ಅಬ್ಬಾ ಸದ್ಯ! ಇನ್ನೂ ನಾಲ್ಕು ದಿನಾ ಮಳೆ ಬರುತ್ತೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 14: ರಾಜಧಾನಿಯ ಜನ ಒಂದಷ್ಟು ಪುಳುಕಿತರಾಗಿದ್ದಾರೆ. ಧರೆಯಿಂಗಿ ಬಾಣಲಿಯಲ್ಲಿ ಬೇಯುತ್ತಿದ್ದ ಜನಕ್ಕೆ ವರುಣರಾಯ ಒಂದಷ್ಟು ಮಳೆ ಸಿಂಚನಗೈದಿದ್ದಾನೆ. ನಿನ್ನೆ ಶುಕ್ರವಾರ ಸ್ವಲ್ಪ ಜೋರಾಗಿಯೇ ಮಳೆಯಾಗಿದೆ. ಅಷ್ಟೇ ಅಲ್ಲ. ಇನ್ನೂ ಮೂರ್ನಾಲ್ಕು ದಿನಾ ಹೀಗೇ ಮಳೆ ಬೀಳುತ್ತಂತೆ!

bangalore-monsoon-rains-july-13-creates-havoc

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜುಲೈ 17 ರವರೆಗೂ ಒಂದಷ್ಟು ಮಳೆಯಾಗಲಿದೆ. ಶುಕ್ರವಾರ ಸಂಜೆಯಾಗುತ್ತಿದ್ದಂತೆ ಮುಂಗಾರು ಮಳೆಯ ಸಿಂಚನವಾಯ್ತು. ಜನ ಆರಂಭದಲ್ಲಿ

ಎಂದಿನಂತೆ 'ಆಷಾಢದ ಗಾಳಿ ಮಳೆ' ಇರಬಹುದು ಎಂದು ತುಸು ಮುನಿಸು ತೋರಿಸಿದರು. ಆದರೆ ಕೆಲವೇ ಕ್ಷಣಗಳಲ್ಲಿ ವಾತಾವರಣವೇ ಬದಲಾಯ್ತು. ಧೋ ಎಂದು ಮಳೆಯಾಗತೊಡಗಿತು. ಲಾಲ್ ಬಾಗ್ ಮಳೆ ಮಾಪನ ಕೇಂದ್ರದಲ್ಲಿ 3.2 ಸೆಂಮಿ ಮಳೆ ದಾಖಲಾಗಿದ್ದರೆ ಬೇಗೂರು, ಆನೇಕಲ್ ಮತ್ತು ಸರ್ಜಾಪುರದಲ್ಲಿ 10 ಮಿಮೀ ಮಳೆಯಾಗಿದೆ.

ಮಳೆ ವೇಳೆ: 'ಮಳೆರಾಯನಿಗೆ ಯಾರು ಸಮಯ ನಿಗದಿಪಡಿಸಿದ್ದಾರೋ ಆ ವರುಣನೇ ಹೇಳಬೇಕು. ಆದರೆ ಖರಾರುವಕ್ಕಾಗಿ ನಾವು ಆಫೀಸುಗಳಿಂದ ಮನೆಯತ್ತ ವಾಪಸ್ ಹೆಜ್ಜೆ ಹಾಕುತ್ತಿದ್ದಂತೆ ಸಂಜೆ ವೇಳೆಗೆ ಥೈ! ಅಂತ ಹಾಜರಾಗಿಬಿಡುತ್ತಾನೆ ಈ ಮಳೆರಾಯ' ಎಂದವರು ಜಯನಗರದ ಶಾಂತ.

ಸರಕಾರಿ ಸಂಸ್ಥೆಯೊಂದರಲ್ಲಿ 10 ವರ್ಷಗಳಿಂದ ಉದ್ಯೋಗಿಯಾಗಿರುವ ಅವರಿಗೆ ಮಳೆ ಹೀಗೆ ಕರಾರುವಕ್ಕಾಗಿ ಸಂಜೆ ಆಫೀಸಿನಿಂದ ವಾಪಸಾಗುವಾಗ ಮತ್ತು ಬೆಳಗ್ಗೆಯೂ ಅಷ್ಟೇ, ಇನ್ನೇನು ಆಫೀಸು ತಲುಪಿಕೊಳ್ಳಬೇಕು ಅನ್ನುವಷ್ಟರಲ್ಲಿ ಮೇಲಿಂದ ಧೋ ಎಂದು ಮಳೆಯಾಗುವುದು ಅವರಿಗೆ ನಿಜಕ್ಕೂ ಸೋಜಿಗದ ವಿಷಯವಂತೆ. ಮಳೆರಾಯನ Time Sense ಮೆಚ್ಚುತ್ತಾ, ಸದ್ಯ ಮಳೆಯಾಗಲಪ್ಪಾ ಅಂತ ಅವರು ಆಶಿಸುತ್ತಾರೆ.

ವಾಡಿಕೆಯಂತೆ, ನಿನ್ನೆ ಬಿದ್ದ ಮಳೆ ಅಲ್ಲಲ್ಲಿ ಅವಾಂತರ ಸೃಷ್ಟಿಸಿದೆ. ರಸ್ತೆ ಮೇಲೆ ಪ್ರವಾಹೋಪಾದಿ ನೀರು. ಅಲ್ಲಲ್ಲಿ ಧರೆಗುರುಳಿದ ವೃಕ್ಷ ಸಂಕುಲ. ಅಲ್ಲಲ್ಲಿ ಜಾಮ್ ಆದ ವಾಹನಗಳು. ಅವುಗಳಿಂದ ಕೊನೆಗೆ ಮಹಾ ಟ್ರಾಫಿಕ್ ಜಾಮ್. ಈ ಸಣ್ಣ ಮಳೆಗೆ ದೊಡ್ಡ ಮಟ್ಟದ ಅವಾಂತರ. 'ಹೆಂಗೂ ಮುಂಗಾರು ಸರಿಯಾಗಿ ಆಗಲಿಲ್ಲ. ಹಾಗಾಗಿ ಮಳೆಗಾಲ ಭರ್ಜರಿಯಾಗಿರುತ್ತದೆ' ಎಂದು ಜನ ಈಗಾಗಲೇ ಆಶಿಸುತ್ತಿದ್ದಾರೆ. ಸೋ, ಬಿಬಿಎಂಪಿ ಈಗಿನಿಂದಲೇ ಎಚ್ಚೆತ್ತುಕೊಳ್ಳುವುದು ಉಚಿತ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore monsoon rains heavily on july 13 creates havoc.
Please Wait while comments are loading...