ಕಾಮುಕರು ನನ್ನ ಕಾಲೆಳೆದಿದ್ದಾರೆ: ಗೋಪಾಲಕೃಷ್ಣ

Posted By:
Subscribe to Oneindia Kannada
caste-politics-betray-sagar-bjp-mla-gopalakrishna
ಬೆಂಗಳೂರು, ಜುಲೈ 14: ಸಾಗರದ ಬೇಳೂರು ಗೋಪಾಲಕೃಷ್ಣ ಅವರು 'ಕಾಮ'ಬಾಣವನ್ನು ಭರ್ಜರಿಯಾಗಿಯೇ ಬಿಟ್ಟಿದ್ದಾರೆ. ಅದು ತಮ್ಮದೇ ಜಿಲ್ಲೆಯಾದ ಶಿವಮೊಗ್ಗದಲ್ಲಿ ನಾಟಿದೆ. ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಶ್ಯಾನೆ ಬೇಜಾರು ಮಾಡಿಕೊಂಡಿರುವ ಸಚಿವ ಮಹತ್ವಾಕಾಂಕ್ಷಿ ಗೋಪಾಲಕೃಷ್ಣ ಅವರು ಶಾಸಕ ಗಾಲಿ ಕರುಣಾಕರ ರೆಡ್ಡಿ ಸಾರಥ್ಯದಲ್ಲಿ ಸಿಡಿದೆದ್ದಿದ್ದಾರೆ.

ಇಂದು ಬೆಳಗ್ಗೆ ಕರುಣಾಕರ ರೆಡ್ಡಿ ಅವರ ನಿವಾಸದಲ್ಲಿ ಸಭೆ ಸೇರಿದ್ದ ಬಂಡಾಯ ಶಾಸಕರು ಗೌಪ್ಯ ಸ್ಥಳಕ್ಕೆ location shift ಮಾಡಿದ್ದು, ಇದೇ 19ರಂದು ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಸಚಿವ ಸ್ಥಾನದ ಆಸೆ ತೋರಿಸಿ, ನಿರಾಸೆಗೊಳಿಸಿರುವುದಕ್ಕೆ ಕರಾವಳಿಯಾದ್ಯಂತ ಭಾರಿ ಪ್ರತಿಭಟನೆಗಳು ಮುಂದುವರಿದಿವೆ. ತಮ್ಮ ನಾಯಕ ಶ್ರೀನಿವಾಸ ಶೆಟ್ಟಿಗೆ ಅನ್ಯಾಯವಾಗಿರುವುದು ಕಲ್ಲಡ್ಕ ಪ್ರಭಾಕರ್ ಭಟ್ಟರಿಂದ ಎಂದು ನಿರ್ಧರಿಸಿರುವ ಹಾಲಾಡಿ ಬೆಂಬಲಿಗರು ಭಟ್ಟರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ನಿನ್ನೆಯಷ್ಟೇ 'ಶೆಟ್ಟರ್ ಸಂಪುಟದಲ್ಲಿ ಅಪರಾಧಿಗಳು ಮನೆ ಮಾಡಿಕೊಂಡಿದ್ದಾರೆ. ಅವರೆಲ್ಲ ಪರಪ್ಪನ ಅಗ್ರಹಾರ ಜೈಲಿನತ್ತ ಹೋಗುತ್ತಿದ್ದಂತೆ ನಮಗೆ ಅವಕಾಶ ಸಿಗಲಿದೆ' ಎಂದು ಅಪಾರ ಆಶಾಭಾವ ವ್ಯಕ್ತಪಡಿಸಿದ್ದ ಮೂಡಿಗೆರೆ ಜನನಾಯಕ ಎಂಪಿ ಕುಮಾರಸ್ವಾಮಿ ಅವರೂ ಕರುಣಾಕರ ರೆಡ್ಡಿ ಬಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಉತ್ತೇಜಿತರಾಗಿರುವ ಕರುಣಾಕರ ಅವರು ತಮ್ಮೊಂದಿಗೆ ಒಟ್ಟು 21 ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ.

ಬೇಳೂರು ಬಾಣ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಬೇಳೂರು ಗೋಪಾಲಕೃಷ್ಣ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, 'ಹೆಸರು ಹೇಳಕ್ಕೂ ಲಾಯಕ್ಕಲ್ಲದ ಕಾಮುಕ ನಾಯಕರಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿದೆ. ಸಚಿವ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ನಾನು ಪ್ರಭಾವಿ ನಾಯಕನಾಗಿ ಬೆಳೆಯುತ್ತೇನೆ ಎಂಬ ದಿಗಿಲಿಗೆ ಬಿದ್ದು, ಕಾಮುಕ ನಾಯಕರು ನನ್ನ ಕಾಲೆಳೆದಿದ್ದಾರೆ. ಆದರೆ ಅವರಿಗೂ ಗೊತ್ತು ಈ ಬೇಳೂರಿಗೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಅಂತ. ನಾನು ನನ್ನದೇ ಮಾರ್ಗದಲ್ಲಿ ಕಾರ್ಯಸಾಧಿಸಿಕೊಳ್ಳುವೆ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಪಕ್ಷದಲ್ಲಿನ ಮೀರ್ ಸಾಧಕರು ನನ್ನ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ. ಅವರಿಗೆ ತಕ್ಕ ಶಾಸ್ತಿಯಾಗಲಿದೆ' ಎಂದೂ ಬೇಳೂರು ಗೋಪಾಲಕೃಷ್ಣ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಮಾ.ಮು. ಯಡಿಯೂರಪ್ಪ ಬಣದ ಕೋಟಾದಲ್ಲಿ ಬಿಜೆ ಪುಟ್ಟಸ್ವಾಮಿ ಹಾಗೂ ಶೃಂಗೇರಿಯ ಜೀವರಾಜ್‌ ಅವರಿಗೆ ಮಂತ್ರಿಗಿರಿ ಕೊಟ್ಟಿದ್ದಕ್ಕೆ ಈ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಜತೆಗೆ ಲಕ್ಷ್ಮಣ ಸವದಿ, ಸಿಸಿ ಪಾಟೀಲ್‌, ಕರಡಿ ಸಂಗಣ್ಣ, ಸುರೇಶ್‌ಗೌಡ ಮತ್ತಿತರ ಬೆಂಬಲಿಗ ಶಾಸಕರು ಯಡಿಯೂರಪ್ಪ ಅವರ ನಿಗೂಢ ಕರಾಮತ್ತಿನ ಬಗ್ಗೆ ಬೇಸರಗೊಂಡಿದ್ದಾರೆ.

ಪುಟ್ಟಸ್ವಾಮಿ ಅವರನ್ನು ಕಳೆದ ತಿಂಗಳಷ್ಟೇ ವಿಧಾನಪರಿಷತ್ತಿಗೆ ನೇಮಕ ಮಾಡಲಾಗಿತ್ತು. ವಾಸ್ತವವಾಗಿ ಪುಟ್ಟಸ್ವಾಮಿ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಲು ಬಿಜೆಪಿಯ ಯಾವ ನಾಯಕರಿಗೂ ಒಲವಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಪಟ್ಟು ಹಿಡಿದು ಪಕ್ಷದ ಇತರ ನಾಯಕರನ್ನು ಒಪ್ಪಿಸಿದ್ದರು. ಅಲ್ಲಿಗೆ ಮುಗಿಯಿತು ಎಂದುಕೊಂಡಿದ್ದಿವಿ. ಆದರೆ ಇದೇನಿದು ಈಗ ಸಚಿವ ಸ್ಥಾನವನ್ನೂ ದಯಪಾಲಿಸಲಾಗಿದೆ ಎಂದೇ ಈ ಅತೃಪ್ತ ಶಾಸಕರು ಗುಟುರು ಹಾಕಿದ್ದಾರೆ.

ಇದೇ ವೇಳೆ ಜೀವರಾಜ್‌ ಬಗ್ಗೆಯೂ ಯಡಿಯೂರಪ್ಪ ಬೆಂಬಲಿಗ ಶಾಸಕರು ಕಿಡಿಕಾರಿದ್ದಾರೆ. ಕೊನೆಯ ಕ್ಷಣದವರೆಗೂ ಸದಾನಂದ ಗೌಡರ ಪಾಳೆಯದಲ್ಲಿದ್ದ ಜೀವರಾಜ್‌ ಅವರು ಮಂತ್ರಿಯಾಗುವುದಕ್ಕಾಗಿಯೇ ಯಡಿಯೂರಪ್ಪ ಬಣ ಸೇರಿಕೊಂಡಿದ್ದರು. ಅಂಥವರಿಗೆ ಮಂತ್ರಿಗಿರಿ ನೀಡುವ ಉದ್ದೇಶ ಏನು?

ವಾಸ್ತವವಾಗಿ, ಚಿಕ್ಕಮಗಳೂರು ಜಿಲ್ಲೆಯ ಒಂದೇ ಸಮುದಾಯ ಇಬ್ಬರನ್ನು ಮಂತ್ರಿಗಳನ್ನಾಗಿ ಮಾಡುವ ಅವಶ್ಯಕತೆಯೇ ಇರಲಿಲ್ಲ. ಆಗಾಗ ತಮ್ಮ ವಿರುದ್ಧ ಹರಿಹಾಯುವ ರವಿಯನ್ನು ಹಣಿಯುವ ಉದ್ದೇಶದಿಂದಲೇ ಜೀವರಾಜ್‌ ಅವರನ್ನು ಯಡಿಯೂರಪ್ಪ ಬೆಂಬಲಿಸಿದ್ದಾರೆ ಎಂದು ಶಾಸಕರೊಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP crisis: Even as the Mudigere BJP MLA MP Kumaraswamy waits for one or two ministers to go jail to get berth in Jagadish Shettar cabinet Sagar MLA, Belur Gopalakrishna has come down heavily on 'rapist leader' who missed him the bus.
Please Wait while comments are loading...