ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಅಮ್ಮನಿಂದ ವ್ರತ ಭಂಗ, ಬಳ್ಳಾರಿ ಬಸ್ ಮಿಸ್?

By Mahesh
|
Google Oneindia Kannada News

Sushma Swaraj to miss Bellary Bus
ಬಳ್ಳಾರಿ, ಜು.25: ಪ್ರತಿ ವರ್ಷ ತಪ್ಪದೆ ವರಮಹಾಲಕ್ಷ್ಮಿ ವ್ರತಾಚರಣೆಗೆ ಬಳ್ಳಾರಿಗೆ ಬರುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಈ ವರ್ಷ ಕೂಡಾ ವ್ರತಭಂಗ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬಳ್ಳಾರಿ ಬಸ್ ಮಿಸ್ ಮಾಡಿಕೊಳ್ಳುವ ಸುಷ್ಮಾ ಅಮ್ಮನವರು ಶ್ರೀರಾಮುಲು ನೇತೃತ್ವದ ಸಾಮೂಹಿಕ ವಿವಾಹ ಮಹೋತ್ಸವಕ್ಕೂ ಚಕ್ಕರ್ ಹಾಕಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪ್ರತಿ ವರ್ಷದ ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿ, ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ಸಾಂಗವಾಗಿ ಪೂಜೆ ಸಲ್ಲಿಸಿ ನಂತರ ಬಿ. ಶ್ರೀರಾಮುಲು ನೇತೃತ್ವದಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಆಶೀರ್ವದಿಸುತ್ತಿದ್ದರು. ಸುಷ್ಮಾ ಸ್ವರಾಜ್ ಅಮ್ಮ ಅವರು ವರ್ಷಕ್ಕೊಮ್ಮೆ ಬಳ್ಳಾರಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಶಕ್ತಿ, ಸ್ಪೂರ್ತಿ ತುಂಬುತ್ತಿದ್ದರು. ಕೊಟ್ಟ ಮಾತಿಗೆ ತಪ್ಪದೇ ನಡೆಯುತ್ತಿದ್ದರು.

ಆದರೆ, ಕಳೆದ ವರ್ಷ 12ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವೈಯಕ್ತಿಕ ಕಾರಣಗಳಿಂದ ಸುಷ್ಮಾ ಸ್ವರಾಜ್ ಅವರು ಪಾಲ್ಗೊಂಡಿರಲಿಲ್ಲ. ಸುಷ್ಮಾ ಅವರ ಮನೆಯಲ್ಲಿ ಸಾವಿನ ಸೂತಕವಿತ್ತು. ಜೊತೆಗೆ ರೆಡ್ಡಿ ಸಹೋದರರ ಜೊತೆ ಸುಷ್ಮಾ ಅವರ ಸಂಬಂಧ ಕೂಡಾ ಹಳಸಿತ್ತು.

ಸೋಲಿನಿಂದ ಗೆಲುವು ಕಂಡ ನಾಯಕಿ: ಸುಷ್ಮಾ ಅವರ ಸೋಲು ಬಳ್ಳಾರಿಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಲು ಪ್ರೇರಣೆ ನೀಡಿತು ಎಂದರೆ ತಪ್ಪಾಗಲಾರದು. ಬಳ್ಳಾರಿ ನಗರಸಭೆ, ಪಾಲಿಕೆ, ಗ್ರಾಮ, ತಾಲೂಕು - ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ, ಲೋಕಸಭೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿತು. ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ನುಚ್ಚುನೂರು ಮಾಡಿ ಇಡೀ ದೇಶದ ರಾಜಕೀಯವೇ ಬಳ್ಳಾರಿಯನ್ನು ನೋಡುವಂತೆ ಆಯಿತು.

