ದೇವೇಗೌಡ ಸೇರಿ 102 ಜನರ ಮೇಲೆ ನೈಸ್ ಕೇಸ್

ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಧರಂಸಿಂಗ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದರು.
ಅಮೆರಿಕದ ಮಸಾಚುಸೆಟ್ಸ್ ನ ಗವರ್ನರ್ ವಿಲಿಯಂ ವೆಲ್ಡ್, ಲೋಕೋಪಯೋಗಿ ಸಚಿವ ಸಿಎಂ ಉದಾಸಿ, ಶಾಸಕ ಡಿಕೆ ಶಿವಕುಮಾರ್, ಮಾಜಿ ಸಚಿವ ಆರ್ ವಿ ದೇಶಪಾಂಡೆ,ನೈಸ್ ಸಂಸ್ಧೆ ಮುಖ್ಯಸ್ಧ ಅಶೋಕ್ ಖೇಣಿ, ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ನೈಸ್ ಸಂಸ್ಧೆಯ ವ್ಯವಸ್ಧಾಪಕ ನಿರ್ದೇಶಕ ಬಾಬಾ ಕಲ್ಯಾ, ಐಸಿಐಸಿಐ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ವಘಲ್ ಸೇರಿದಂತೆ ಇತರೆ 57 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧವೂ ದೂರು ದಾಖಲಿಸಲಾಗಿದೆ.
ಆರೋಪದ ವಿವರಣೆ: 1995 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಧೆಯ ನಾಲ್ವರು ನಿದೇರ್ಶಕರ ಜತೆ ಒಡಂಬಡಿಕೆಯಾಗಿತ್ತು. ಆಗ ಈ ಯೋಜನೆಗೆ 522 ಕೋಟಿ ರೂಪಾಯಿ ಬಂಡವಾಳ ತೊಡಗಿಸುವುದಾಗಿ ನೈಸ್ ಸಂಸ್ಧೆ ಹೇಳಿಕೊಂಡಿತ್ತು. ಉಳಿದ 1500 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಸಾಲದ ಮೂಲಕ ಯೋಜನೆಗೆ ಹಣ ಹೊಂದಿಸುವ ಭರವಸೆ ನೀಡಲಾಯಿತು.
ಆದರೆ, ನೈಸ್ ಸಂಸ್ಧೆಗೆ ಭೂ ಸ್ವಾಧೀನಕ್ಕಾಗಿ ಕೆಐಎಡಿಬಿಗೆ ನೀಡಲು ಹತ್ತು ಕೋಟಿ ರೂಪಾಯಿ ಹಣ ಇರಲಿಲ್ಲ. ಆಗ ಸರ್ಕಾರದ ಬಳಿ ಇದ್ದ 1,913 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಹತ್ತು ರೂಪಾಯಿಯಂತೆ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡು ಐಸಿಐಸಿ ಬ್ಯಾಂಕ್ ನಲ್ಲಿ ಒತ್ತೆ ಇಟ್ಟು 150 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು.
ಈ 150 ಕೋಟಿ ರೂಪಾಯಿ ಹಣದಲ್ಲಿ ಕೆಐಎಡಿಬಿಗೆ 2003 ರಲ್ಲಿ 10 ಕೋಟಿ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ನೀಡಿತ್ತು. ನಂತರ ಬೆಂಗಳೂರಿನಲ್ಲಿ ಒಟ್ಟಾರೆ 4500 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಯಿತು. ಈ ಭೂಮಿಯನ್ನು ನಂತರ ಕಂಪೆನಿ ಹೆಸರಿಗೆ ನೊಂದಣಿ ಮಾಡಿಸಲಾಯಿತು. ಇದಕ್ಕೆ ಒಂದೇ ಒಂದು ಪೈಸೆಯನ್ನೂ ಸಹ ತೊಡಗಿಸಲಿಲ್ಲ. 1997 ರಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪ್ರತಿ ಎಕರೆಗೆ ರೈತರಿಗೆ ಕೇವಲ 6 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.
ಇದೇ ಭೂಮಿಯನ್ನು ನೈಸ್ ಸಂಸ್ಧೆ ಪ್ರತಿ ಎಕರೆಗೆ 3.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಅಬ್ರಹಾಂ ದೂರಿದ್ದಾರೆ. 147 ಪುಟಗಳ ದೂರು ಹಾಗೂ 3,368 ಪುಟಗಳಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಒಟ್ಟು ಎಂಟು ಬಗೆಯ ಅಕ್ರಮಗಳು ನಡೆದಿದ್ದು, ಯಾವುದೇ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿಲ್ಲ.
ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ ಅವರು ರೈತರ ಪರ ದನಿ ಎತ್ತಿದ್ದರು ಅದರೆ, ನಂತರ ಸಿಎಂ ಪಟ್ಟಕ್ಕೇರಿದ ಮೇಲೆ ಖೇಣಿ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದರು ಎಂದು ಆರೋಪಿಸಲಾಗಿದೆ. ದೂರನ್ನು ಸ್ವೀಕರಿಸಿದ ಲೋಕಾಯುಕ್ತ ವಿಶೇಷ ನ್ಯಾ. ಎನ್ ಕೆ ಸುಧೀಂದ್ರರಾವ್ ಅವರು ಮುಂದಿನ ವಿಚಾರಣೆಯನ್ನು ಗುರುವಾರ(ಜು.19)ಕ್ಕೆ ಮುಂದೂಡಿದರು.












Click it and Unblock the Notifications