ಅಸ್ಸಾಂ ಬೆಂಬಲಿಸಿ ಬೆಂಗಳೂರು ಮುಸ್ಲಿಂರ ಮೆರವಣಿಗೆ

ಬೆಂಗಳೂರು ಅತ್ಯಂತ ಸುರಕ್ಷಿತ ನಗರವಾಗಿದ್ದು, ಇಲ್ಲಿಯೇ ಇರುವಂತೆ ರಾಜ್ಯ ಸರಕಾರ ಮನವಿ ಮಾಡಿದೆ. ಬೆಂಗಳೂರಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಲಾಠಿ ಹಿಡಿದು ಅಸ್ಸಾಂ ಜನರ ರಕ್ಷಣೆಗೆ ನಿಂತಿದ್ದಾರೆ. ಅಸ್ಸಾಂನಲ್ಲಿ ಬಾಂಗ್ಲಾ ದೇಶದಿಂದ ನುಸುಳಿರುವ ಮುಸ್ಲಿಂ ಸಮುದಾಯದ ಮೇಲೆ ದಳ್ಳುರಿ ನಡೆಯುತ್ತಿದ್ದರೂ, ಈಗ ಬೆಂಗಳೂರಿನಲ್ಲಿರುವ ಮುಸ್ಲಿಂ ಬಂಧುಗಳೇ ಅಸ್ಸಾಂ ಜನರ ಬೆಂಬಲಕ್ಕೆ ನಿಂತಿದ್ದಾರೆ.
ಬಲ್ಲ ಮೂಲಗಳ ಪ್ರಕಾರ, ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಮುಸ್ಲಿಂ ನಾಯಕರ ನಿಯೋಗ ಬೆಂಗಳೂರು ಜಿಲ್ಲಾಧಿಕಾರಿ ಎಮ್.ಕೆ. ಅಯ್ಯಪ್ಪ ಅವರನ್ನು ಭೇಟಿ ಮಾಡಿ ಅಸ್ಸಾಂ ಜನತೆ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಲಿದ್ದಾರೆ. ನಂತರ 5 ಗಂಟೆಗೆ ಮಹಾತ್ಮಾ ಗಾಂಧಿ ಪ್ರತಿಮೆಯಿಂದ ಸದ್ಭಾವನಾ ನಡಿಗೆ ಆಯೋಜಿಸಿದ್ದಾರೆ.
ಗುರುವಾರವೇ ರೈಲು ನಿಲ್ದಾಣಕ್ಕೆ ತೆರಳಿದ್ದ, ಸ್ಟುಡೆಂಟ್ ಇಸ್ಲಾಮಿಕ್ ಸಂಘಟನೆ (ಎಸ್ಐಓ)ಗೆ ಸೇರಿದೆ ಯುವಕರು "ಆತ್ಮೀಯ ಆಸ್ಸಾಮಿ ಸ್ನೇಹಿತರೆ, ದಯವಿಟ್ಟು ಬೆಂಗಳೂರು ಬಿಟ್ಟು ತೆರಳಬೇಡಿ. ನಿಮ್ಮನ್ನು ನಾವು ಪ್ರೀತಿಸುತ್ತೇವೆ" ಎಂಬ ಫಲಕಗಳನ್ನು ಹಿಡಿದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ರಂಜಾನ್ ದಿನ ಶಾಂತಿ ನಡಿಗೆ : ರಂಜಾನ್ ದಿನವಾದ ಆಗಸ್ಟ್ 20ರಂದು ಮುಸ್ಲಿಂ ಸಮುದಾಯದವರು ಮತ್ತು ನಗರದಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯದ ನಾಗರಿಕರು ಒಟ್ಟಾಗಿ, ಹಿಂಸೆಯ ವಿರುದ್ಧ ಶಾಂತಿ ನಡಿಗೆಯನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಈ ನಡಿಗೆಯ ರೂಪುರೇಷೆಗಳು ಸಿದ್ಧವಾಗುತ್ತಿವೆ.
ನಿಲ್ಲದ ಅಸ್ಸಾಮಿಗಳ ಗುಳೆ : ಕರ್ನಾಟಕದ ಮುಖ್ಯಮಂತ್ರಿ, ಗೃಹ ಸಚಿವ, ಅಸ್ಸಾಂ ಮುಖ್ಯಮಂತ್ರಿ, ಆರೆಸ್ಸೆಸ್ಸ್ ಸಂಘಟಕರು, ಮುಸ್ಲಿಂ ನಾಯಕರುಗಳಿಂದ ಬೆಂಗಳೂರು ಬಿಟ್ಟು ತೆರಳದಂತೆ ಮನವಿಗಳು ಬಂದಿದ್ದರೂ ಅಸ್ಸಾಂ ನಾಗರಿಕರು ಬೆಂಗಳೂರು ಬಿಟ್ಟು ತೆರಳುತ್ತಲೇ ಇದ್ದಾರೆ. ಕರ್ನಾಟಕದಿಂದ ಮಾತ್ರವಲ್ಲಿ ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಈಶಾನ್ಯ ಭಾರತದ ಜನರು ಗುಳೆ ಹೊರಟಿದ್ದಾರೆ.












Click it and Unblock the Notifications