1999ರ ಲೋಕಸಭಾ ಚುನಾವಣೆಯಲ್ಲಿ 'ನಾನು ನಿಮ್ಮ ಮನೆಯ ಮಗಳು. ನೀವು ನನಗೆ ಓಟು ಕೊಡಿ - ಬಿಡಿ. ನಾನು ಮನೆ ಮಗಳಾಗಿ ಪ್ರತಿವರ್ಷ ಶ್ರೀವರಮಹಾಲಕ್ಷ್ಮಿ ಪೂಜೆಗೆ ತಪ್ಪದೇ ಬರುತ್ತೇನೆ. ಆಶೀರ್ವದಿಸಿ" ಎಂದಿದ್ದರು. 'ತವರು ಮನೆಗೆ ಕೊಟ್ಟ ಮಾತನ್ನು ತಪ್ಪಿ ನಡೆಯುವುದಿಲ್ಲ" ಎನ್ನುತ್ತಿದ್ದ ಮನೆ ಮಗಳು ಸುಷ್ಮಾಜೀ ಈಗ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ.

ಗಣಿ ಹಗರಣದಲ್ಲಿ ಸಿಲುಕಿದ ಮೇಲೆ ರೆಡ್ಡಿ ಕುಟುಂಬದಲ್ಲೂ ಸೂತಕದ ಛಾಯೆ ಮುಂದುವರೆದಿದೆ. ಕರುಣಾಕರ ರೆಡ್ಡಿ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಜನಾರ್ದನ ರೆಡ್ಡಿ ಜೈಲುವಾಸಿಯಾಗಿದ್ದರೆ, ಸೋಮಶೇಖರ ರೆಡ್ಡಿ ಜೈಲು ಪಾಲಾಗುವ ಭೀತಿ ಎದುರಿಸುತ್ತಿದ್ದಾರೆ.

ರೆಡ್ಡಿಗಳ ನಿಷ್ಠಾವಂತ ಗೆಳೆಯ ಶ್ರೀರಾಮುಲು ಮಾತ್ರ ಪಾದಯಾತ್ರೆ, ಹೊಸ ಪಕ್ಷ ಕಟ್ಟಿಕೊಂಡು ಹೊಸ ಹುರುಪಿನಲ್ಲಿದ್ದಾರೆ. ಆದರೆ, ಈ ಬಾರಿ ವಿವಾಹ ಮಹೋತ್ಸವಕ್ಕೆ ಯಾರು ಯಾರು ಬರಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಬಿಜೆಪಿ ಹಿರಿಯ ನಾಯಕರಿಂದ ಬಳ್ಳಾರಿ ಬಿಜೆಪಿ ದೂರಾಗಿದೆ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಬಳ್ಳಾರಿ ಧೂಳು ತಿನ್ನಲು ಬಂದರೂ ಬರಬಹುದು. ಆದರೆ, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ಬರುವುದು ಅನುಮಾನ ಎನ್ನಲಾಗಿದೆ.

ಯಾರಿಟ್ಟ ಶಾಪವೋ ಏನೋ ಮನೆ ಮಗಳು ಸುಷ್ಮಾ ಅವರು ಬಳ್ಳಾರಿಗೆ ಪಾದ ಬೆಳೆಸದಂತಾಗಿದೆ. ಶಾಂತಾ ಹಾಗೂ ಶೋಭಾ ಅವರ ನಡುವೆ ರಾಜಿಗೆ ಕಾರಣವಾಗಿದ್ದ, ರೆಡ್ಡಿ ಸೋದರ ಏಳಿಗೆಯ ಶಕ್ತಿಯಾಗಿದ್ದ ಮುತ್ತೈದೆ ಮುನಿಸಿಕೊಂಡಿದ್ದಾಳೆ. ಶ್ರಾವಣ ಮಾಸದ ನವಮಿ ಶುಕ್ರವಾರದ ಶುಭ ದಿನ(ಜು.27) ಸುಷ್ಮಾ ಇಲ್ಲದ ವರಮಹಾಲಕ್ಷ್ಮಿ ವ್ರತಕ್ಕೆ ಬಳ್ಳಾರಿ ಸಿದ್ಧವಾಗಬೇಕಿದೆ.

English summary
Bellary Reddy Brothers and Sriramulu still hope that BJP leader Sushma Swaraj will attend this year's Varamahalakshmi Vrat. But Sushma is reluctant and likely to miss the bus to Bellary on personal reasons. Bad time for Reddy Brothers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X