ಲಕ್ಷ್ಮೀ ಕಟಾಕ್ಷ: ಯಡಿಯೂರಪ್ಪಗೆ 2 ಜಾಮೀನು ಮಂಜೂರು

ಬುಧವಾರ(ಜು.25) ಹಾಗೂ ಗುರುವಾರ (ಜು.26) ಸಾಲಾಗಿ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. 2 ಲಕ್ಷ ರು ಬಾಂಡ್, ಇಬ್ಬರ ಭದ್ರತೆ ಹಾಗ್ಗೂ ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಷರತ್ತಿನಲ್ಲಿ ಹೇಳಲಾಗಿದೆ.
ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಮತ್ತು ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಡಿಕೆ ಶಿವಕುಮಾರ್ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಯಡಿಯೂರಪ್ಪ ಅವರಿಗೆ ಜಾಮೀನು ಸಿಕ್ಕಿದೆ.
ಇದಕ್ಕೂ ಮುನ್ನ ಡಿಕೆ ಶಿವಕುಮಾರ್, ಯಡಿಯೂರಪ್ಪ ಸೇರಿದಂತೆ ಆರು ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಜೂ.22 ರಂದು ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರಂ ಹೋಬಳಿಯ ಬೆನ್ನಿಗಾನಹಳ್ಳಿಯಲ್ಲಿನ ಸರ್ವೆ ನಂ.50/2ರಲ್ಲಿನ 4 ಎಕರೆ 20 ಗುಂಟೆ ಜಮೀನನ್ನು ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಖರೀದಿಸಿ, ನಂತರ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಎಲ್ಲ ದಾಖಲಾತಿಗಳನ್ನು ಕಂದಾಯ ಇಲಾಖೆಯ ಅಧಿಕಾರಿ ಗಳಿಂದ ತಮ್ಮ ಹೆಸರಿಗೆ ವರ್ಗಾಯಿಸಿ ಕೊಂಡಿರುವ ಬಗ್ಗೆ ಸಾಮಾಜಿಕ ಕಾರ್ಯ ಕರ್ತ ಟಿ.ಜೆ.ಅಬ್ರಾಹಂ ಹಾಗೂ ಕೃಷಿಕ ಕಬ್ಬಾಳೇಗೌಡ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಡಿ.ಕೆ.ಶಿವಕುಮಾರ್, ಐಎಎಸ್ ಅಧಿಕಾರಿ ಡಾ.ರಾಮೇಗೌಡ, ಜಿಲ್ಲಾ ನೋಂದಣಾಧಿಕಾರಿ ಹಮೀದ್ ಅಲಿ, ನಿವೃತ್ತ ತಹಶೀಲ್ದಾರ್ ಹನುಮಂತ್, ನಿವೃತ್ತ ರಾಜಸ್ವ ನಿರೀಕ್ಷಕ ಚಂದ್ರ ಶೇಖರಯ್ಯ, ಗ್ರಾಮ ಲೆಕ್ಕಿಗ ದೊಡ್ಡ ಹನುಮಯ್ಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಕೇಸ್ 2: ನಗರದ ಲೊಟ್ಟಗೊಲ್ಲಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಆರೋಪಿಗಳಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ರಾಜಮಹಲ್ ವಿಲಾಸ್ ಎರಡನೇ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಡಿಎಗೆ ಸೇರಿದ ನಿವೇಶನದ ಅಕ್ರಮ ಖರೀದಿ, 2009ರಲ್ಲಿ 9 ಎಕರೆಗೂ ಹೆಚ್ಚು ಜಮೀನಿನ ಅಕ್ರಮ ಡಿನೋಟಿಫಿಕೇಶನ್ ಮಾಡಿದ್ದಾರೆ.
ಇದರಿಂದ ಸರ್ಕಾರಕ್ಕೆ 50 ಕೋಟಿ ರು ನಷ್ಟವಾಗಿದೆ ಎಂದು ಪತ್ರಕರ್ತ ಜಯಕುಮಾರ್ ಹಿರೇಮಠ ಅವರು ಖಾಸಗಿ ದೂರು ಸಲ್ಲಿಸಿದ್ದರು. ಇದರ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು.












Click it and Unblock the Notifications