ಮುಡಾ: ಜೆಡಿಎಸ್ ಶಾಸಕರ ಮೇಲೆ ಲೋಕಾ FIR

ವಕೀಲ ಟಿ.ಎಸ್. ಸತ್ಯಾನಂದ ಅವರು ನೀಡಿದ್ದ ದೂರಿನ ಮೇರೆಗೆ, ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ರಮೇಶ ಬಂಡಿಸಿದ್ದೇಗೌಡ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಮಾಜಿ ನಾಮ ನಿರ್ದೇಶಿತ ಸದಸ್ಯ ಎಂ.ಜೆ. ಚಿಕ್ಕಣ್ಣ, ಮಾಜಿ ಆಯುಕ್ತ ಉಪೇಂದ್ರ ನಾಯಕ್, ಟಿ. ನಿಸಾರ್ ಅಹ್ಮದ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಡಾ ವತಿಯಿಂದ ಕೆರೆ ಅಂಗಳದಲ್ಲಿ ನಿರ್ಮಾಣ ಮಾಡಲಾಗಿದ್ದ ವಿವೇಕಾನಂದ ನಗರದಲ್ಲಿನ ನಿವೇಶನಗಳ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಮಂಡ್ಯ ಮುಡಾದಿಂದ ಸುಮಾರು 107 ನಿವೇಶನಗಳನ್ನು ನಿಮಯ ಮೀರಿ ನೀಡಲಾಗಿತ್ತು. ಮುಡಾ ಅಧ್ಯಕ್ಷೆ, ಬಿಜೆಪಿಯಿಂದ ನಾಮಾಂಕಿತರಾದ ವಿದ್ಯಾ ನಾಗೇಂದ್ರ ಅವರನ್ನು ಕೂಡಾ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಸತ್ಯಾನಂದ ಅವರು ದೂರು ಸಲ್ಲಿಸಿದ್ದರು.
ಮಂಡ್ಯ ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಅವರ ಕುಟುಂಬ ವರ್ಗದ ಮೇಲೆ ಮೊಕದ್ದಮೆ ದಾಖಲಿಸಲಾಗಿತ್ತು.
ಕುಮಾರಣ್ಣ ಏನಂತೀರಾ?: ಶ್ರೀರಂಗಪಟ್ಟಣ ಶಾಸಕ ರಮೇಶ್, ತನ್ನ ತಾಯಿ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮರಿಗೆ (50 X 80), ಪತ್ನಿ ಸುಮತಿಗೆ (60 X 40) ಹಾಗೂ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜುರ ಪತ್ನಿ ನಾಗಮ್ಮರಿಗೆ (50 X 80)ನಿವೇಶನ ನೀಡಿದ್ದಾರೆ.
ಮೈಸೂರಿನಲ್ಲಿ 2007ರಲ್ಲಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಮಂಜೂರು ಮಾಡಿತ್ತು. ಇದೇ ಶಾಸಕರು ಬೆಂಗಳೂರಿನಲ್ಲಿ ನಿವೇಶನ ಪಡೆದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇಷ್ಟೇ ಅಲ್ಲ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ನಿವೇಶನ ಕಬಳಿಸಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯದ ಹಲವು ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣ ಗಳನ್ನು ಬಯಲಿಗೆಳೆದಿದ್ದೇವೆ ಎಂದು ಬೀಗುವ ಕುಮಾರಸ್ವಾಮಿ ತನ್ನ ಸ್ವಪಕ್ಷೀಯ ಶಾಸಕರ ಭೂ ಸ್ವಾಹದ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಸತ್ಯಾನಂದ ಪ್ರಶ್ನಿಸಿದ್ದಾರೆ.












Click it and Unblock the Notifications