ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಗೌಡರು ಬೀದಿ ನಾಯಿ ಅಂದಿದ್ದು ಯಾರಿಗೆ?

By Srinath
|
Google Oneindia Kannada News

sadananda-gowda-calls-his-political-opponents-dog
ಬೆಂಗಳೂರು, ಆ. 16: ಶೇಕಡಾ ನೂರರಷ್ಟು ಪ್ರಾಮಾಣಿಕರು ಸರಕಾರದಲ್ಲೂ ಇಲ್ಲ, ನ್ಯಾಯಾಂಗದಲ್ಲೂ ಇಲ್ಲ ಎಂದು ಎಲ್ಲರನ್ನೂ ಸಾರಾಸಗಟಾಗಿ ಹರಾಜಿಗೆ ಹಾಕಿದ್ದ ಸನ್ಮಾನ್ಯ ಸದಾನಂದ ಗೌಡರು ಇದೀಗ ತಮ್ಮ ಪುರಾತನ ಮಿತ್ರ ಯಡಿಯೂರಪ್ಪ ಅವರಿಗಿಂತ ಕೆಳಗೆ ಇಳಿಜಾರಿದ್ದಾರೆ.

ಮೊನ್ನೆ ಫ್ರೆಂಡ್ ಶಿಪ್ ದಿನದಂದು ತಮ್ಮದು ಜನ್ಮ ಜನ್ಮದ ಸ್ನೇಹ ಎಂದು ಒಟ್ಟಿಗೆ ಕುಳಿತು ಸಿನಿಮಾ ನೋಡಿದ್ದ ಸನ್ಮಿತ್ರ ಸದಾನಂದ ಗೌಡರು ಮಾರನೆಯ ದಿನವೇ ತಮ್ಮ ಮಟ್ಟವೇನು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.

'ದೇವ' ಪ್ರೇರಣೆಯಿಂದ ತಮ್ಮ ರಾಜಕೀಯ ವಿರೋಧಿಗಳನ್ನು (ಅಂದರೆ ಯಡಿಯೂರಪ್ಪ ಅವರ ಬೆಂಬಲಿಗರು ಎಂದು ಧಾರಾಳವಾಗಿ ಗುರುತಿಸಬಹುದು) 'ಬೀದಿ ನಾಯಿ' ಎಂದು ಜರಿದ ಸನ್ಮಾನ್ಯ ಮಾಜಿ ಸಿಎಂ ಸದಾನಂದ ಗೌಡರು 'ತಾನು ಈಗಾಗಲೇ ಒಂದು ನಿರ್ದಿಷ್ಟದ ಜನಾಂಗದ ಮುಕುಟವಿಲ್ಲದ ಮಹಾರಾಜನಾಗಿರುವೆ' ಎಂಬ ಭ್ರಮೆಗೆ ಸಿಲುಕಿದ್ದಾರೆ.

ಇಲ್ಲಿ ಮುಖ್ಯವಾಗಿ ಈ ಮಾಜಿ ಸಿಎಂಗಳ ಕಾದಾಟ ಅಧಿಕಾರಕ್ಕಾಗಿ ಎಂದು ಗುರುತಿಸಿದಾಗ ಸದಾನಂದರು ಯಡಿಯೂರಪ್ಪಗಿಂತ ಭಿನ್ನ ಎಂದು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಏಕೆಂದರೆ ತಮ್ಮ ಅಧಿಕಾರವನ್ನು ಕಿತ್ತುಕೊಂಡರು ಎಂಬ ಒಂದೇ ಉದ್ದೇಶಕ್ಕೆ ಸದಾನಂದರು ಗೋಳಾಡಿದ್ದು.

ಅಧಿಕಾರ ತ್ಯಜಿಸುವ ದಿನ ಅವರ ಗೋಳಾಟ... ದಿಢೀರನೆ ಒಂದು ಸಮುದಾಯದ ಬೆಂಬಲದಿಂದ ಏಕ್ ದಿನ್ ಕಾ ಸುಲ್ತಾನ್ ಆಗಿದ್ದು... ಇದನ್ನೆಲ್ಲ ನೋಡಿದಾಗ ಅನುಮಾನವೇ ಬೇಡ ಸದಾನಂದ ಗೌಡ, ಯಡಿಯೂರಪ್ಪನ ಪಡಿಯಚ್ಚು ಎಂಬುದು ಶ್ರುತಪಡುತ್ತದೆ.

ಆ ಯಡಿಯೂರಪ್ಪ ಸಹ ಹೀಗೇ ಅಲ್ಲವೇ ಅಧಿಕಾರಕ್ಕಾಗಿ ಹಪಿಹಪಿಸುವುದು. ಅದಕ್ಕಾಗಿ ಯಾವುದೇ ಮಟ್ಟಕ್ಕೂ ಇಳಿಜಾರುವ ಮನಸ್ಥಿತಿಯವರು. ಅದೇ ಸಂತತಿಯ ಕೂಸು ಈ ಸದಾನಂದ ಗೌಡರು ಎಂಬುದರಲ್ಲಿ ಎರಡು ಮಾತಿಲ್ಲ.

ಆರು ತಿಂಗಳ ನಂತರ ಅಧಿಕಾರ ಬಿಟ್ಟುಕೊಡಪ್ಪಾ ಎಂದು ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳ್ಳರಿಸಿದ್ದ ಸದಾನಂದ ಅದಾದ ನಂತರವೂ ತನಗೆ ಅಧಿಕಾರ ವಾಪಸ್ ನೀಡದಿದ್ದಾಗ (ರಾಜಕೀಯ ಒತ್ತಡಗಳು ಏನೇ ಇರಬಹುದು), ಇಂದು ತಾವು 'ಬೀದಿ ನಾಯಿ' ಎಂದು ಸಂಭೋದಿಸಿದಂತೆ ಯಡಿಯೂರಪ್ಪ ಏನಾದರೂ '---ಯನ್ನು ತಗೊಂಡ್ಹೋಗಿ ಸಿಂಹಾಸನದಲ್ಲಿ ಕೂಡಿಸಿದಂಗಾಯ್ತು' ಎಂದಿದ್ದರಾ?

