ಹಾಲಾಡಿ ಶ್ರೀನಿವಾಸ ಶೆಟ್ಟರ ಸಹೋದರ ಆತ್ಮಹತ್ಯೆ

ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ, ಮಾಜಿ ಶಾಸಕ ಶ್ರೀನಿವಾಸ ಶೆಟ್ಟಿ ಸೇರಿದಂತೆ ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಉದಯಕುಮಾರ್ ಅವರು ಸ್ವಯಂನಿವೃತ್ತಿ ಪಡೆದು ಬೆಂಗಳೂರಿನಲ್ಲಿ ಕೆಲವು ವರ್ಷ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಐದು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಉದಯಕುಮಾರ್ ತಮ್ಮ ಸ್ವಂತ ಊರಿಗೆ ಬಂದು ಅವಿವಾಹಿತರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಜೊತೆ ವಾಸವಾಗಿದ್ದರು.
ಸಾಮಾಜಿಕ ಕಾರ್ಯಕರ್ತರಾದ ಉದಯಕುಮಾರ್ ತಮ್ಮ ತೋಟದ ಮನೆಯಲ್ಲಿ ನರ್ಸರಿ ನಡೆಸುತ್ತಿದ್ದರು. ಆಗಸ್ಟ್ 9ರಂದು ಮಧ್ಯಾಹ್ನ ತನ್ನ ಮನೆಯಲ್ಲಿ ಊಟ ಮಾಡಿ ನರ್ಸರಿಗೆ ತೆರಳಿದ್ದಾರೆ.
ಸಂಜೆ ಐದು ಗಂಟೆ ಸುಮಾರಿಗೆ ನರ್ಸರಿ ಕೆಲಸದವರು ಅಲ್ಲಿಗೆ ಹೋದಾಗ ಉದಯಕುಮಾರ್ ಅವರ ಮೃತದೇಹ ಮನೆ ಮಾಡಿನ ಫ್ಯಾನ್ ನಲ್ಲಿ ನೇತಾಡುತ್ತಿತ್ತು.
ಸಹೋದರ ಶ್ರೀನಿವಾಸ ಶೆಟ್ಟರಿಗೆ ರಾಜಕೀಯದಲ್ಲಿ ಇತ್ತೀಚಿಗೆ ಆದ ಹಿನ್ನಡೆ, ಮಕ್ಕಳಾಗದೆ ಇದ್ದಿದ್ದು ಮತ್ತು ಆರ್ಥಿಕ ಸಂಕಷ್ಟದಿಂದ ಉದಯಕುಮಾರ್ ಬಹಳಷ್ಟು ನೊಂದಿದ್ದರು.
ಉದಯಕುಮಾರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಾಲಾಡಿ ಅವರ ಅಭಿಮಾನಿಗಳು, ಕುಟುಂಬಿಕರು, ಹಿತೈಷಿಗಳು ಸಹಸ್ರಾರು ಸಂಖ್ಯೆಯಲ್ಲಿ ಹಾಲಾಡಿಯ ಮನೆಯ ಮುಂದೆ ಸೇರಿದ್ದರು. ಉಡುಪಿ ಜಿಲ್ಲೆ ಶಂಕರನಾರಾಯಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಡೆತ್ ನೋಟ್: ಆತ್ಮಹತ್ಯೆ ಮಾಡಿಕೊಂಡ ಉದಯಕುಮಾರ್ ಮರಣಪತ್ರ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಶ್ರೀನಿವಾಸ, ಈಗಿನ ರಾಜಕೀಯ ಸನ್ನಿವೇಶಕ್ಕೆ ನಿನ್ನ ಪ್ರಾಮಾಣಿಕ ರಾಜಕೀಯ ಹೇಳಿಸಿದ್ದಲ್ಲ' ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಉದ್ದೇಶಿಸಿ ಪತ್ರ ಬರೆದಿಟ್ಟಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications