಲ್ ಮನೆಯ ಮುಂದೆಯೇ ನಿಲ್ಲುತಿತ್ತು. ಇದಲ್ಲವೇ ನಮ್ಮ ಪೊಲೀಸರ ದುರಂತ !?

ಆದಾಗ್ಯೂ, ಗೃಹ ಸಚಿವ ಆರ್ ಅಶೋಕ್ ಅವರು 'ಶಂಕಿತ 11 ಉಗ್ರರ ಬಂಧನವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮುಕ್ತ ತನಿಖೆಗೆ ಅನುವಾಗುವಂತೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ' ಎಂದು ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.

English summary
Bangalore CCB arrest Marriage Pratap terror suspects. Operation details..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X