ಅಂದು ಅಧಿಕಾರ ವಾಪಸ್ ಕೊಡಲು ಸದಾನಂದರು ಎಷ್ಟು ಮೊಂಡಾಟವಾಡಿದರೋ ಅದನ್ನು ಕೊಡಮಾಡಿದ್ದ ಯಡಿಯೂರಪ್ಪ ಅದಕ್ಕಿಂತ ಮೊಂಡಾಟ, ಕಳ್ಳಾಟ ಆಡುವುದರಲ್ಲಿ ಸಿದ್ಧಹಸ್ತರು ಎಂಬುದನ್ನು ತಿಳಿಯದಷ್ಟು ಸದಾನಂದ ಗೌಡರೇನೂ ಅಮಾಯಕರಲ್ಲ, ಅಲ್ವೇ.

'ದೇವ'ಪ್ರೇರಣೆ: ರಾಜಕಾರಣಿಗಳು ಅಂದರೆ ಎಲ್ಲವನ್ನೂ ಬಿಟ್ಟವರು ಎಂಬುದು ಇತ್ತೀಚಿಗೆ ಕೆಲವು ಅತಿರಥ ಮಹಾರಥ ರಾಜಕಾರಣಿಗಳು ಮಾತನಾಡಿದ್ದನ್ನು ನೋಡಿದರೆ ಹೆಚ್ಚು ಮನನವಾಗುತ್ತದೆ. ಉದಾಹರಣೆಗೆ ಅಕ್ರಮ ಸಂತಾನ, ಗೂಬೆ ಮುಂಡೇದು, ಐರನ್ ಲೆಗ್, ಕಾಮುಕ, ಶನಿ ಸಂತಾನ, ಪೀಡೆ, ಗೂಂಡಾ ಮಂತ್ರಿ ಮುಂತಾದ ಆಣಿಮುತ್ತುಗಳನ್ನು ಉದುರಿಸಿದ್ದಾರೆ.

ಪ್ರಸ್ತುತ ಯಾವುದೇ ಅಧಿಕಾರವೂ ಇಲ್ಲದೆ ದಿನದೂಡುತ್ತಿರುವ ಸದಾನಂದರು ಬಹುಶಃ ಮೇಲಿನ ಆಣಿಮುತ್ತುಗಳಿಂದ ಪ್ರೇರಿತರಾಗಿ ಆಡಬಾರದ ಮಾತನ್ನೇ ಆಡಿದ್ದಾರೆ. ಹೀಗೆ 'ಬೀದಿ ನಾಯಿ' ಅನ್ನುವುದಕ್ಕೆ ಮತ್ತೊಂದು 'ದೇವ'ಪ್ರೇರಣೆಯೂ ಇರಬಹುದು.

ಮುಖ್ಯಮಂತ್ರಿಯ ಅಧಿಕೃತ ನಿವಾಸ 'ಕೃಷ್ಣಾ'ದಿಂದ ಹೊರಬಿದ್ದು, ರೇಸ್ ಕೋರ್ಸ್ ರಸ್ತೆಯಲ್ಲಿದ್ದ (ಸಂಖ್ಯೆ 2) ಬಹುಮುಖ್ಯ ನಿವಾಸವೊಂದನ್ನು ದಾಟಿಕೊಂಡು ರೇಸ್ ಗೆ ಬಿದ್ದವರಂತೆ ಪದ್ಮನಾಭನಗರದತ್ತ ಅಶ್ವವೇಗದಲ್ಲಿ ಹೋಗಿಬಂದು ಮಾಡುತ್ತಿದ್ದಾರೆ ಎಂಬುದು ಖುದ್ದು ಯಡಿಯೂರಪ್ಪನವರ ಕೊರಗಾಗಿತ್ತು.

ಬಹುಶಃ ಸದಾನಂದರು ಹಾಗೆ ಹಾಟ್ ಲೈನ್ ಸಂಪರ್ಕದಲ್ಲಿದ್ದುದ್ದರಿಂದಲೇ 'ಬೀದಿ ನಾಯಿ' ಬೈಗುಳ ಪ್ರಯೋಗ ಮಾಡಿದ್ದಾರೆ ಅನಿಸುತ್ತದೆ. ಏಕೆಂದರೆ ಮಾಜಿ ಪ್ರಧಾನಿಯೊಬ್ಬರು ಪದ್ಮನಾಭನಗರದಿಂದಲೇ ಅಲ್ಲವೇ 'ಬಾಸ್ಟರ್ಡ್' ಅಂದಿದ್ದು.

ಅಂದು ಅವರು ತಾನು ಮಾಜಿ ಪ್ರಧಾನಿ ಎಂಬುದನ್ನು ಮರೆತು ಆ ಮಾತು ಹೇಳಿದ್ದರು. ಇಂದು ಇವರು ತಾನು ಮಾಜಿ ಸಿಎಂ ಎಂಬುದನ್ನು ಮರತು ಹಾಗಂದಿದ್ದಾರೆ. ಫಲಾನುಭವಿ ಮಾತ್ರ ಇವರೊಬ್ಬರೇ.

English summary
As the Friend Ship Day special former chief ministers B S Yeddyurappa and D V Sadananda Gowda had watched a Kannada movie together. But next day pointing to BSY followers DV Sadananda Gowda called his political opponents as dog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X