ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರತಾಪ್ ಮದುವೆ' ನಡೆದಿದ್ದರೆ ಎರಡು ಹೆಣ ಬೀಳುತ್ತಿತ್ತು

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 31: ಹೌದು, ನಿನ್ನೆ ಪತ್ರಕರ್ತನ ಸೋಗಿನಲ್ಲಿದ್ದ ಶಂಕಿತ ಭಯೋತ್ಪಾದಕ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇನು, ಎತ್ತ, ಅದು ನಿಜವಾ ಎಂದೆಲ್ಲ ಜನ ಕೇಳತೊಡಗಿದ್ದಾರೆ. ಆದರೆ ಒಂದಂತೂ ನಿಜ.

ಬಂಧಿತ ಶಂಕಿತ ಭಯೋತ್ಪಾದಕರು ಆರಂಭದಲ್ಲಿ ತಮ್ಮ ಕಾರ್ಯಾಚರಣೆಗೆ ನೀಡಿದ್ದ 'ಪ್ರತಾಪನ ಮದುವೆ' ಹೆಸರಿನ ಕಾರ್ಯಾಚರಣೆ ಕಾರ್ಯಗತವಾಗಿದ್ದರೆ ಸದರಿ ಪತ್ರಕರ್ತ ಸೇರಿದಂತೆ ಕನಿಷ್ಠ ಎರಡು ಹೆಣ ಬೀಳುತ್ತಿತ್ತು ಅಷ್ಟೇ.

bangalore-ccb-arrest-marriage-pratap-terror-suspects

ಹಾಗೆ ನೋಡಿದರೆ ಬೆಂಗಳೂರಿನ ದಕ್ಷ ಸಿಸಿಬಿ ತಂಡ ದಿಢೀರನೆ ಈ ಉಗ್ರರ ಬೆನ್ನು ಹತ್ತಿಲ್ಲ. ಬಂಧಿತರು ಭಯೋತ್ಪಾದನಾ ಸಂಘಟನೆಗಳಾದ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ (SIO), ಲಷ್ಕರ್-ಎ-ತೊಯ್ಬಾ (LeT), ಹುಜಿ (HUJI) ನಂಟು ಹೊಂದಿರುವ ವಾಸನೆ 2 ತಿಂಗಳ ಹಿಂದೆಯೇ ಸಿಸಿಬಿ ಪೊಲೀಸರ ಮೂಗಿಗೆ ಬಡಿದಿತ್ತು. ಅದು ಮೊನ್ನೆ ಅಸ್ಸಾಂ ಮಂದಿ ಗುಳೆ ಹೋಗುವಂತಾಗಲು ಕಾರಣವಾದ sms ಜಾಲವನ್ನು ಬೇಧಿಸಿದಾಗ ಮತ್ತಷ್ಟು ಸ್ಪಷ್ಟ ಚಿತ್ರಣ ಸಿಕ್ಕಿತ್ತು.

ಆತಂಕದ ವಿಷಯವೆಂದರೆ ಬಂಧಿತರು ತಾವು ಹತ್ಯೆ ಮಾಡಲುದ್ದೇಶಿಸಿದ್ದ ಗುರಿಯತ್ತಲೇ 10 ದಿನಗಳಿಂದ ಗಿರಕಿ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ಅಂಕಣಕಾರ ಪ್ರತಾಪ್ ಸಿಂಹ ಮತ್ತು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಅವರ ಚಟುವಟಿಕೆ ಮೇಲೆ ಕಣ್ಣಿಟ್ಟಿದ್ದು, ಸಮಗ್ರ ಮಾಹಿತಿ ಕಲೆಹಾಕುತ್ತಿದ್ದರು. ಆದರೆ ಬಂಧಿತರಿಗೆ ತಿಳಿಯದೇ ಹೋದ ವಿಷಯವೆಂದರೆ ತಮ್ಮ ಮೇಲೆ ಸಿಸಿಬಿ ಪೊಲೀಸರೇ ಕಣ್ಗಾವಲು ಹಾಕಿದ್ದಾರೆ ಎಂಬುದು.

ಹೀಗೆ ಸಿಸಿಬಿ ಪೊಲೀಸರು ಶಂಕಿತ ಉಗ್ರರ ಚಲನವಲನವನ್ನು ಹದ್ದಿನಕಣ್ಣಿನಿಂದ ನೋಡುತ್ತಿದ್ದರು. ಇನ್ನೇನು ಅವರು ಗುರಿ ಸಾಧನೆಗೆ ಬಹುತೇಕ ಸಿದ್ಧರಾಗಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆ ಇನ್ನು ತಡಮಾಡಿದರೆ ಅನಾಹುತವಾಗುವುದು ಖಚಿತ ಎಂಬುದನ್ನು ಮನಗಂಡು ಮೊನ್ನೆ ಭಾನುವಾರವೇ ಅಧಿಕಾರಿಗಳ ತಂಡವೊಂದು ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿದೆ.

