• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನೂ ಮೂರು ದಿನ ಭರ್ಜರಿ ಮಳೆಯಾಗುತ್ತದೆ

By Srinath
|

ಬೆಂಗಳೂರು, ಜುಲೈ 28: ಶುಕ್ರವಾರ ರಾಜ್ಯದ ಕರಾವಳಿ ಮತ್ತು ರಾಜ್ಯದ ಒಳನಾಡಿನ ಹಲವು ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದೆ. ಇದೇ ವೇಳೆ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬತ್ತಿ ಹೋಗಿದ್ದ ಜಲಾಶಯಗಳಲ್ಲಿ ನೀರು ತುಂಬಿದ್ದು ಮುಂಗಾರು ಮಳೆ ಕಾಣದೆ ಆತಂಕಗೊಂಡಿದ್ದ ರೈತನ ಮುಖದಲ್ಲೂ ನಗೆ ಕಾಣಿಸಿಕೊಂಡಿದೆ. ಮಳೆಯ ಆರ್ಭಟ ನೋಡಿದರೆ ಕೆಲವೆಡೆ ಪ್ರವಾಹದ ಉಂಟಾಗುವ ಸಾಧ್ಯತೆಯಿದೆ.

ಕುತೂಹಲದ ಸಂಗತಿಯೆಂದರೆ ಮುಜರಾಯಿ ಇಲಾಖೆಗಳ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಶುಕ್ರವಾರ ಮುಂಜಾನೆ ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆಯ ಫ‌ಲವೋ ಎಂಬಂತೆ ಮಲೆನಾಡು, ಕರಾವಳಿ ಭಾಗ ಸೇರಿ ರಾಜ್ಯದ ಕೆಲವೆಡೆ ಈ ಧಾರಾಕಾರ ಮಳೆಯಾಗಿದೆ.

ಭಗವಂತ ಮೆಚ್ಚಿದ್ದಾನೆ- ಸಚಿವ ಪೂಜಾರಿ:

ತಮ್ಮ ಪ್ರಾರ್ಥನೆಯನ್ನು ಭಗವಂತ ಮೆಚ್ಚಿದ್ದಾನೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಭಗವಂತ ಮಳೆ ಸುರಿಸುತ್ತಿದ್ದಾನೆ. ನನಗೆ ಸಂತೋಷವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರಿನ ಕಿಗ್ಗದಲ್ಲಿ 202 ಮಿ.ಮೀ. ಹಾಗೂ ಹಾಸನದ ಮಾರನಹಳ್ಳಿಯಲ್ಲಿ 200 ಮಿ.ಮೀ. ದಾಖಲೆ ಮಳೆಯಾಗಿದ್ದು, ಹೇಮಾವತಿ ಜಲಾಶಯಕ್ಕೆ 9 ಸಾವಿರ ಕ್ಯೂಸೆಕ್‌ ನೀರಿನ ಒಳಹರಿವು ಇದೆ. ತುಂಗಾ ಜಲಾಶಯದಲ್ಲಿ 42 ಸಾವಿರ ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಉಪನದಿಗಳು ಮೈದುಂಬಿ ಹರಿಯುತ್ತಿವೆ. ಕೊಡಗು ಜಿಲ್ಲೆಯಲ್ಲಿಯೂ ಮಳೆ ಸುರಿಯುತ್ತಿದೆ.

ರಾಜಧಾನಿಯಲ್ಲೂ ವರ್ಷದ ಹರ್ಷಧಾರೆ

ರಾಜಧಾನಿ ಬೆಂಗಳೂರಿನಲ್ಲಿಯೂ ಶುಕ್ರವಾರ ಕೆಲವೆಡೆ ಮಳೆ ಸಿಂಚನವಾಯಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಎರಡು ಗಂಟೆಗಳ ಕಾಲ ಸುರಿಯಿತು. ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಜುಲೈ 27 ಹಾಗೂ ಆಗಸ್ಟ್‌ 2 ರಂದು ಮುಂಜಾನೆ ಜಲಾಭಿಷೇಕ ಪೂಜೆ ಹಾಗೂ ಪರ್ಜನ್ಯಜಪ ಮಾಡುವಂತೆ ಆದೇಶ ಹೊರಡಿಸಿತ್ತು. ಪ್ರತಿ ದೇವಾಲಯಕ್ಕೆ 5 ಸಾವಿರ ರೂ.ವರೆಗೆ ವೆಚ್ಚ ಮಾಡಲು ಅನುಮತಿ ನೀಡಲಾಗಿತ್ತು.

