ನಾನ್ ಯಡಿಯೂರಪ್ಪರಿಂದ ದೂರ ಆಗಿಲ್ರೀ: ಶೋಭಾ

ಮುಖ್ಯಮಂತ್ರಿ ಸದಾನಂದರ ಪದಚ್ಯುತಿ ವೇಳೆ ಕಾಣೆಯಾಗಿದ್ದ ಶೋಭಾ ಮೇಡಂ ಅವರು ನಿನ್ನೆ ಇಡೀ ದಿನ ಪಕ್ಷದ ಚಟುವಟಿಕೆಗಳಲ್ಲಿ ಎಂದಿನಂತೆ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2 ದಿನಗಳ ಹಿಂದೆ 'ತಾನೂ ಡಿಸಿಎಂ ಆಗುವೆ' ಎಂದು ದೂರದಿಂದಲೇ ಸುದ್ದಿ ಮುಟ್ಟಿಸಿದ್ದ ಮೇಡಂ, ನಿನ್ನೆಯೂ ಅದೇ ವರಾತ ತೆಗೆದಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಮಧ್ಯೆ ಆತ್ಮೀಯವಾಗಿ ಪತ್ರಕರ್ತರೊಂದಿಗೆ ಮಾತಿಗಿಳಿದ ಶೋಭಾ ಮೇಡಂ, ತಾನು ಮಾನಸ ಸರೋವರಕ್ಕೆ ಹೋಗಿದ್ದಾಗಿ ಸ್ಪಷ್ಟಪಡಿಸಿದರು. ಪೂರ್ವನಿಗದಿಯಂತೆ ಶೋಭಾ ಜುಲೈ 12ರಂದು ವಾಪಸಾಗಬೇಕಿತ್ತಾದರೂ ರಾಜ್ಯ ಬಿಜೆಪಿಯಲ್ಲಿ ಎದ್ದಿದ್ದ ಕೋಲಾಹಲ ಅವರನ್ನು ಜಗ್ಗಿ ಎಳೆದಿದೆ.
ಹಾಗಾಗಿ ನಿನ್ನೆಯ ಶಾಸಕಾಂಗ ಪಕ್ಷದ ಸಭೆಯಲ್ಲಿ ತಾನಿಲ್ಲದಿದ್ದರೆ ಯಡಿಯೂರಪ್ಪ ಬಣಕ್ಕೆ ಏನಾಗುತ್ತದೋ ಎಂದು ಗಾಬರಿಗೆ ಬಿದ್ದ ಶೋಭಾ ಮೇಡಂ, ಮಾನಸ ಸರೋವರದ ತಿಳಿ ವಾತಾವರಣಕ್ಕೆ ಗುಡ್ ಬೈ ಹೇಳಿ, ಎದ್ನೋ ಬಿದ್ನೋ ಎಂದು ವಾಪಸಾಗಿದ್ದಾರೆ.
ಬಂದಬಂದವರೆ 'ಯಾರ್ರಿ ಹೇಳಿದ್ದು, ನಾನು ಯಡಿಯೂರಪ್ಪ ಅವರನ್ನು ಬಿಟ್ಟಿದ್ದೀನಿ ಅಂತಾ!?' ಅಂತಲೇ ಹುಸಿ ಮುನಿಸು ತೋರಿಸಿದ್ದಾರೆ. 'ನಾನು ಎಂದೆಂದಿಗೂ ಅವರ ಕೈಬಿಡುವುದಿಲ್ಲ. ನಿಮ್ಗೇ ಗೊತ್ತಿಲ್ವಾ ಅವರು ನನ್ನ ರಾಜಕೀಯ ಗುರುಗಳು ಕಣ್ರೀ. ರಾಜಕೀಯವಾಗಿ ಅವರ ಹೆಗಲಿಗೆ ಹೆಗಲು ಕೊಟ್ಟು, ದೃಢವಾಗಿ ನಿಲ್ಲುತ್ತೇನೆ' ಎಂದು ಸ್ಪಷ್ಟಪಡಿಸಿದರು.
'ಯಡಿಯೂರಪ್ಪ ಅವರ ಜತೆ ಜಗಳ ಮಾಡಿಕೊಂಡಿದ್ದೇನೆ ಎಂದಾಗಲಿ. ಅವರಿಂದ ದೂರವಾಗಿದ್ದೇನೆ ಎಂದಾಗಲಿ ಯಾವುದೂ ಇಲ್ಲ. ಅದೆಲ್ಲ ನಿಮ್ಮದೇ ಊಹಾಪೋಹ. ಏನೋ ಹೀಗೇ ನಾಲ್ಕು ದಿನ ಪ್ರಶಾಂತವಾಗಿರೋಣ ಎಂದು ಹೊರಹೋದರೆ... ಹೀಗೆಲ್ಲ ಸುಳ್ಳು ಸುದ್ದಿ ಹಬ್ಬಿಸೋದಾ?' ಎಂದು ಮೇಡಂ ಶೋಭಾ ಲೈಟಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪತ್ರಕರ್ತರು ಸೈಲೆಂಟಾಗಿ ಜಾಗ ಖಾಲಿ ಮಾಡಿದರು.












Click it and Unblock the Notifications