ಪತ್ತೆಯಾಗದ ಟೆಕ್ಕಿ ಸಾತ್ವಿಕ್, ಕಾರಣ ಇನ್ನೂ ನಿಗೂಢ

Posted By:
Subscribe to Oneindia Kannada
Techie Sathwik
ಬೆಂಗಳೂರು, ಜು.16: ಬನ್ನೇರುಘಟ್ಟ ರಕ್ಷಿತಾರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ಟೆಕ್ಕಿ ಸಾತ್ವಿಕ್ ಶನಿವಾರ ಸಂಜೆ ನಾಪತ್ತೆಯಾಗಿದ್ದು, ಶೋಧ ಕಾರ್ಯ ಇನ್ನೂ ಮುಂದುವರೆದಿದೆ. ಸೋಮವಾರ ಯಾವುದೇ ಸುಳಿವು ಸಿಗದಿದ್ದರೆ ಮಂಗಳವಾರ(ಜು.17)ದಿಂದ ಹೆಲಿಕಾಪ್ಟರ್ ಬಳಸಿ ವೈಮಾನಿಕ ಶೋಧಕಾರ್ಯ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಹೇಳಿದ್ದಾರೆ.

ಆದರೆ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹೆಲಿ ಕಾಪ್ಟರ್ ಬಳಸಲು ವಿಶೇಷ ಅನುಮತಿ ಅಗತ್ಯವಿರುತ್ತದೆ ಹಾಗೂ ವನ್ಯಮೃಗಗಳಿಗೆ ತೊಂದರೆಯಾಗದಂತೆ ಶೋಧ ಕಾರ್ಯ ನಡೆಸಬೇಕಾಗುತ್ತದೆ.

ಸೆಲ್ ಟ್ರ್ಯಾಕಿಂಗ್ : ಭಾನುವಾರ ಸಂಜೆ ವರೆಗೂ ಸಾತ್ವಿಕ್ ಮೊಬೈಲ್ ರಿಂಗ್ ಆಗುತ್ತಿತ್ತು. ಆಮೇಲೆ ಸ್ವಿಚ್ ಆಫ್ ಆಗಿದೆ. ಹೀಗಾಗಿ ನನ್ನ ಪತ್ನಿ ಇಸ್ರೋ ಉದ್ಯೋಗಿಯಾಗಿದ್ದು, ಅವರ ಸಂಸ್ಥೆಯಿಂದ ಸೆಲ್ ಟ್ರ್ಯಾಕಿಂಗ್ ಬಳಸಿ ಲೋಕೆಷನ್ ಹುಡುಕಾಟ ನಡೆದಿದೆ. ಎರಡು ದಿನ ಕಳೆದಿರುವುದರಿಂದ ನಮ್ಮ ಆತಂಕ ಹೆಚ್ಚಿದೆ. ಸರ್ಕಾರ ಆದಷ್ಟು ಬೇಗ ಏರಿಯಲ್ ಸರ್ವೆಗೆ ಅನುಮತಿ ನೀಡಬೇಕು ಎಂದು ಕಣ್ಮರೆಯಾಗಿರುವ ಸಾತ್ವಿಕ್ ಅವರ ತಂದೆ ದಿನೇಶ್ ಶಾಸ್ತ್ರಿ ಹೇಳಿದ್ದಾರೆ.

ಚಾರಣಕ್ಕೆ ತೆರಳಿದ್ದ ಮೂವರು ಸಾಫ್ಟ್ ವೇರ್ ಇಂಜಿನಿಯರುಗಳಲ್ಲಿ ಓರ್ವ ಟೆಕ್ಕಿ ನಾಪತ್ತೆಯಾಗಿರುವ ಸುದ್ದಿ ತಿಳಿದ ಅರಣ್ಯ ಸಿಬ್ಬಂದಿಗಳು ಮತ್ತು ಪೊಲೀಸರು ಸಾತ್ವಿಕ್ ಹುಡುಕಾಟ ಕಾರ್ಯ ಮುಂದುವರೆಸಿದ್ದಾರೆ. ಆದರೆ, ಸಾತ್ವಿಕ್ ಕಣ್ಮರೆಯಾಗಲು ಕಾರಣವೇನು? ಎರಡು ದಿನವಾದರೂ ಚಿಕ್ಕ ಸುಳಿವು ಸಿಗದಿರುವುದು ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ.

ಸಾತ್ವಿಕ್ ನಾಪತ್ತೆಯಾದ ಸ್ಥಳದಿಂದ ಮೊದಲಿಗೆ ಹುಡುಕಾಟ ಆರಂಭಿಸಿದ ಅರಣ್ಯ ಸಿಬ್ಬಂದಿ, ಪೊಲೀಸ್ ತಂಡ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಮಂಜು ಕವಿದ ವಾತಾವರಣದಲ್ಲಿ ಯಾವುದೇ ಹೆಜ್ಜೆ ಗುರುತಾಗಲಿ, ಸುಳಿವಾಗಲಿ ಸ್ಪಷ್ಟವಾಗಿ ಸಿಕ್ಕಿರಲಿಲ್ಲ. ಭಾನುವಾರ ಸಂಜೆ ವೇಳೆಗೆ ಮಳೆಯಿಂದ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಸಾಮಾನ್ಯವಾಗಿ ಅರಣ್ಯ ಪ್ರದೇಶದಿಂದ ಹೊರ ಬೀಳುವ ಚೆಕ್ ಔಟ್ ನಲ್ಲಿರುತ್ತಿದ್ದ ಕಾವಲುಗಾರ ಕೂಡಾ ಶನಿವಾರ ಸಂಜೆ ಎಲ್ಲಿದ್ದ ಎಂಬುದು ಸ್ಪಷ್ಟವಾಗಿಲ್ಲ.