ಧಾರಾಕಾರ ಮಳೆ: ಮಡಿಕೇರಿ ನಗರವೂ ಸೇರಿದಂತೆ ಭಾಗಮಂಡಲ, ಸಂಪಾಜೆ ಪ್ರದೇಶದಲ್ಲಿ ಶುಕ್ರವಾರ ಮಳೆ ಬಿರುಸಾಗಿ ಸುರಿದಿದೆ. ಇನ್ನುಳಿದಂತೆ ಕುಶಾಲನಗರ, ಸೋಮವಾರ ಪೇಟೆ, ನಾಪೋಕ್ಲು, ಶ್ರೀಮಂಗಲ, ಅಮ್ಮತ್ತಿ, ಶನಿವಾರಸಂತೆ, ಶಾಂತಳ್ಳಿ ಹಾಗೂ ಇತರ ಪ್ರದೇಶಗಳಲ್ಲಿಯೂ ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ, ಚಿಕ್ಲಿಹೊಳೆ, ಹಾರಂಗಿ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಸೋಮವಾರ ಪೇಟೆ ಸೇರಿದಂತೆ ಇತರ ಪ್ರದೇಶಗಳಲ್ಲಿ ರೈತರು ಬತ್ತ ನಾಟಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಜಲಾಶಯದಲ್ಲಿ ನೀರಿನ ಮಟ್ಟವು 2,845.29 ಅಡಿಗೆ ತಲುಪಿದೆ (ಗರಿಷ್ಠ ಮಟ್ಟ 2,859 ಅಡಿ). ಇಂದಿನ ನೀರಿನ ಒಳ ಹರಿವು 5,789 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 3,517 ಕ್ಯೂಸೆಕ್ ಇತ್ತು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂಜೆ ಹೊತ್ತಿನಲ್ಲಿಯೇ ಮಳೆ

ಕೊಲ್ಲೂರಿನಲ್ಲಿ ಸಾಮೂಹಿಕ ಪೂಜೆ ನಡೆಯುತ್ತಿದ್ದಂತೆಯೇ ದಟ್ಟವಾಗಿ ಮೋಡ ಕವಿದು ಸುಮಾರು ಒಂದು ಗಂಟೆ ಸಮಯ ಭಾರೀ ಮಳೆ ಸುರಿಯಿತು. ಅನಂತರವೂ ಆಗಾಗ್ಗೆ ಕೊಲ್ಲೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಎಲ್ಲೆಡೆ ಕಾರ್ಮೋಡ ಕವಿದಿತ್ತು. ಇದೇ ರೀತಿ ವಿವಿಧ ಕಡೆಗಳಲ್ಲಿ ಆಗಿದೆ.

ದ.ಕನ್ನಡ ಜಿಲ್ಲೆಯಾದ್ಯಂತ ಮಂಗಳೂರು ಸೇರಿದಂತೆ ಹಲವೆಡೆ ಶುಕ್ರವಾರ ಬೆಳಗಿನಿಂದಲೇ ಉತ್ತಮ ಮಳೆ ಸುರಿದಿದೆ. ಸುಳ್ಯ, ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ಸಾಧಾರಣ ಮಳೆಯಾದೆ. ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ.

ಸಕಲೇಶಪುರ ತಾಲೂಕು ವ್ಯಾಪ್ತಿಯ ವಿವಿಧೆಡೆ ಗುಡ್ಡ ಕುಸಿದು ರೈಲು ಹಳಿಯ ಮೇಲೆ ಬಿದ್ದಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ.

ಸಕಲೇಶಪುರ ತಾಲೂಕಿನ ಕಡಗರಹಳ್ಳಿ, ಎಡಕುಮೇರಿ, ಸಿರಿಬಾಗಿಲು ಪ್ರದೇಶದಲ್ಲಿ ರೈಲು ಹಳಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇನ್ನೆರಡು ಕಡೆಯಲ್ಲಿ ಸ್ವಲ್ಪ ಮಣ್ಣು ಬಿದ್ದಿದ್ದರೂ ಅದನ್ನು ತೆರವು ಮಾಡಲಾಗಿದೆ. ಉಳಿದೆಡೆ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.

ರೈಲು ರದ್ದು: ಗುಡ್ಡ ಕುಸಿತದಿಂದಾಗಿ ಕಾರವಾರ-ಯಶವಂತಪುರ ನಡುವೆ ಸಂಚರಿಸುವ ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಶುಕ್ರವಾರ ರದ್ದುಗೊಂಡಿದೆ. ಶನಿವಾರ ಬೆಳಗ್ಗಿನ ಕಾರವಾರ-ಮಂಗಳೂರು-ಬೆಂಗಳೂರು ರೈಲು ಕೂಡ ರದ್ದುಗೊಂಡಿದೆ.

