ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ..12 ಗಂಟೆ ವಿದ್ಯುತ್!

ಗಡಿಭಾಗದ ನಾಡು ಬೀದರ್ ಗೆ ಭಾನುವಾರ(ಆ.26) ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಭಾಷಣದುದ್ದಕ್ಕೂ ಮಾಜಿ ಸಿಎಂಗಳ ಮೇಲೆ ಹರಿಹಾಯ್ದರು. ಸಾಲದ್ದಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಮೇಲೂ ಆರೋಪ ಹೊರೆಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ನಾಚಿಕೆಗೆಟ್ಟವನು, ಮಾನ ಮರ್ಯಾದೆ ಇಲ್ಲದ ವ್ಯಕ್ತಿ ಎಂದು ಜರೆದರು. ಅಧಿಕಾರಕ್ಕಾಗಿ ಜನರನ್ನು ಮರಳು ಮಾಡುವುದೇ ಬಿಎಸ್ ವೈ ಕಾಯಕ. ರಾಜ್ಯ ರಾಜಕಾರಣ ಪರಿಸ್ಥಿತಿ ಹದಗೆಡುವುದರಲ್ಲಿ ಯಡಿಯೂರಪ್ಪ ಬಹುದೊಡ್ಡ ಪಾತ್ರವಹಿಸಿದ್ದಾರೆ ಎಂದರು>
ನಂತರ ಬಿಜೆಪಿ ಶಾಸಕರ ಬಗ್ಗೆ ಹೇಳುತ್ತಾ, ಪ್ರಸ್ತುತ ಬಿಜೆಪಿಯಲ್ಲಿರುವ 33 ಪ್ರಮುಖ ಶಾಸಕರಲ್ಲಿ ಒಬ್ಬರೂ ಪ್ರಮಾಣಿಕರು ಕಾಣಿಸುತ್ತಿಲ್ಲ. ಅಧಿಕಾರದ ಮೋಹಕ್ಕೆ ಬಿದ್ದು ಜನರಿಗೆ ವಂಚನೆ ಮಾಡುವುದೇ ಇವರ ಕೆಲಸ ಎಂದರು.
ನಂತರ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮೇಲೆ ಹರಿಹಾಯ್ದ ಸಿದ್ದರಾಮಯ್ಯ, ಆಕೆ ಏನು ಪ್ರಮಾಣಿಕಳಲ್ಲ, ಕೊಡಗಿನಲ್ಲಿ 800 ಎಕರೆ ಭೂಮಿ ನುಂಗಿ ಹಾಕಿದ ಪ್ರಕರಣ ಹಾಗೇ ಉಳಿದಿದೆ. ಆರೋಪಗಳು ಸುಮ್ಮನೆ ಕೇಳಿ ಬರುವುದಿಲ್ಲ ಎಂದಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಒಬ್ಬ ಅವಕಾಶ ರಾಜಕಾರಣಿ, ಕುರ್ಚಿಗಾಗಿ ಮೋಸ ಮಾಡುವುದನ್ನು ಚೆನ್ನಾಗಿ ಕಲಿತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಿದ್ದ ಎಂದು ಸಿದ್ದರಾಮಯ್ಯ ಹೇಳಿದರು.
ಆಶ್ವಾಸನೆಗಳು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 12 ಗಂಟೆ ವಿದ್ಯುತ್ ಹರಿಸುತ್ತೇವೆ.ಪ್ರತಿ ಕುಟುಂಬಕ್ಕೆ 3 ರುಪಾಯಿಗೆ 25 ಕೆಜಿ ಅಕ್ಕಿ ವಿತರಿಸಲಾಗುವುದು. ಬಡವರ, ದಲಿತರ ಪ್ರತಿ ದೂರನ್ನು ತಕ್ಷಣವೇ ಪರಿಹರಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಪ್ರತಿನಿತ್ಯ 8500 ಮೆ.ವ್ಯಾ.ವಿದ್ಯುತ್ ಬೇಡಿಕೆ ಇದ್ದು, ಪ್ರಸ್ತುತ 7500 ಮೆ.ವ್ಯಾ. ವಿದ್ಯುತ್ ಒದಗಿಸಲಾಗುತ್ತಿದೆ. 1 ಸಾವಿರ ಮೆ.ವ್ಯಾ.ವಿದ್ಯುತ್ ಕೊರತೆ ಇದೆ. ಪ್ರತಿನಿತ್ಯ 1200 ಮೆ.ವ್ಯಾ.ವಿದ್ಯುತ್ ಖರೀದಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ 2 ಗಂಟೆ ತ್ರಿ ಫೇಸ್ ಹಾಗೂ ಸಂಜೆ 6 ರಿಂದ ಬೆಳಗ್ಗೆ 6 ರ ವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 12 ಗಂಟೆ ವಿದ್ಯುತ್ ಎಲ್ಲಿಂದ ನೀಡಲಿದೆ ಎಂದು ಶೋಭಾ ಮೇಡಂ ಪ್ರಶ್ನಿಸಲು ಸಿದ್ಧರಾಗಿದ್ದರಂತೆ.
ಇತ್ತೀಚೆಗೆ 1500MW ವಿದ್ಯುತ್ ನೀಡುವುದಾಗಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಆಶ್ವಾಸನೆ ನೀಡಿ ಶೋಭಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಸಿದ್ದರಾಮಯ್ಯ ಅವರ ಸರದಿಯಾಗುವ ನಿರೀಕ್ಷೆಯಿದೆ.












Click it and Unblock the Notifications