ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಭಯೋತ್ಪಾದಕ ಕಸಬ್ ಗೆ ಗಲ್ಲೇ ಗತಿ: ಸು.ಕೋರ್ಟ್

By Srinath
|
Google Oneindia Kannada News

kasab-death-sentence-upheld-by-supreme-court
ನವದೆಹಲಿ, ಆಗಸ್ಟ್ 29: ಮುಂಬೈ ದಾಳಿಕೋರ, ಪಾಕ್ ಭಯೋತ್ಪಾದಕ ಅಜ್ಮಲ್ ಕಸಬ್ ಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಸಂಬಂಧ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಕಸಬ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.

ಓಂಬಳೆ ಸಾಹಸ ಸ್ಮರಣೀಯ: ಸಬ್‌ಇನ್ಸ್‌ಪೆಕ್ಟರ್ ತುಕರಾಂ ಓಂಬಳೆ ಅವರು ತಮ್ಮ ಜೀವದ ಹಂಗು ತೊರೆದು ಪೈಶಾಚಿಕವಾಗಿ ದಾಳಿ ಮಾಡುತ್ತಿದ್ದ ಕಸಬ್ ನನ್ನು ಅಕ್ಷರಶಃ ತಬ್ಬಿಹಿಡಿದಿದ್ದರು. ಅವನಿಗೆ ಪರಾರಿಯಾಗಲು ಅವಕಾಶ ನೀಡಿರಲಿಲ್ಲ. ಕಸಬ್ ಬಂಧನವಾಗುತ್ತಿದ್ದಂತೆ ಗುಂಡೇಟಿನಿಂದ ಗಾಯಗೊಂಡಿದ್ದ ತುಕರಾಂ ಓಂಬಳೆ ವೀರ ಸಾವನ್ನಪ್ಪಿದ್ದರು.

166 ಜನರ ಸಾವಿಗೆ ಕಾರಣನಾಗಿರುವ ಕಸಬ್ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ಮೇ.6, 2010 ರಂದು ಮುಂಬೈ ಕೋರ್ಟ್ ನಲ್ಲಿ ಕಸಬ್ ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆದೇಶಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬದುಕುಳಿದಿರುವ ಏಕೈಕ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗಲ್ಲುಶಿಕ್ಷೆಗೆ ಅ. 10 ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು.

'ನಮಗೆ ಬೇರೆ ವಿಧಿಯೇ ಇಲ್ಲ. ಅವನಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯುತ್ತಿದ್ದೇವೆ. ಆರೋಪಿಯು ಎಸಗಿರುವ ಹೀನ ಮತ್ತು ಮೊಟ್ಟಮೊದಲ ಅಪರಾಧವೆಂದರೆ ಭಾರತ ದೇಶದ ವಿರುದ್ಧವೇ ಯುದ್ಧ ನಡೆಸಿದ್ದು. ಆದ್ದರಿಂದ ಅವನು ಗಲ್ಲು ಶಿಕ್ಷೆಗೆ ಅರ್ಹ' ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಅಲಂ ಮತ್ತು ಸಿಕೆ ಪ್ರಸಾದ್ ಅವರ ಸುಪ್ರೀಂ ಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

2008ರ ನವೆಂಬರ್‌ 26ರಂದು ನಡೆದ ಮುಂಬೈ ದಾಳಿ ಹಾಗೂ ತದನಂತರದ ಬೆಳವಣಿಗೆಗಳ ವಿಹಂಗಮ ನೋಟ ಇಲ್ಲಿದೆ.

ನ. 26, 2008: ಕಸಬ್‌ ಮತ್ತು 9 ಉಗ್ರರಿಂದ ಮುಂಬೈ ಮೇಲೆ ದಾಳಿ.

ನ. 27, 2008: ಮಧ್ಯಾಹ್ನ 1.30ರ ಸುಮಾರಿಗೆ ಉಗ್ರ ಕಸಬ್‌ನ ಬಂಧನ ಹಾಗೂ ನಾಯರ್‌ ಆಸ್ಪತ್ರೆಗೆ ದಾಖಲು.

ನ. 29, 2008: ಉಗ್ರರ ವಶದಲ್ಲಿದ್ದ ಎಲ್ಲ ಕಟ್ಟಡಗಳ ಮರುವಶ, 9 ಉಗ್ರರ ಹತ್ಯೆ.

