ನೆಲಮಂಗಲದಲ್ಲಿ ಬೆಮೆಲ್ ಕೃಷ್ಣಪ್ಪನ ಭೀಕರ ಹತ್ಯೆ

ತನ್ನ ಬಾಡಿಗಾರ್ಡ್ ಜೊತೆ ಕಾರಿನಲ್ಲಿ (ಕೆಎ 42-ಜೆಡ್-3669) ನೆಲಮಂಗಲದಲ್ಲಿರುವ ನಿವಾಸಕ್ಕೆ ತೆರಳುತ್ತಿದ್ದಾಗ ಟೆಂಪೋ ಟ್ರಾವಲರ್‌ನಲ್ಲಿದ್ದ 30ಕ್ಕೂ ಹೆಚ್ಚು ರೌಡಿಗಳು ಅರಿಶಿನಕುಂಟೆಯಲ್ಲಿ ಅಡ್ಡಗಟ್ಟಿ ದಾಳಿ ಮಾಡಿದ್ದಾರೆ. ಇನ್ನೊಂದು ವಾಹನದಲ್ಲಿದ್ದ ಕೃಷ್ಣಪ್ಪನ ವೈರಿಗಳು ಮೊದಲಿಗೆ ಕಾರನ್ನು ಅಡ್ಡಗಟ್ಟಿದ್ದಾರೆ, ನಂತರ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾರೆ.
ಬಸವೇಶ್ವರ ವೃತ್ತದ ಬಳಿ ತನ್ನ ಕೆಲಸ ಮುಗಿಸಿಕೊಂಡು ಹೊರಟಿದ್ದ ಕೃಷ್ಣಪ್ಪನನ್ನು ಅಲ್ಲಿಂದಲೇ ಆತನ ವೈರಿಗಳು ಬೆನ್ನತ್ತಿದ್ದಾರೆ. ಅರಿಶಿನಕುಂಟೆ ಬಳಿ ಸಮಯಸಾಧಿಸಿ ಆಕ್ರಮಣ ಮಾಡಿದ್ದಾರೆ. ಆಕ್ರಮಣ ಎಷ್ಟು ಭೀಕರವಾಗಿತ್ತೆಂದರೆ ಕೃಷ್ಣಪ್ಪ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಕೃಷ್ಣಪ್ಪನ ಬಾಡಿಗಾರ್ಡ್ ಮಾಡಿದ ಪ್ರತಿದಾಳಿಯಲ್ಲಿ ಇಬ್ಬರು ರೌಡಿಗಳು ಕೂಡ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಗೆ ಕೃಷ್ಣಪ್ಪನ ವೈರಿಗಳು ಮೊದಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಹೊಂಚು ಹಾಕಿ ಕೃಷ್ಣಪ್ಪನ ಹತ್ಯೆಗೈಯಲು ಸಂಚು ರೂಪಿಸಿದ್ದರು. ಮೂಲಗಳ ಪ್ರಕಾರ, ತ್ಯಾಗರಾಜನಗರದಲ್ಲಿರುವ ನಿವಾಸವೊಂದರಲ್ಲಿ ಮೊದಲೇ ಈ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಅದನ್ನು ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಈ ಕೊಲೆಯ ಹಿಂದೆ ನೆಲಮಂಗಲ ಮತ್ತೊಬ್ಬ ರೌಡಿ, ಕೃಷ್ಣಪ್ಪನ ವೈರಿ ಬೆತ್ತನಗೆರೆ ಸೀನನ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಸೀನ ಜೈಲಿನಲ್ಲಿದ್ದಾನೆ.
ಕೃಷ್ಣಪ್ಪ ಹತ್ಯೆಯಾಗಿರುವುದು ತಿಳಿಯುತ್ತಿದ್ದಂತೆ ಆತನ ಬೆಂಬಲಿಗರು ತುಮಕೂರು ರಸ್ತೆಯನ್ನು ಬ್ಲಾಕ್ ಮಾಡಿದರು. ರೊಚ್ಚಿಗೆದ್ದ ರೌಡಿಗಳಿಂದ ಒಂದು ಬಸ್ಸಿಗೂ ಬೆಂಕಿ ಹಚ್ಚಲಾಯಿತು. ಇದರಿಂದ ತುಮಕೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಯಿತು. ವಾಹನ ಸಂಚಾರ ಸುಗಮವಾಗಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಕೃಷ್ಣಪ್ಪ ಯಾರು? : ನೆಲಮಂಗಲದಲ್ಲಿ ಮತ್ತು ಸುತ್ತಮುತ್ತಿನ ಹಳ್ಳಿಗಳಲ್ಲಿ ಭೂಮಾಫಿಯಾ ರೌಡಿಗಳದೇ ಸಾಮ್ರಾಜ್ಯ. ರಿಯಲ್ ಎಸ್ಟೇಟ್ ಏಜೆಂಟರುಗಳು ತಮ್ಮ ಕೈಚಳಕ ತೋರಿಸಿ ಸಾಕಷ್ಟು ಭೂಮಿಯನ್ನು ಕಬಳಿಸಿಕೊಂಡಿದ್ದಾರೆ. ಅವರೆಲ್ಲರ ಕಿಂಗ್ ಬೆಮೆಲ್ ಕೃಷ್ಣಪ್ಪ. ನೆಲಮಂಗಲದ ಹೊರವಲಯದಲ್ಲಿ ಪೆಟ್ರೋಲ್ ಬಂಕ್ ಇಟ್ಟಿರುವ ಕೃಷ್ಣಪ್ಪ, ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತನ್ನ ಕಬಂಧ ಬಾಹುವನ್ನು ಚಾಚಿದ್ದ. ಮೂರು ವರ್ಷಗಳ ಹಿಂದೆ 2009ರ ಆಗಸ್ಟ್ 24ರಂದು ಕೂಡ ಕೃಷ್ಣಪ್ಪನ ಮೇಲೆ ವೈರಿ ಗ್ಯಾಂಗ್ ಹತ್ಯೆಗೆ ಯತ್ನಿಸಿತ್ತು. ಆಗ ತಪ್ಪಿಸಿಕೊಂಡಿದ್ದ ಕೃಷ್ಣಪ್ಪನನ್ನು ಈ ಬಾರಿ ರೌಡಿಗಳು ಸಿಗಿದುಹಾಕಿದ್ದಾರೆ.












Click it and Unblock the Notifications