ವನ್ಯ ಮೃಗಗಳ ದಾಳಿ?: ಶನಿವಾರ ಸಂಜೆ ಕಾಡಿನಿಂದ ಹಿಂತಿರುಗುವಾಗ ಸಾತ್ವಿಕ್ ಮೂತ್ರ ವಿಸರ್ಜನೆಗೆ ಹೋದ ನಂತರ ಕಣ್ಮರೆಯಾಗಿಬಿಟ್ಟ ಎಂದು ಅವರ ಬಾಲ್ಯ ಸ್ನೇಹಿತರು ಹೇಳಿದ್ದಾರೆ. ಸಾತ್ವಿಕ್ ಮೂತ್ರ ವಿಸರ್ಜನೆ ನಂತರ ದಾರಿ ತಪ್ಪಿ ಮತ್ತೆ ಕಾಡಿನೊಳಗೆ ಹೋಗಿರುವ ಸಾಧ್ಯತೆಯಿದೆ. ಇವರುಗಳು ಹಿಂತಿರುಗುವ ಹಾದಿಯಲ್ಲಿ ಅನೇಕ ಕಾಡು ಮೃಗಗಳಿಗೆ. ಅದರಲ್ಲೂ ಆನೆಗಳ ಗುಂಪು ಹೆಚ್ಚಾಗಿ ಆ ಪ್ರದೇಶದಲ್ಲಿ ಕಂಡು ಬರುತ್ತದೆ.

ಆದರೆ, ಸಾತ್ವಿಕ್ ಕಣ್ಮರೆಯಾದ ಸ್ಥಳದಲ್ಲಿ ಯಾವುದೇ ಪ್ರಾಣಿಯ ಹೆಜ್ಜೆ ಗುರುತು ಸಿಕ್ಕಿಲ್ಲ. ಹೀಗಾಗಿ ಸಾತ್ವಿಕ್ ಇನ್ನಷ್ಟು ಕಾಡಿನೊಳಗೆ ಹೋಗಿ ತೊಂದರೆಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆನೆಗಳ ದಾಳಿ ಸಂಭವದ ಜೊತೆಗೆ ಚಿರತೆ ದಾಳಿ ಬಗ್ಗೆ ಕೂಡಾ ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Is all that we see or seem
But a dream within a dream? ಎಂಬ Edgar Allan Poe ನ ವಾಕ್ಯವುಳ್ಳ ಮಂಗಳೂರು ಮೂಲದ ಸಾತ್ವಿಕ್ ಶಾಸ್ತ್ರಿ ಫೇಸ್ ಬುಕ್ ಪುಟದಲ್ಲಿ ಆತನ ಈ ಹಿಂದಿನ ಚಾರಣದ ಚಿತ್ರಗಳು ಕೂಡಾ ವೀಕ್ಷಣೆಗೆ ಲಭ್ಯವಿದೆ.

ಬೆಂಗಳೂರಿನ ಆರ್ ಎನ್ ಎಸ್ ಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಇ ಪದವಿ ಪಡೆದಿದ್ದ ಸಾತ್ವಿಕ್, ಚಾನನ್ ಟೆಕ್ನಾಲಜೀಸ್, ಡಿಜಿಟಲ್ ಏಜ್ ಸ್ಟ್ರಾಟರ್ಜಿಸ್ ಪ್ರೈ, ಲಿ ಸಂಸ್ಥೆ ಉದ್ಯೋಗಿಯಾಗಿದ್ದರು. ವೈಟ ಫೀಲ್ಡ್ ಸಮೀಪದ ಮ್ಯೂ ಸಿಗ್ಮಾ ಕಂಪನಿಗೆ 2010ರಲ್ಲಿ ಉದ್ಯೋಗಕ್ಕೆ ಸೇರಿದ್ದರು.

ವೀಕೇಂಡ್ ಗಳಲ್ಲಿ ಟ್ರೆಕ್ಕಿಂಗ್ ಹೋಗುವುದು ಸಾತ್ವಿಕ್ ಗೆ ಬೀಟಲ್ಸ್ ಸಂಗೀತ ಕೇಳಿದ್ದಷ್ಟೇ ಸುಲಭದ ವಿಷಯವಾಗಿತ್ತು. ಉತ್ತರಾಖಂಡ್ ನ ಹಿಮಾಲಯದ ಶ್ರೇಣಿಗಳಲ್ಲಿ ಸುತ್ತಾಡಿ ಬಂದಿರುವ ಅನುಭವವಿದ್ದ ಸಾತ್ವಿಕ್ ಕಣ್ಮರೆ ಅವರ್ ಪೋಷಕರ ದುಗುಡವನ್ನು ಹೆಚ್ಚಿಸಿದೆ.

ಎರಡು ದಿನದಿಂದ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿ ನಾಗರಾಜ್ ಜೊತೆ ಸಾತ್ವಿಕ್ ಪೋಷಕರಾದ ದಿನೇಶ್ ಶಾಸ್ರ್ತಿ ಹಾಗೂ ಉಷಾ ಅವರು ನಿರಂತರ ಸಂಪರ್ಕದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The mysterious disappearance of Satwik Shastri at the Bannerghatta National Park has set off a massive search by family, friends, police and forest department officials. The 24-year-old techie was reported missing by two friends on Saturday evening. SP police Prakash said Helicopters may be used for searching
Please Wait while comments are loading...