ನ. 30, 2008: ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಉಗ್ರ ಕಸಬ್‌.

ಡಿ. 27-28, 2008: ಗುರುತು ಪತ್ತೆಗಾಗಿ ಪರೇಡ್‌ ನಡೆಸಿದ ಪೊಲೀಸರು.

ಜ. 13, 2009: ಮುಂಬೈ ದಾಳಿಯ ವಿಚಾರಣೆಯ ನ್ಯಾಯಾಧೀಶರಾಗಿ ಎಂಎಲ್‌ ತಹಲ್ಯಾನಿ ನೇಮಕ.

ಜ. 16, 2009: ಕಸಬ್‌ನ ವಿಚಾರಣೆಗಾಗಿ ಆರ್ಥರ್‌ ರೋಡ್‌ ಜೈಲಿನ ಆಯ್ಕೆ.

ಫೆ. 5, 2009: ಕುಬೇರ್‌ ಹಡಗಿನಲ್ಲಿ ಪತ್ತೆಯಾದ ವಸ್ತುಗಳಿಗೂ ಕಸಬ್‌ನ ಡಿಎನ್‌ಎ ಮಾದರಿಗೂ ಹೋಲಿಕೆ.

ಫೆ. 20/21, 2009: ಮ್ಯಾಜಿಸ್ಟ್ರೇಟ್‌ ಮುಂದೆ ತಪ್ಪೊಪ್ಪಿಕೊಂಡ ಕಸಬ್‌.

ಫೆ. 22, 2009: ವಿಶೇಷ ಸರಕಾರಿ ಅಭಿಯೋಜಕರಾಗಿ ಉಜ್ವಲ್‌ ನಿಕ್ಕಂ ನೇಮಕ.

ಫೆ. 25, 2009: ಕಸಬ್‌ ಹಾಗೂ ಇತರೆ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ.

ಎ. 1, 2009: ಕಸಬ್‌ ಪರ ವಕೀಲರಾಗಿ ಅಂಜಲಿ ವಾಗ್ಮೋರೆ ನೇಮಕ.

ಎ. 15, 2009: ಕಸಬ್‌ ಪರ ವಾದದಿಂದ ಹಿಂದೆ ಸರಿದ ಅಂಜಲಿ.

ಎ. 16, 2009: ಕಸಬ್‌ ಪರ ವಕೀಲರಾಗಿ ಅಬ್ಟಾಸ್‌ ಖಾಜ್ಮಿ ನೇಮಕ.

ಎ. 17, 2009: ಕಸಬ್‌ನ ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಧೀಶರ ಮುಂದಿಟ್ಟ ಪೊಲೀಸರು. ಕಸಬ್‌ನಿಂದ ನಿರಾಕರಣೆ.

ಎ. 20, 2009: ಕಸಬ್‌ ವಿರುದ್ಧ 312 ಎಣಿಕೆಗಳಲ್ಲಿ ಅಪರಾಧ ಸಾಬೀತುಪಡಿಸಿದ ಸರಕಾರಿ ಅಭಿಯೋಜಕರು.

ಎ. 29, 2009: ಕಸಬ್‌ ವಯಸ್ಕ, ತಜ್ಞರ ಅಭಿಪ್ರಾಯ.

ಮೇ 6, 2009: ಕಸಬ್‌ ವಿರುದ್ಧ ದೋಷಾರೋಪಗಳನ್ನು ಹೊರಿಸಿದ ಪೊಲೀಸರು, ಆದರೆ ಆರೋಪಗಳನ್ನು ನಿರಾಕರಿಸಿದ ಕಸಬ್‌.

ಮೇ 8, 2009: ಕಸಬ್‌ನನ್ನು ಗುರುತಿಸಿದ ಮೊದಲ ಪ್ರತ್ಯಕ್ಷದರ್ಶಿ.

ಜೂ. 23, 2009: ಹಫೀಜ್‌ ಸಯೀದ್‌, ಝಾಕಿ ಉರ್‌ ರೆಹಮಾನ್‌ ಲಖ್ವಿ ಸೇರಿದಂತೆ 22 ಮಂದಿ ಉಗ್ರರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ.