ಕಣ್ಣೂರು-ಯಶವಂತಪುರ ನಡುವೆ ಸಂಚರಿಸುವ ಕಣ್ಣೂರು ಎಕ್ಸ್‌ಪ್ರೆಸ್‌ ಕೂಡ ಗುರುವಾರ ರದ್ದುಗೊಂಡಿತ್ತು. ಶುಕ್ರವಾರ ರದ್ದುಗೊಂಡ ರೈಲಿನಿಂದಾಗಿ ಮುಂಗಡ ಬುಕ್ಕಿಂಗ್‌ ಮಾಡಿದ ಪ್ರಯಾಣಿಕರ ಹಣ ವಾಪಸ್ಸು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಶನಿವಾರ ಸಂಜೆಯೊಳಗೆ ಮಣ್ಣು ತೆರವು ಕಾರ್ಯ ಪೂರ್ಣಗೊಂಡರೆ ರಾತ್ರಿ ರೈಲು ಸಂಚರಿಸುವ ಸಾಧ್ಯತೆ ಇದೆ.

ಪ್ರವಾಹದಲ್ಲಿ ಕೊಚ್ಚಿ ರೈತನ ಸಾವು:

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಗದ್ದೆ ನಾಟಿ ಮಾಡಲು ಹೋಗಿದ್ದ ರೈತ ಬಸವರಾಜು (60) ಮಳೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅವರ ಗದ್ದೆಯಿಂದ ಅರ್ಧ ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ.

ಹಾಸನ ಜಿಲ್ಲೆಯ ಶಿರಾಡಿಘಾಟ್‌ನ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಹಲವೆಡೆ ಮಣ್ಣು ಕುಸಿತದಿಂದಾಗಿ ಬೆಳಗ್ಗೆ 5ಗಂಟೆಯಿಂದ ಮಧ್ಯಾಹ್ನ 12ರವರೆಗೆ ರಸ್ತೆ ಸಂಚಾರ ಬಂದ್‌ ಆಗಿತ್ತು. ಹಾಸನ - ಮಂಗಳೂರು ರೈಲು ಮಾರ್ಗದಲ್ಲಿ ಮಣ್ಣು ಕುಸಿದು ರೈಲು ಸಂಚಾರವೂ ಸ್ಥಗಿತಗೊಂಡಿದೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಜಿಲ್ಲೆಯ ಗಡಿಭಾಗವಾದ ಮಾರನಹಳ್ಳಿಯಲ್ಲಿ ಅತಿ ಹೆಚ್ಚಿನ 200 ಮಿ.ಮೀ. ಮಳೆ ಬಿದ್ದಿದೆ. ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯಕ್ಕೆ 9000 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಮುಳುಗಿದ ಸೇತುವೆ, ಶಾಲೆಗೆ ರಜೆ:

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಅನೇಕ ಕಡೆ ಧಾರಾಕಾರ ಮಳೆ ಸುರಿದಿದೆ. ಸುಬ್ರಹ್ಮಣ್ಯದಲ್ಲಿ ಸತತ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಧಾರ ಸೇತುವೆ ಮುಳುಗುವ ಸ್ಥಿತಿಯಲ್ಲಿದೆ. ಕಡಬದ ಹೊಸ್ಮಠ ಸೇತುವೆ ಮೇಲೆ ಆರು ಅಡಿ ನೀರು ಹರಿಯುತ್ತಿತ್ತು.

ಬೆಳ್ತಂಗಡಿ ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನದಿಂದ ಸತತ ಮಳೆ ಸುರಿಯುತ್ತಿದ್ದು, ಉಜಿರೆ, ಬೆಳ್ತಂಗಡಿ ಪರಿಸರದ ಕೆಲವು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಶುಕ್ರವಾರ ರಜೆ ಘೋಷಿಸಲಾಯಿತು. ಮುಲ್ಕಿಯ ಸಮೀಪ ಮನೆ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿತ್ತು.

ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯುತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕುಗಳಲ್ಲಿ ಮಳೆಯು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಶೃಂಗೇರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಶೃಂಗೇರಿ-ಕಾರ್ಕಳ ನಡುವಿನ ಸಂಚಾರಕ್ಕೆ 3 ತಾಸು ಅಡ್ಡಿ ಉಂಟಾಯಿತು. ಶೃಂಗೇರಿಯ ಭಾರತೀ ಬೀದಿಗೆ ಪರ್ಯಾಯವಾಗಿ ನಿರ್ಮಿಸಿದ್ದ ತುಂಗಾ ತೀರದ ಹೊಸ ಮಾರ್ಗವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಕುದುರೆಮುಖ ಶ್ರೇಣಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಳಸ -ಹೊರನಾಡು ಸಂಪರ್ಕ ಕೆಲಕಾಲ ಕಡಿತಗೊಂಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is reported heavy rains at Kukke Subramanya. As such Kumaradhara river is overflowing. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more