ಡರ್ಟಿ ಪಿಕ್ಚರ್ ಎಂಎಂಎಸ್ ಕಳಿಸಿದ್ದಕ್ಕೆ ನೌಕರ ಅಮಾನತು

ಯುವತಿಯ ಮಾನ ಹರಣಗೊಳಿಸಿದ ಪ್ರಕರಣದ ಆರೋಪಿ ಹೆಸರು ಸುಧಾಕರ ನಾಯ್ಕ. ಅರಿಯಡ್ಕ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳು, ಪೋರ್ನ್ ತಾಣಗಳನ್ನು ಜಾಲಾಡುತ್ತಿದ್ದ. ಈ ತಾಣಗಳಿಗೆ ತಾನು ಒಂದಿಷ್ಟು ಕೊಡುಗೆ ನೀಡಬೇಕು ಎಂಬಂತೆ ನಾಚಿಗೆಗೆಟ್ಟು ತನ್ನ ಕಾಮಲೀಲೆಯ ದೃಶ್ಯಗಳಿದ್ದ ಕ್ಲಿಪಿಂಗ್ ಗಳನ್ನು ಸೇರಿಸಿದ್ದಾನೆ.
ಯುವತಿಯೊಬ್ಬಳೊಂದಿಗೆ ತಾನು ನಡೆಸಿದ ಕೃತ್ಯದ ಅಶ್ಲೀಲ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರಿಸಿ, ಬಳಿಕ ಅದನ್ನು ಮೊಬೈಲ್ ಹಾಗೂ ಇಂಟರ್ ನೆಟ್ ಮೂಲಕ ರವಾನಿಸಿದ ತಪ್ಪಿಗೆ ಈಗ ಸುಧಾಕರನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಚೌಟರ ಅಧ್ಯಕ್ಷತೆಯಲ್ಲಿ ಗುರುವಾರ(ಆ.30) ನಡೆದ ಪಂಚಾಯತ್ ಸಮಾನ್ಯ ಸಭೆಯಲ್ಲಿ ಆರೋಪಿ ಸಿಬ್ಬಂದಿ ಸುಧಾಕರ ನಾಯ್ಕನನ್ನು ಸೇವೆಯಿಂದ ವಜಾಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಅರಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಅರಿಯಡ್ಕ ಗ್ರಾಮದ ಶೇಕಮಲೆ ನಿವಾಸಿ ಸುಧಾಕರ ನಾಯ್ಕ ತನ್ನದೇ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದ ಈಶ್ವರಮಂಗಲ ಸಮೀಪದ ಯುವತಿಯೊಬ್ಬಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು, ಬಳಿಕ ಆ ದೃಶ್ಯಾವಳಿಯನ್ನು ಮೊಬೈಲ್ ಮೂಲಕ ರವಾನಿಸಿದ್ದಲ್ಲದೆ ಇಂಟರ್‌ನೆಟ್ ಮೂಲಕವೂ ಪಸರಿಸಿ ಯುವತಿಯ ಮಾನ ಹರಾಜು ಹಾಕಿದ್ದ.
ಈ ಪ್ರಕರಣ ಬಯಲಾದ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುಧಾಕರ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದ ಅರಿಯಡ್ಕ ಗ್ರಾಮ ಪಂಚಾಯತ್ ಸಭೆಯಲ್ಲಿ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.












Click it and Unblock the Notifications