ನ. 30, 2009: ಹಿಂದೆ ಸರಿದ ಕಸಬ್‌ ಪರ ವಕೀಲ ಅಬ್ಟಾಸ್‌ ಖಾಜ್ಮಿ.

ಡಿ. 1, 2009 : ಖಾಜ್ಮಿ ಸ್ಥಾನದಲ್ಲಿ ಕೆ.ಪಿ. ಪವಾರ್‌ ನೇಮಕ.

ಡಿ. 16, 2009: 26/11 ದಾಳಿ ಪ್ರಕರಣದ ವಿಚಾರಣೆ ಪೂರ್ಣ.

ಡಿ. 18, 2009: ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಕಸಬ್‌.

ಮಾ. 31, 2010: ಪ್ರತಿವಾದ ಪೂರ್ಣ, ತೀರ್ಪನ್ನು 2010ರ ಮೇ 3ಕ್ಕೆ ಕಾದಿರಿಸಿದ ವಿಶೇಷ ನ್ಯಾಯಾಧೀಶ ಎಂ.ಎಲ್‌. ತಹಲ್ಯಾನಿ.

ಮೇ 3, 2010: ಕಸಬ್‌ ವಿರುದ್ಧ ಆರೋಪ ಸಾಬೀತು. ಸಬಾವುದ್ದೀನ್‌ ಮತ್ತು ಫ‌ಹೀಮ್‌ ಅನ್ಸಾರಿ ಖುಲಾಸೆ.

ಮೇ 6, 2010: ಕಸಬ್‌ಗ ಮರಣದಂಡನೆ ವಿಧಿಸಿ, ತೀರ್ಪಿತ್ತ ನ್ಯಾಯಾಲಯ.

ಫೆ. 21, 2011: ಕಸಬ್‌ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್‌.

ಮಾರ್ಚ್‌, 2011: ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ಕಸಬ್‌ನಿಂದ ಸುಪ್ರೀಂ ಕೋರ್ಟ್‌ಗೆ ಪತ್ರ.

ಅ. 10, 2011: ಪಾಕಿಸ್ತಾನಿ ಉಗ್ರ ಕಸಬ್‌ನ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್‌ನಿಂದ ತಡೆ.

ಅ. 10, 2011: ರೋಬೋಟ್‌ ಮಾದರಿಯಲ್ಲಿ ನನ್ನ ಬ್ರೈನ್‌ವಾಶ್‌ ಮಾಡಲಾಗಿದೆ- ಕಸಬ್‌ನಿಂದ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ, ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ಕೋರಿಕೆ.

ಅ. 18, 2011: ಬಾಂಬೆ ಹೈಕೋರ್ಟ್‌ನಿಂದ ನಿರಪರಾಧಿಗಳೆಂದು ಸಾಬೀತಾಗಿದ್ದ ಈರ್ವರು ಭಾರತೀಯ ಉಗ್ರರ ವಿರುದ್ಧ ಮಹಾರಾಷ್ಟ್ರ ಸರಕಾರದ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ ಕೋರ್ಟ್‌. ಇಬ್ಬರು ಭಾರತೀಯ ಆರೋಪಿಗಳಿಗೆ ದೋಷಮುಕ್ತಿ.

ಜ. 31, 2012: ಪ್ರಕರಣದ ವಿಚಾರಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲಾಗಿಲ್ಲ - ಸುಪ್ರೀಂಗೆ ಕಸಬ್‌ ದೂರು.

ಫೆ. 23, 2012: ಮುಂಬೈ ದಾಳಿ ಕುರಿತಾಗಿನ ಎಲ್ಲ ಸಾಕ್ಷ್ಯಾಧಾರಗಳನ್ನು ವೀಕ್ಷಿಸಿದ ಸುಪ್ರೀಂ ಕೋರ್ಟ್‌.

ಎ. 25, 2012: ಎರಡೂವರೆ ತಿಂಗಳ ವಿಚಾರಣೆಯ ಬಳಿಕ ತೀರ್ಪನ್ನು ಕಾದಿರಿಸಿದ ಸುಪ್ರೀಂ ಕೋರ್ಟ್‌..

ಆ. 29, 2012: ಉಗ್ರ ಕಸಬ್‌ಗ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌...

English summary
Supreme Court uphelds death sentence to Ajmal Kasab given by Bombay High Court,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X