ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಣಿಯ ಸಾವು ಭರಿಸದೆ ಧರೆಗೆ ಉರುಳಿದ ಅಪ್ಪ

By Prasad
|
Google Oneindia Kannada News

Father dies unable to bear death of son
ಬೆಂಗಳೂರು, ಆ. 19 : ಇದೇನು ಆಕಸ್ಮಕವೋ ಅಥವಾ ವಿಧಿ ಲಿಖಿತ ಬರಹವೋ ಅಪಘಾತಕ್ಕೀಡಾಗಿದ್ದ ಮಗನ ಸಾವಿನ ನೋವನ್ನು ಭರಿಸಲಾಗದೆ ಅಪ್ಪನೂ ಹೃದಯಾಘಾತಕ್ಕೆ ಈಡಾಗಿ ಮೃತನಾದ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಭಾನುವಾರ ಘಟಿಸಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗನ ಶವವನ್ನು ನೋಡುತ್ತಲೇ ಅಪ್ಪನೂ ಸಾವಿಗೀಡಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಂಜೇಗೌಡರೇ ಹೃದಯಾಘಾತದಿಂದ ಸಾವಿಗೀಡಾದ ದುರ್ದೈವಿ. ಮಗನ ಜೊತೆಗೆ ಗಂಡನ ಶವಸಂಸ್ಕಾರವನ್ನೂ ಮಾಡಬೇಕಾದ ದೌರ್ಭಾಗ್ಯ ಮಂಜೇಗೌಡರ ಹೆಂಡತಿಗೆ ಒದಗಿಬಂದಿದೆ.

ಕುಟುಂಬಕ್ಕೆ ಆಧಾರವಾಗಿದ್ದ ಧರಣಿ (21) ದುಡಿಮೆಗಾಗಿ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತ ಆಟೋ ಚಾಲನೆಯನ್ನು ಮಾಡಿ ಇಡೀ ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ. ಶನಿವಾರ ರಾತ್ರಿ ಮೆಜೆಸ್ಟಿಕ್‌ನ ಹಳೆ ಕಪಾಲಿ ಚಿತ್ರಮಂದಿರವಿದ್ದ ಸ್ಥಳದಲ್ಲಿ ಆಟೋ ನಿಲ್ಲಿಸಿ ಊಟಕ್ಕೆಂದು ರಸ್ತೆ ದಾಟುವಾಗ ಧರಣಿಗೆ ನಂದಿನಿ ಟ್ರಾವಲ್ಸ್ ಬಸ್ ಬಡಿದು ಗಾಯಗೊಂಡಿದ್ದಾನೆ.

ಈ ಘಟನೆ ನಡೆದಿರುವುದು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ, ಉಪ್ಪಾರ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ಧರಣಿಯನ್ನು ಕೂಡಲೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಜೀವನ್ಮರಣದ ಮಧ್ಯೆ ಹೋರಾಡಿದ ಧರಣಿ ರಾತ್ರಿ 3.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾನೆ. ರಾತ್ರಿಯೇ ಧರಣಿಯ ಅಪ್ಪ ಮಂಜೇಗೌಡರು ಬೆಂಗಳೂರಿಗೆ ಧಾವಿಸಿದ್ದಾರೆ.

ಆದರೆ, ಅವರಿಗೆ ಮಗ ಸತ್ತಿರುವ ಸಂಗತಿಯನ್ನು ರಾತ್ರಿ ತಿಳಿಸದೆ ಬೆಳಿಗ್ಗೆ 6 ಗಂಟೆಗೆ ತಿಳಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಹೃದಯಾಘಾತಕ್ಕೆ ಈಡಾದ ಮಂಜೇಗೌಡರು ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ. ಇವರಿಬ್ಬರ ಸಾವು ಧರಣಿಯ ತಾಯಿಯ ಮೇಲೆ ಸಿಡಿಲಿನಂತೆ ಎರಗಿದೆ.

ಮಂಜೇಗೌಡ ಮತ್ತು ಅವರ ಪತ್ನಿ ಖಾಯಿಲೆಯಿಂದ ಬಳಲುತ್ತಿದ್ದರು. ಧರಣಿಯ ಅಣ್ಣ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಧರಣಿ ನಾಲ್ಕಾಸು ಗಳಿಸಲೆಂದು ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಓದನ್ನು ಅಲ್ಲಿಗೇ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು.

ಮೊದಲೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ ಮಂಜೇಗೌಡರ ಕುಟುಂಬ ಇವರಿಬ್ಬರ ಸಾವಿನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮಂಜೇಗೌಡರ ಕುಟುಂಬಕ್ಕೆ ಸರಕಾರ ಮತ್ತು ಅಪರಾಧವೆಸಗಿದ ಖಾಸಗಿ ಬಸ್ ಸಂಸ್ಥೆಯ ಮಾಲಿಕ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಧರಣಿಯ ಸ್ನೇಹಿತರು ಒತ್ತಾಯಿಸುತ್ತಿದ್ದಾರೆ.

English summary
In a heart wrenching incident father died of heart attack unable to bear the death of his bread earning son in an accident. The incident happened in Bangalore at Victoria hospital. Father is from Chennarayapattana and his son was working in Bangalore as auto driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X