ಮಹೂರ್ತ ನಿಗದಿಪಡಿಸಿ, ಅವರಿಗೆ ಮಿಸುಕಾಡಲೂ ಅವಕಾಶ ನೀಡದೆ ಸೀದಾ ಬೆಂಗಳೂರಿಗೆ ಎತ್ತಿಹಾಕಿಕೊಂಡು ಬಂದಿದ್ದಾರೆ. ಏಕಕಾಲದಲ್ಲಿ ಬೆಂಗಳೂರಿನ ಮುನಿರೆಡ್ಡಿ ಪಾಳ್ಯದಲ್ಲೂ ದಾಳಿ ನಡೆಸಿ ಪತ್ರಕರ್ತರ ಸೋಗಿನಲ್ಲಿದ್ದ ಯುವಕನ ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಂಡು, ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಬೆಂಗಳೂರು ನ್ಯಾಯಾಲಯವು ಬಂಧಿತರನ್ನು ಪೊಲೀಸ್ ವಶಕ್ಕೆ ನೀಡಿದೆ.

ಮೋದಿ ಜತೆ ತೆಗೆಸಿಕೊಂಡಿದ್ದ ಫೋಟೋ ಮುಳುವಾಯಿತೇ?: ಅಂಕಣಕಾರ ಪ್ರತಾಪ್ ಸಿಂಹ ಏಷ್ಟೇ ಹಿಂದೂಪರ ಬರಹಗಾರ ಎನಿಸಿದ್ದರೂ ಆತನನ್ನು ಉಗ್ರರು ಹತ್ಯೆ ಮಾಡುವ ಹಂತಕ್ಕೆ ಹೋಗಿದ್ದೇಕೆ ಎಂಬ ಪ್ರಶ್ನೆ ಮುಂದಿಟ್ಟಾಗ...

ನಾಲ್ಕೈದು ವರ್ಷಗಳ ಹಿಂದೆ ನರೇಂದ್ರ ಮೋದಿ ಬಗ್ಗೆ ಅಂಕಣಕಾರ ಪ್ರತಾಪ್ ಸಿಂಹ ಪುಸ್ತಕವೊಂದನ್ನು ("ಯಾರೂ ತುಳಿಯದ ಹಾದಿ- ನರೇಂದ್ರ ಮೋದಿ") ಕನ್ನಡಕ್ಕೆ ತಂದಿದ್ದರು. ಅದೇ ನೆಪದಲ್ಲಿ ಮೋದಿ ಬೆಂಗಳೂರಿಗೆ ಬಂದಿದ್ದಾಗ ಪಂಚತಾರಾ ಹೋಟೆಲೊಂದರಲ್ಲಿ ಮೋದಿ ಮತ್ತು ಪ್ರತಾಪ್ ಭೇಟಿ ನಡೆದಿತ್ತು. ಆ ಸಂದರ್ಭದಲ್ಲಿ ಮೋದಿ ಜತೆ ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದರು. ಆದರೆ ಮೋದಿ ಮೇಲೆ ಮೊದಲಿಂದಲೂ ಕಣ್ಣಿಟ್ಟಿದ್ದ ಉಗ್ರರಿಗೆ ಸಹಜವಾಗಿಯೇ ಪ್ರತಾಪ್ ಮೇಲೆ ಕಣ್ಣು ಬಿದ್ದಿದೆ.

ಹಾಗಾಗಿ 'ಪ್ರತಾಪ್ ಮ್ಯಾರೇಜ್' ಎಂಬ ಹೆಸರಿನೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದ ಉಗ್ರರು, ರಹಸ್ಯವನ್ನು ಕಾಪಾಡಲು ಕಾಲಾಂತರದಲ್ಲಿ ಅದನ್ನು 'ರಮೇಶ್ ಮ್ಯಾರೇಜ್'ಗೆ ಪರಿವರ್ತಿಸಿದ್ದರು. ಅದರ ಪ್ರಕಾರ ಮೊದಲು ಪ್ರತಾಪ್ ಹಾಗೂ ಸಂಸದ ಜೋಶಿ ಹತ್ಯೆಗೆ ಮಹೂರ್ತ ನಿಗದಿಪಡಿಸಿದ್ದರು. ಅದಾದನಂತರ ಪತ್ರಿಕೋದ್ಯಮಿ ವಿಜಯ್ ಸಂಕೇಶ್ವರ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಪ್ರಧಾನವಾಗಿ ಗುರಿಯಾಗಿಸಿಕೊಂಡಿದ್ದರು.

ಇನ್ನೂ ಮೂವರ ಬಂಧನ: ಈ ಮಧ್ಯೆ ಸಿಸಿಬಿ ಪೊಲೀಸರು ಆರೋಪಿಗಳ ಮೊಬೈಲ್ ಮತ್ತು ಅಂತರ್ಜಾಲ ತಾಣಗಳಲ್ಲಿ ವಿಹರಿಸುತ್ತಾ, ಕರಾರುವಾಕ್ ಮಾಹಿತಿಯನ್ನು ಕಲೆಹಾಕುತ್ತಿದ್ದರು. ಉಗ್ರರು ಇನ್ನೇನು ಬಲಿಗೆ ಸಿದ್ಧವಾಗಿದ್ದಾರೆ ಎಂದಾಗ ಸದ್ದಿಲ್ಲದೆ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಗ್ರರ ಪಾತಕದ ಜಾಡು ಇಲ್ಲಿಗೇ ಮುಗಿದಿಲ್ಲ. ಸದ್ಯದಲ್ಲೇ ಹುಬ್ಬಳ್ಳಿಯಲ್ಲಿ ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ಉಗ್ರರ ಪ್ರವರ... ನಿರೀಕ್ಷಿಸಿ.

English summary
Bangalore CCB arrest Marriage Pratap terror suspects. English journalist Muti-Ur-Rehman arrested by CCB Bangalore on Aug 29 in Bangalore JC Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X