50 ವರ್ಷದ ರಾಜಕೀಯ, ದೇವೇಗೌಡರ ಕಥನ ರೆಡಿ

ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡರೇ ತಮ್ಮ ಆತ್ಮಕಥನದ ಬಗ್ಗೆ ಮಾತನಾಡುತ್ತಾ, 'ನನ್ನ ಆತ್ಮ ಚರಿತ್ರೆಯಲ್ಲಿ ಯಾರನ್ನು ಬಿಡುವುದಿಲ್ಲ. ಸತ್ಯ ಹೊರಹಾಕುತ್ತೇನೆ. ಕಹಿ ಸತ್ಯವನ್ನು ನುಂಗಿಕೊಂಡು ಇರವುದು ಕಷ್ಟ' ಎಂದರು.
ರಾಜಕೀಯದಲ್ಲಿ 50 ವರ್ಷದ ಪೂರೈಸಿದ ಹಿರಿಯ ರಾಜಕಾರಣಿ ದೇವೇಗೌಡರನ್ನು ಶನಿವಾರ (ಆ.11) ನ ಬೆಂಗಳೂರಿನ ಜೆಡಿಎಸ್ ಘಟಕ ಆತ್ಮೀಯವಾಗಿ ಸನ್ಮಾನಿಸಿ ಧನ್ಯತೆಗೆ ಒಳಗಾಯಿತು.
'ನನ್ನ ವೃತ್ತಿ ಹಾಗೂ ಕೌಟುಂಬಿಕ ಜೀವನವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ನನಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳು, ಸಹಪಾಠಿಗಳಿಗೆ ನನ್ನ ಧನ್ಯವಾದಗಳು.
ನನ್ನ ಸುತ್ತಮುತ್ತ ಉತ್ತಮ ಚಾರಿತ್ರ್ಯವುಳ್ಳ ಅಧಿಕಾರಿಗಳಿದ್ದ ಪರಿಣಾಮ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ರಾಜ್ಯಭಾರ ಮಾಡಲು ಸಾಧ್ಯವಾಯಿತು' ಎಂದು ದೇವೇಗೌಡ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಧಾನಿಯಾಗಿದ್ದು ಹೇಗೆ?: ಕರ್ನಾಟಕ ಸರ್ಕಾರವನ್ನು ಐದು ವರ್ಷ ಕಾಲ ಸುರಕ್ಷಿತವಾಗಿ ಮುನ್ನೆಡೆಸಿದ ತೃಪ್ತಿಯಿದೆ. ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದರ ಬಗ್ಗೆ ಯಾರಿಗೂ ಆಕ್ಷೇಪವಿರಲಿಲ್ಲ. ರಾಷ್ಟ್ರ ರಾಜಕಾರಣಕ್ಕೆ ಇಳಿಯುವ ಇಚ್ಛೆ ನನಗಿರಲಿಲ್ಲ.
ಆದರೆ, ಸಿಪಿಎಂ ಸಭೆಯಲ್ಲಿ ನನ್ನ ಹೆಸರನ್ನು ಪ್ರಧಾನಿ ಪಟ್ಟಕ್ಕೆ ಸೂಚಿಸಲಾಯಿತು. ನಂತರ ಸರ್ವಾನುಮತವಾಗಿ ಆಯ್ಕೆಯಾದೆ. ಇದರಲ್ಲಿ ಯಾವುದೇ ಸಂಶಯಬೇಡ. ಪ್ರಧಾನಿಯಾಗಿದ್ದರಿಂದ ನನಗೆ ರಾಷ್ಟ್ರ ರಾಜಕಾರಣದ ಹಲವು ಮಜಲುಗಳು ಅರ್ಥವಾಯಿತು. ವ್ಯಕ್ತಿಯಾಗಿ, ರಾಜಕಾರಣಿಯಾಗಿ ಬೆಳೆಯಲು ಸಹಕಾರಿಯಾಯಿತು.
'ನನ್ನ ರಾಜಕೀಯ ಬೆಳವಣಿಗೆ ಸಹಿಸದವರು ಹಲವರು ನನಗೆ ಅನೇಕ ರೀತಿ ಕಾಟ ನೀಡಿದ್ದಾರೆ. ಕೆಲವರು ಈಗಲೂ ನಮ್ಮ ಕುಟುಂಬದ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ನಾನೆಂದೂ ಸ್ವಾರ್ಥ ರಾಜಕೀಯ ಮಾಡಿಲ್ಲ. ನನ್ನನ್ನು ಮಟ್ಟ ಹಾಕಲು ಯತ್ನಿಸಿದವರ ಬಗ್ಗೆ ಸಂಪೂರ್ಣವಾಗಿ ಅತ್ಮ ಚರಿತ್ರೆಯಲ್ಲಿ ಹೇಳಿಕೊಳ್ಳುತ್ತೇನೆ' ಎಂದು ದೇವೇಗೌಡರು ಹೇಳಿದರು.
ಭಾರತದ 11ನೇ ಪ್ರಧಾನ ಮಂತ್ರಿಯಾಗಿ ದೇಶವನ್ನಾಳಿದ್ದ, 14ನೇ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯವನ್ನಾಳಿದ್ದ, 50 ವರ್ಷಗಳನ್ನು ರಾಜಕೀಯ ಗುದ್ದಾಟಗಳಲ್ಲಿ ಕಳೆದಿರುವ ಹರದನಹಳ್ಳಿ ದೊಡ್ಡೇಗೌಡರ ಮಗ ದೇವೇಗೌಡ ಅವರು ಕರ್ನಾಟಕದ ಹೆಮ್ಮಯ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ.
ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ರಾಜ್ಯ ವಿಧಾನಸಭೆಗೆ ಕಾಲಿಟ್ಟಿದ್ದು 1962ರಲ್ಲಿ. ಹೊಳೆನರಸೀಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಮಣ್ಣಿನ ಮಗನಾದ ದೇವೇಗೌಡರು ಜನತಾ ಪಕ್ಷ, ಜನತಾದಳದ ಅಧ್ಯಕ್ಷರಾಗಿ, ನಂತರ ಜಾತ್ಯತೀತ ಜನತಾದಳದ ಸ್ಥಾಪಕರಾಗಿ ರಾಜಕಾರಣದಲ್ಲಿ ಸಾಕಷ್ಟು ಉಳುಮೆ ಮಾಡಿದ್ದಾರೆ. ಈಗ ತೆನೆಹೊತ್ತ ಮಹಿಳೆಯನ್ನು ಬೆಳೆಸಿ ನಿಲ್ಲಿಸಿದ್ದಾರೆ.
ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಅಪೌಷ್ಟಿಕತೆ, ಅನ್ಯಾಯದ ವಿರುದ್ಧ ನನ್ನ ಹೋರಾಟ ನಿಲ್ಲದು. ನನ್ನ ಕೊನೆ ಉಸಿರಿರುವವರೆಗೆ ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಈಗ ದೇವೇಗೌಡರ ಆತ್ಮಚರಿತ್ರೆ ಹೊರ ಬಂದ ನಂತರ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.












Click it and Unblock the Notifications